Advertisement

ಸ್ವಯಂಪ್ರೇರಿತ ಲಾಕ್‌ಡೌನ್‌: ವರ್ತಕರ ಜತೆ ಗ್ರಾಹಕರ ಸಾಥ್‌

02:56 AM Jul 09, 2020 | Sriram |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜಿಲ್ಲೆಯಲ್ಲಿ ಶೇ. 50ರಷ್ಟು ಹೊಟೇಲ್‌ಗ‌ಳು ಇನ್ನೂ ಗ್ರಾಹಕರ ಸೇವೆಗೆ ತೆರೆದಿಲ್ಲ. ಕೆಲವೊಂದು ಹೊಟೇಲ್‌ ಮಾಲಕರು ಸ್ವಯಂಪ್ರೇರಿತರಾಗಿ ತಮ್ಮ ಹೊಟೇಲ್‌ಗ‌ಳನ್ನು ಬಂದ್‌ ಮಾಡುತ್ತಿದ್ದಾರೆ. ಅದೇ ರೀತಿ ಗ್ರಾಹಕರು ಕೂಡ ಬೆಂಬಲ ಸೂಚಿಸಿದ್ದಾರೆ.

Advertisement

ಕಳೆದ ಎರಡು ವಾರಗಳಿಂದ ಮಂಗಳೂರು ನಗರದಲ್ಲಿ ಸಾರ್ವಜನಿಕ ಸಂಚಾರ ಕೂಡ ಕಡಿಮೆಯಾಗಿದೆ. ಒಂದು ವೇಳೆ ಸಿಟಿಗೆ ಜನ ಬಂದರೂ ತಮ್ಮ ಕೆಲಸ ಆದ ಕೂಡಲೇ ಮನೆ ಸೇರುತ್ತಿದ್ದಾರೆ. ನಗರದಲ್ಲಿ ಕೆಲವೊಂದು ಹೋಟೆಲ್‌ಗ‌ಳನ್ನು ತೆರೆದಿಟ್ಟಿದ್ದರೂ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೊಟೇಲ್‌ಗ‌ಳಲ್ಲಿ ಶೇ. 50ರಷ್ಟು ಕಾರ್ಮಿಕರು ಮಾತ್ರ ಕೆಲಸ ನಿರ್ವಹಿಸುತ್ತಾರೆ.ರಾಜ್ಯ ಸರಕಾರದ ಪರಿಷ್ಕೃತ ಆದೇಶದಂತೆ ರಾಜ್ಯದೆಲ್ಲೆಡೆ ರಾತ್ರಿ 8ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ವಿಧಿಸಲಾಗಿದ್ದು, ನಗರದ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾತ್ರಿ 8ರ ಬಳಿಕ ಮೆಡಿಕಲ್‌ ಹೊರತುಪಡಿಸಿ ಎಲ್ಲ ಅಂಗಡಿಗಳು ಬಂದ್‌ ಆಗುತ್ತಿವೆ.

ಸೀಮಿತ ಅವಧಿಯಲ್ಲಿ ಅವಕಾಶ
ನಗರದ ಉರ್ವ ಮಾರುಕಟ್ಟೆಯಲ್ಲಿ ಮಂಗಳವಾರದಿಂದ ಬೆಳಗ್ಗೆ 7ರಿಂದ ಅಪರಾಹ್ನ 1ರ ವರೆಗೆ ಮಾತ್ರ ಅಂಗಡಿ ಗಳು ತೆರೆಯುತ್ತಿವೆ. ಈ ವೇಳೆ ಮಾತ್ರ ಗ್ರಾಹಕರಿಗೆ ಅವಕಾಶ ನೀಡಲಾಗುತ್ತದೆ. ಮುಂದಿನ 10 ದಿನಗಳವರೆಗೆ ಇದೇ ರೀತಿ ಸೀಮಿತ ಅವಧಿಯಲ್ಲಿ ಮಾರುಕಟ್ಟೆ ತೆರೆಯಲು ವರ್ತಕರು ತೀರ್ಮಾನಿಸಿ ದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಗಮನಿಸಿಕೊಂಡು ಮುಂದುವರಿ ಯುತ್ತೇವೆ ಎಂದು ವರ್ತಕರೊಬ್ಬರು “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

ಜಾಲತಾಣಗಳಲ್ಲಿ ಅಭಿಯಾನ
ಕರಾವಳಿ ಭಾಗದಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಬೆಂಬಲ ಸೂಚಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. #ISUPPORT COASTAL CURFEW ಎಂಬ ಅಭಿಯಾನ ಟ್ವಿಟ್ಟರ್‌ನಲ್ಲಿ ಆರಂಭವಾಗಿದೆ. ಅನೇಕ ಮಂದಿ ಇದನ್ನು ಬೆಂಬಲಿಸಿ ಮರು ಟ್ವೀಟ್‌ ಮಾಡಿದ್ದಾರೆ.

ಗ್ರಾಮಚಾವಡಿ ಜಂಕ್ಷನ್‌: ಲಾಕ್‌ಡೌನ್‌
ಉಳ್ಳಾಲ: ಉಳ್ಳಾಲ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಂದ ಸ್ವಯಂಪ್ರೇರಿತ ಲಾಕ್‌ಡೌನ್‌ ಮುಂದುವರಿದಿದೆ. ಹರೇಕಳ ಸಹಿತ ಗ್ರಾಮಚಾವಡಿ ಜಂಕ್ಷನ್‌ನಲ್ಲಿ ಬುಧವಾರ ಪಜೀರು, ಕೊಣಾಜೆ ಗ್ರಾಮದ ವ್ಯಾಪಾರಸ್ಥರು ಮಧ್ಯಾಹ್ನದ ಬಳಿಕ ವ್ಯವಹಾರ ಸ್ಥಗಿತಗೊಳಿಸಿ ಲಾಕ್‌ಡೌನ್‌ಗೆ ಬೆಂಬಲ ನೀಡಿದರು.

Advertisement

ಉಳ್ಳಾಲ, ತೊಕ್ಕೊಟ್ಟು, ಸೋಮೇಶ್ವರ, ಕೋಟೆಕಾರು ವ್ಯಾಪ್ತಿಯಲ್ಲಿ ಭಾಗಶಃ: ಲಾಕ್‌ಡೌನ್‌ ಮುಂದುವರಿದಿದ್ದು, ಮುನ್ನೂರು ಗ್ರಾ.ಪಂ.ನಲ್ಲಿ ಎಲ್ಲ ವ್ಯಾಪಾರಸ್ಥರು ಅಂಗಡಿ ಬಂದ್‌ ಮಾಡಿದ್ದಾರೆ. ಬೆಳ್ಮ, ಮಂಜನಾಡಿ, ಬಾಳೆಪುಣಿ ಗ್ರಾಮ ವ್ಯಾಪ್ತಿಯಲ್ಲೂ ಕೆಲವು ಕಡೆ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಮಧ್ಯಾಹ್ನದ ಬಳಿಕ ಅಂಗಡಿ ಮುಂಗಟ್ಟು ಬಂದ್‌ ಮಾಡಿದ್ದಾರೆ.

ಮೂಲ್ಕಿ: ಲಾಕ್‌ಡೌನ್‌ ಮುಂದುವರಿಕೆ
ಮೂಲ್ಕಿ: ಮೂಲ್ಕಿ ನಗರ ಪಂ. ವ್ಯಾಪ್ತಿಯಲ್ಲಿ 3ನೇ ದಿನ ಅಪರಾಹ್ನ 2ರ ಬಳಿಕ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಸ್ವಯಂಪ್ರೇರಿತ ಲಾಕ್‌ಡೌನ್‌ ಯಶಸ್ಸಿಗೆ ವರ್ತಕರ ಜತೆಗೆ ಗ್ರಾಹಕರೂ ಕೈಜೋಡಿಸಿದ್ದಾರೆ.

ಬಜಪೆ: ಜು. 22ರ ವರೆಗೆ ಅರ್ಧದಿನ ಬಂದ್‌
ಬಜಪೆ: ಬಜಪೆ ಗ್ರಾ.ಪಂ.ನಲ್ಲಿ ಕೊರೊನಾ ವೈಸರ್‌ ತಡೆಗಟ್ಟುವ ನಿಟ್ಟಿನಲ್ಲಿ ಇಲ್ಲಿನ ವರ್ತಕರು, ಉದ್ಯಮಿಗಳು
ಜು. 8ರಿಂದ 22ರ ವರೆಗೆ 15 ದಿನಗಳ ಕಾಲ ಪರೀಕ್ಷಾರ್ಥವಾಗಿ ಅಪರಾಹ್ನ 2ರಿಂದ ಅಂಗಡಿ ಮುಂಗಟ್ಟನ್ನು ಬಂದ್‌ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.

ಬಜಪೆ ಗ್ರಾ.ಪಂ. ನೇತೃತ್ವದಲ್ಲಿ ಗ್ರಾ.ಪಂ. ಸಮುದಾಯ ಭವನದಲ್ಲಿ ನಡೆದ ವರ್ತಕರ, ಉದ್ಯಮಿಗಳ, ಸಂಘ-ಸಂಸ್ಥೆಯ ಅಧ್ಯಕ್ಷರ ಸಭೆಯಲ್ಲಿ ಈ ನಿರ್ಧಾರ ವನ್ನು ತೆಗೆದುಕೊಳ್ಳಲಾಯಿತು. ಬೆಳಗ್ಗೆ 7ರಿಂದ ಅಪರಾಹ್ನ 2ರ ವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯುವುದು ಎಂದು ತೀರ್ಮಾನ ತೆಗೆದುಕೊಳ್ಳಲಾಯಿತು.

ಬಜಪೆ ಸೈಂಟ್‌ ಜೋಸೆಫ್‌ ಚರ್ಚ್‌ನ ಧರ್ಮಗುರು ವಂ| ಡಾ|ರೊನಾಲ್ಡ್‌ ಕುಟಿನ್ಹೊ, ಹಿರಿಯ ಮಕ್ಕಳ ವೈದ್ಯ ಡಾ| ಜಯರಾಮ ಶೆಟ್ಟಿ, ಬಜಪೆ ಗ್ರಾ.ಪಂ. ಅಧ್ಯಕ್ಷೆ ರೋಜಿ ಮಥಾಯಸ್‌, ಬಜಪೆ ಮಸೀದಿಯ ಆಡಳಿತ ಮಂಡಳಿಯ ಸದಸ್ಯ ಸಾಹುಲ್‌ ಹಮೀದ್‌ ಉಪಸ್ಥಿತರಿದ್ದರು.
ಬಜಪೆ ಪಿಡಿಒ ಸಾಯೀಶ್‌ ಚೌಟ ಸಭೆಯನ್ನು ನಿರ್ವಹಿಸಿದರು.

ಕಿನ್ನಿಗೋಳಿ: ಜು. 11ರ ವರೆಗೆ ಬಂದ್‌
ಕಿನ್ನಿಗೋಳಿ: ಸ್ವಯಂಪ್ರೇರಿತ ಬಂದ್‌ ಮಾಡುವ ಬಗ್ಗೆ ಸಮಾನ ಮನಸ್ಕರ ಸಭೆಯಲ್ಲಿ ಜು. 11ರ ವರೆಗೆ ಅಪರಾಹ್ನ 2ರಿಂದ ಮರುದಿನ ಬೆಳಗ್ಗೆ 6ರ ತನಕ ಸ್ವಯಂಪ್ರೇರಿತ ಬಂದ್‌ ಮಾಡುವ ನಿರ್ಣಯದಂತೆ ಬುಧವಾರ ಕಿನ್ನಿಗೋಳಿ ಪೇಟೆ ಸಹಿತ ಮೂರುಕಾವೇರಿಯಿಂದ ಎಸ್‌ ಕೋಡಿ ತನಕ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಲಾಗಿತ್ತು. ಬ್ಯಾಂಕ್‌, ಅಂಚೆ ಕಚೇರಿ, ಸರಕಾರಿ ಕಚೇರಿಗಳು ಮಾತ್ರ ತೆರೆದಿದ್ದವು. ಬೆರಳೆಣಿಕೆಯ ಬಸ್‌ಗಳು ಓಡಾಟ ಮಾಡಿವೆ.

ಮೂಡುಬಿದಿರೆ: ಬಂದ್‌ ಬಹುತೇಕ ಯಶಸ್ವಿ
ಮೂಡುಬಿದಿರೆ: ಅಪರಾಹ್ನ 2 ಗಂಟೆಯ ಬಳಿಕ ವ್ಯವಹಾರ ನಿಲುಗಡೆ ಕುರಿತಾದ ಸ್ವಯಂ ಪ್ರೇರಿತ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಬುಧವಾರ ಬಂದ್‌ ಬಗ್ಗೆ ತಿಳಿವಳಿಕೆ ಮೂಡಿಸುವ ಮೈಕ್‌ ಪ್ರಚಾರ ಮಾಡಲಾಯಿತು.

ಅಂಗಡಿ ಮಳಿಗೆಗಳು ಅಪ ರಾಹ್ನ 2ರ ವರೆಗೆ ತೆರೆದಿದ್ದವು. ಗ್ರಾಹಕರೂ ಮಧ್ಯಾಹ್ನದೊಳಗೆ ತಮ್ಮ ಖರೀದಿ ಮುಗಿಸಿ ಮನೆ ಸೇರಿಕೊಂಡರು. ಕೆಲವೇ ಕೆಲವು ಬಸ್‌ಗಳು ಓಡಾಡಿದವು. ವಿರಳ ಸಂಖ್ಯೆಯ ಪ್ರಯಾಣಿಕರು ಕಂಡು ಬಂದರು.

ಸ್ಯಾನಿಟೈಸೇಶನ್‌ ಕೋವಿಡ್ ಪ್ರತಿಬಂಧಕ ಕ್ರಮವಾಗಿ ಶಾಸಕ ಉಮಾನಾಥ ಕೋಟ್ಯಾನ್‌ ಅವರ ಸೂಚನೆಯ ಮೇರೆಗೆ ಪುರಸಭಾಧಿಕಾರಿ ಬುಧವಾರ ಸಿಬಂದಿ ಹಾಗೂ ಆಗ್ನಿಶಾಮಕ ದಳದವರ ಸಹಕಾರದಲ್ಲಿ ಪುರಸಭೆಯ ವಿವಿಧೆಡೆ ಸ್ಯಾನಿಟೈಸೇಶನ್‌ ನಡೆಸಿದರು.

ಪುರಸಭಾ ಕಾರ್ಯಾಲಯ ಆವರಣ ಮತ್ತು ರಸ್ತೆ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಕಚೇರಿ ಆವರಣ, ಬಸ್‌ನಿಲ್ದಾಣದ ಕೆಲವು ಕಡೆ ಸ್ಯಾನಿಟೈಸೇಶನ್‌ ನಡೆದಿದ್ದು, ಈ ಪ್ರಕ್ರಿಯೆ ಇನ್ನೂ ಮುಂದುವರಿಯಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next