ಬೆಂಗಳೂರು: ವೋಲ್ವೋ ಬಸ್‌ಗಳು ಗರಿಷ್ಠ ಪ್ರಮಾಣದ ದರ ಇಳಿಕೆಯ ಮೂಲಕ ಹೆಚ್ಚು ಪ್ರಯಾಣಿಕರ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಐಟಿ ಕಾರಿಡಾರ್, ವಿಮಾನ ನಿಲ್ದಾಣಗಳಂತಹ ಮಾರ್ಗಗಳಲ್ಲಿ ಸಂಚರಿಸುವ ವೋಲ್ವೋ ಬಸ್‌ಗಳಲ್ಲಿ ಸಾಮಾನ್ಯವಾಗಿ ಟೆಕ್ಕಿಗಳು ಸೇರಿದಂತೆ ಮೇಲ್ಮಧ್ಯಮ ವರ್ಗ ಹೆಚ್ಚಾಗಿ ಪ್ರಯಾಣಿಸುತ್ತಿತ್ತು. ಆದರೆ, ಒಟ್ಟಾರೆ ಶೇ. 50 ಪ್ರಯಾಣ ದರ ಕಡಿತಗೊಂಡಿರುವುದರಿಂದ ಮಧ್ಯಮ-ಕೆಳ ಮಧ್ಯಮ ವರ್ಗವೂ ಈ ಹೈಟೆಕ್ ಬಸ್‌ಗಳಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ.
ಸಾಮಾನ್ಯ ಬಸ್‌ಗಳಿಗೆ ಹೋಲಿಸಿದರೆ ವೋಲ್ವೋ ಬಸ್‌ಗಳ ದರ ಈಗ 5ರಿಂದ 10 ರೂ. ಮಾತ್ರ ಅಂತರ ಇದೆ. ಈ ಹವಾನಿಯಂತ್ರಿತ ಬಸ್‌ಗಳಲ್ಲಿ ಜನದಟ್ಟಣೆ ಕೂಡ ಕಡಿಮೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಈಮಾದರಿಯ ಬಸ್‌ಗಳು ಹೆಚ್ಚು ಹತ್ತಿರವಾಗುತ್ತಿವೆ.ಉದಾಹರಣೆಗೆ ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆಸಾಮಾನ್ಯ ಬಸ್ ಪ್ರಯಾಣ ದರ 35 ರೂ. ಇದ್ದರೆ,ವೋಲ್ವೋದಲ್ಲಿ 45 ರೂ. ಆಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ರಸ್ತೆಗಿಳಿದ ಅಧಿಕಾರಿಗಳು: ದರ ಇಳಿಕೆ ಮಾತ್ರವಲ್ಲದೇ, ಪ್ರಯಾಣಿಕರನ್ನು ಆಕರ್ಷಿಸಲು ವೋಲ್ವೋ ಸಿಬ್ಬಂದಿ ಬಸ್‌ಗಳ ಮೇಲೆ ಭಿತ್ತಿ ಪತ್ರಗಳನ್ನು ಅಂಟಿಸುವುದು, ಮೆಜೆಸ್ಟಿಕ್‌ನಲ್ಲಿ ಧ್ವನಿ ಪೆಟ್ಟಿಗೆಗಳ ಮೂಲಕ ಸಂದೇಶ ನೀಡುವುದು, ಕರಪತ್ರಗಳನ್ನು ಹಂಚುವ ಕೆಲಸ ನಗರದಲ್ಲಿ ನಡೆಯುತ್ತಿವೆ.
ವೋಲ್ವೋ ದಿನದ ಪಾಸ್ ರೂ.120 ರಿಂದ ರೂ.100 ಹಾಗೂ ತಿಂಗಳ ಪಾಸ್ ರೂ. 2000 ದಿಂದ ರೂ.1500ಕ್ಕೆ ಇಳಿಕೆಗೊಂಡಿದೆ. ಇದರಿಂದಾಗಿ ಬೈಕ್ ಮತ್ತು ಕಾರುಗಳಲ್ಲಿ ಚಲಿಸುವ ಸಾಕಷ್ಟು ಜನ ವೋಲ್ವೋ ಬಸ್‌ಗೆ ಶಿಫ್ಟ್ ಆಗುತ್ತಿದ್ದಾರೆ. ನಗರಾದ್ಯಂತ ಪ್ರಮುಖ ರಸ್ತೆಗಳಲ್ಲಿ 750 ಬಸ್‌ಗಳಲ್ಲಿ 261 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ.
ಸಾಮಾನ್ಯ ಬಸ್‌ಗಿಂತ ವೋಲ್ವೋ ಬಸ್‌ಗಳಲ್ಲಿ ಸ್ಥಳಾವಕಾಶ ಹೆಚ್ಚಾಗಿರುತ್ತದೆ. ಆದ್ದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು, ಹೆಚ್ಚಿನ ಲಗೇಜ್ ನೊಂದಿಗೆ ಪ್ರಯಾಣಿಸುವವರು, ವೋಲ್ವೋ ಬಸ್ ಗಳ ಕಡೆ ಮುಖ ಮಾಡಿದ್ದಾರೆ. ನಗರದಲ್ಲಿನ ಬಹುತೇಕ ಐಟಿ-ಬಿಟಿ ಕಂಪನಿಗಳು ಜನವರಿಯಲ್ಲಿಆರಂಭ ಮಾಡುವ ಮುನ್ಸೂಚನೆ ಒಂದು ಕಡೆ ಇದ್ದರೆ, ಮತ್ತೂಂದೆಡೆ ಒಮಿಕ್ರಾನ್ ಭೀತಿ ಹಿನ್ನೆಲೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ನೋಡಬೇಕು.
ವೋಲ್ವೋ ಬಸ್ ದರ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗ ದವರು ಎಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ. ಜನರ ಸಹಕಾರವಿದ್ದು, ಇನ್ನೂ ಹೆಚ್ಚಿನ ಸಂಖ್ಯೆ ಜನ ತಲುಪಿಸಲು ಯತ್ನಿಸುತ್ತಿದ್ದೇವೆ. ಈಬೆಳವಣಿಗೆಯು ಬಿಎಂಟಿಸಿ ಆದಾಯಕ್ಕೂ ಸಹಕಾರಿಯಾಗು ತ್ತದೆ. ಮುಂಬರುವ ದಿನಗಳಲ್ಲಿ ಇನ್ನೂ 100 ವೋಲ್ವೋ ಬಸ್ ಗಳನ್ನು ಹೆಚ್ಚಿಸುವ ಚಿಂತನೆಯಿದೆ.
– ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ
-ಭಾರತಿ ಸಜ್ಜನ್