ಸಾಗರ: ತಾಲೂಕಿನ ಕಾರ್ಗಲ್, ಜೋಗ್, ಲಿಂಗನಮಕ್ಕಿ ಸುತ್ತಮುತ್ತಲಿನ ಪ್ರದೇಶದ ನಾಗರೀಕರು ಹೊಟ್ಟೆನೋವು, ವಾಂತಿ, ಬೇಧಿ ಎಂದು ಅಸ್ವಸ್ಥಗೊಂಡು ಶುಕ್ರವಾರ ಕಾರ್ಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ.
ಜೋಗದಲ್ಲಿ ಫಾಲ್ಸ್ ಜೆಎಂಎ ಕೆಲಸಕ್ಕೆ ಬಂದಿದ್ದ ಸುಮಾರು ೧೫೦ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಕಾಳಮಂಜಿ, ಫಾತಿಮಾಪುರ, ಕಾರ್ಗಲ್, ಲಿಂಗನಮಕ್ಕಿ ಸೇರಿದಂತೆ ಅಕ್ಕಪಕ್ಕದ ಗ್ರಾಮದ ನಿವಾಸಿಗಳು ದಿಢೀರ್ ಅಸ್ವಸ್ಥಗೊಂಡಿದ್ದಾರೆ. ನಿವಾಸಿಗಳು ಅಸ್ವಸ್ಥಗೊಳ್ಳಲು ಕಾರಣ ತಿಳಿದು ಬಂದಿಲ್ಲ.
ಕಾರ್ಗಲ್ ಆಸ್ಪತ್ರೆಯಲ್ಲಿ ಸ್ಥಳಾಭಾವ ಇರುವ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡು ಬಂದವರಿಗೆ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿದೆ. ಸದ್ಯ ಕಾರ್ಗಲ್ ಆಸ್ಪತ್ರೆಯಲ್ಲಿ 20ಕ್ಕೂ ಹೆಚ್ಚು ಜನರು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಲಶುದ್ಧೀಕರಣ ಘಟಕದಿಂದ ಪೂರೈಕೆ ಮಾಡುತ್ತಿರುವ ನೀರು ಸೇವಿಸಿ ಸ್ಥಳೀಯರು ಅಸ್ವಸ್ಥಗೊಂಡಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆಯಿಂದಲೇ ಜನರು ಸರದಿ ಸಾಲಿನಲ್ಲಿ ಖಾಸಗಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಆಸ್ಪತ್ರೆಗೆ ತಪಾಸಣೆಗೆ ಬಂದ ಎಲ್ಲ ರೋಗಿಗಳಿಗೂ ವಾಂತಿ ಬೇಧಿ ಮತ್ತು ಹೊಟ್ಟೆ ನೋವು, ತಲೆನೋವು, ಜ್ವರ ಕಾಣಿಸಿಕೊಂಡಿತ್ತು. ಇದಕ್ಕೆ ಪೂರಕ ಚಿಕಿತ್ಸೆಯನ್ನು ವೈದ್ಯರು ನೀಡಿದ್ದು, ಕಾರ್ಗಲ್ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಇಬ್ಬರು ವೈದ್ಯರನ್ನು ನೇಮಕ ಮಾಡಿದ್ದಾರೆ.
ಆರೋಗ್ಯಾಧಿಕಾರಿ ಭೇಟಿ
ವಿಷಯ ತಿಳಿದ ತಕ್ಷಣ ತಾಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್. ಆಸ್ಪತ್ರೆ ಭೇಟಿ ನೀಡಿ ಒಳರೋಗಿಗಳ ಆರೋಗ್ಯ ವಿಚಾರಿಸಿದರು. ನಂತರ ಕಾರ್ಗಲ್‌ಗೆ ನೀರು ಪೂರೈಕೆ ಮಾಡುತ್ತಿದ್ದ ಜಲಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಯೋಗಾಲಯಕ್ಕೆ ಕಳಿಸಲು ನೀರಿನ ಸ್ಯಾಂಪಲ್ ಪಡೆದರು.
ನಂತರ ಮಾತನಾಡಿದ ಅವರು, ಕಾರ್ಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಪರಿಶೀಲಿಸಿದ್ದು ಎಲ್ಲರೂ ಆರಾಮಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ಹೆಚ್ಚುವರಿಯಾಗಿ ಇಬ್ಬರು ವೈದ್ಯರನ್ನು ನಿಯೋಜಿಸಿದ್ದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಚಿಕತ್ಸೆ ಪಡೆಯುತ್ತಿರುವವರಿಗೆ ಸಮಸ್ಯೆಯಾದರೆ ಅವರನ್ನು ಸಾಗರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಗೆ ಹಾಲಪ್ಪ ಭೇಟಿ
ವಿಷಯ ತಿಳಿದ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಶನಿವಾರ ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಒಳರೋಗಿಗಳಾಗಿ ದಾಖಲಾಗಿದ್ದವರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಏಕಾಏಕಿ ಕೆಲವರು ಅಸ್ವಸ್ಥಗೊಳ್ಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ಜಿಲ್ಲೆಯ ಎರಡು ಮೂರು ಕಡೆಗಳಲ್ಲಿ ಇಂತಹದ್ದೇ ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಜ್ಞರ ತಂಡದಿಂದ ಪರಿಶೀಲನೆ ನಡೆಸಲು ತಿಳಿಸಲಾಗಿದೆ. ಆಸ್ಪತ್ರೆಯಲ್ಲಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕೆಲವರು ಮದುವೆ ಮನೆಗೆ ಹೋಗಿದ್ದಾರೆ. ಇನ್ನು ಕೆಲವರು ಮನೆಯಲ್ಲಿದ್ದವರು ಇದ್ದಾರೆ. ಅಂತಹ ಕೆಲವರಲ್ಲಿ ದಿಢೀರ್ ಆರೋಗ್ಯ ಏರುಪೇರಾಗಿದೆ. ಶನಿವಾರ ಸಹ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮೂರು ಜನರನ್ನು ಸಾಗರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ. ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಹೆಚ್ಚುವರಿ ವೈದ್ಯರನ್ನು ಕಾರ್ಗಲ್ ಆಸ್ಪತ್ರೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಾಸಂತಿ ರಮೇಶ್, ಉಪಾಧ್ಯಕ್ಷ ಮಂಜುನಾಥ್ ಪಿ., ಡಾ. ವೀರಭದ್ರಪ್ಪ, ಪಟ್ಟಣ ಪಂಚಾಯ್ತಿ ಸದಸ್ಯರು, ಬಿಜೆಪಿ ಪ್ರಮುಖರು ಹಾಜರಿದ್ದರು.
ಪ್ರಸಾದ ಸೇವಿಸಿದವರೂ ಅಸ್ವಸ್ಥ
ವಿನೋಬಾ ನಗರದಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವರ್ಧಂತಿ ಉತ್ಸವದ ನಿಮಿತ್ತ ವಿತರಿಸಲಾಗಿದ್ದ ಪ್ರಸಾದ ಸೇವಿಸಿದ 20 ಕ್ಕೂ ಹೆಚ್ಚು ಜನರಲ್ಲಿ ಶನಿವಾರ ಹೊಟ್ಟೆನೋವು, ಭೇದಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಾರ್ಗಲ್‌ನ ಸುತ್ತಮುತ್ತ ವಾಂತಿ ಭೇದಿ ಪ್ರಕರಣ ಸಂಭವಿಸಿದ ಬೆನ್ನಲ್ಲೇ ಸಾಗರ ನಗರದಲ್ಲಿಯೂ ಕಾಣಿಸಿಕೊಂಡಿರುವುದು ಜನರನ್ನು ತೀವ್ರ ಆತಂಕಿತರನ್ನಾಗಿಸಿದೆ.
ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ವರ್ಧಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಸುಪಾಸಿನ ಹಾಗೂ ನಗರ ವ್ಯಾಪ್ತಿಯ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾತ್ರಿಯ ವಿಶೇಷ ಪೂಜೆ ನಂತರ ದೇವಸ್ಥಾನದ ವತಿಯಿಂದ ಪ್ರಸಾದ ವಿತರಿಸಲಾಗಿತ್ತು. ಪ್ರಸಾದ ಸ್ವೀಕರಿಸಿದ್ದ ಕೆಲವರಲ್ಲಿ ಏಕಾಏಕಿ ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
ಈ ಕುರಿತು ಸುಧಾ ಮಾತನಾಡಿ, ಶುಕ್ರವಾರ ರಾತ್ರಿ ದೇವಸ್ಥಾನದಲ್ಲಿನ ವಾರ್ಷಿಕೋತ್ಸವ ಪ್ರಯುಕ್ತ ಪ್ರಸಾದ ಭೋಜನ ಸ್ವೀಕರಿಸಿದ ನಂತರ ರಾತ್ರಿ 2 ಗಂಟೆ ಸಮಯದಲ್ಲಿ ನನ್ನ ಮಗ ಹಾಗೂ ಮಗಳಿಗೆ ಹೊಟ್ಟೆ ನೋವು, ಬೇಧಿ ಆರಂಭವಾಗಿದೆ. ಕೆಲವರು ಇಂತಹ ತೊಂದರೆ ಅನುಭವಿಸಿದ್ದಾರೆ. ನನಗೂ ಸಹ ಹೊಟ್ಟೆಯಲ್ಲಿ ನೋವಿದೆ, ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಪ್ರಸಾದ ಸೇವಿಸಿದ ಕೆಲವರಿಗೆ ರಾತ್ರಿ ವೇಳೆಯಲ್ಲಿಯೇ ಹೊಟ್ಟೆನೋವು ಮತ್ತು ಭೇದಿ ಕಾಣಿಸಿಕೊಂಡಿದೆ. ಕೆಲವರು ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಉಪವಿಭಾಗೀಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ. ಸಹನಾ(21), ಕಿರಣ್(19), ಸುಧಾ(
46) ಮತ್ತು ಈರಮ್ಮ(
64) ಎಂಬುವವರು ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆದುಕೊಳ್ಳುತ್ತಿದ್ದು, ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.