ಧಾರವಾಡ: ಶಹರ ಹಾಗೂ ಗ್ರಾಮೀಣ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಂದ ಶುಕ್ರವಾರ ಬೈಕ್‌ರ್ಯಾಲಿ ಮೂಲಕ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಗರದ ಕಲಾ ಭವನ ಆವರಣದಲ್ಲಿ ಡಿಸಿ ದೀಪಾ ಚೋಳನ್ ಬೈಕ್‌ರ್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ| ಬಿ.ಸಿ. ಸತೀಶ ಅವರು, ಶಿಕ್ಷಕರೊಂದಿಗೆ ಬೈಕ್ ಚಲಾಯಿಸಿ, ರ್ಯಾಲಿಯಲ್ಲಿ ಪಾಲ್ಗೊಂಡರು. ಈ ರ್ಯಾಲಿಯು ಸುಭಾಷ ರಸ್ತೆ ಮಾರ್ಕೆಟ್, ಹಳೇ ಡಿ.ಎಸ್.ಪಿ. ವೃತ್ತ, ಸಪ್ತಾಪುರ ಬಾವಿ, ಕರ್ನಾಟಕ ಕಾಲೇಜು, ಪ್ರಧಾನ ಅಂಚೆ ಕಚೇರಿ, ಕೋರ್ಟ್ ವೃತ್ತದ ಮೂಲಕ ಕಲಾಭವನಕ್ಕೆ ಬಂದು ಮುಕ್ತಾಯಗೊಂಡಿತು. ಸುಮಾರು 250ಕ್ಕೂ ಹೆಚ್ಚು ಬೈಕ್‌ಗಳ ಮೂಲಕ ಶಿಕ್ಷಕರು ಸಂಚರಿಸಿ ಮತದಾನ ಮಾಡುವ ಕುರಿತು ಜಾಗೃತಿ ಮೂಡಿಸಿದರು.
ಇಂದು ಮತ ಜಾಗೃತಿ ರ್ಯಾಲಿ
ಹುಬ್ಬಳ್ಳಿ: ಜೈಂಟ್ಸ್ ವೆಲ್ಫೆರ್ ಫೌಂಡೇಶನ್ ವತಿಯಿಂದ ಮತದಾನ ಜಾಗೃತಿ ರ್ಯಾಲಿ ಏ.13ರಂದು ಬೆಳಿಗ್ಗೆ 10:30ಗಂಟೆಗೆ ಇಲ್ಲಿನ ದುರ್ಗದ ಬಯಲಿನಿಂದ ಆರಂಭವಾಗಲಿದೆ. ಜಾಗೃತ ರ್ಯಾಲಿ ದುರ್ಗದ ಬಯಲಿನ ಮೂಲಕ ಬ್ರಾಡ್‌ವೇ, ಕೊಪ್ಪಿಕರ್ ರಸ್ತೆ, ವಿಕ್ಟೋರಿಯಾ ರಸ್ತೆ, ದಾಜಿಬಾನ ಪೇಟೆ, ಚನ್ನಮ್ಮ ವೃತ್ತಕ್ಕೆ ಆಗಮಿಸಿ ಮುಕ್ತಾಗೊಳ್ಳಲಿದೆ. ಈ ರ್ಯಾಲಿನಲ್ಲಿ ಮಹಾನಗರದ ಎಲ್ಲಾ ಗುಂಪುಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಫೌಂಡೇಶನ್ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.