Advertisement

ಸಂಕ್ರಾಂತಿ ನಂತರವೂ ಸಂಪುಟ ವಿಸ್ತರಣೆ ಮುಂದೂಡಿಕೆ?

12:13 AM Dec 27, 2019 | Team Udayavani |

ಬೆಂಗಳೂರು: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದರೂ ಜನವರಿಯಲ್ಲಿ ಸಂಪುಟ ವಿಸ್ತರಣೆ ದಿನಾಂಕವನ್ನು ಮತ್ತೆ ಮುಂದೂಡುವ ಸಾಧ್ಯತೆಯಿದೆ.

Advertisement

ವಿಧಾನಮಂಡಲ ಅಧಿವೇಶನವು ಜ.27ಕ್ಕೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಆ ಹಿನ್ನೆಲೆಯಲ್ಲಿ
ತರಾತುರಿಯಲ್ಲಿ ಸಂಪುಟ ವಿಸ್ತರಣೆಯಾಗುವುದೇ ಎಂಬ ಪ್ರಶ್ನೆ ಮೂಡಿಸಿದೆ. ಜ.20ರಿಂದ 30ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ಕರೆಯಲಾಗಿದೆ. ಆದರೆ ಜ. 21ರಿಂದ 24ರವರೆಗೆ ಸ್ವಿಡ್ಜರ್ಲೆಂಡ್‌ನ‌ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) 50ನೇ ವಾರ್ಷಿಕ ಸಭೆ ನಡೆಯಲಿದ್ದು, ದೇಶದ ಮುಖ್ಯಮಂತ್ರಿಗಳೆಲ್ಲ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪ ಅವರು ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರೆ ವಿಧಾನಮಂಡಲ ಅಧಿವೇಶನ ಹಾಗೂ ಸಂಪುಟ
ವಿಸ್ತರಣೆ ಮುಂದೂಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಿಜೆಪಿ ಸರ್ಕಾರ ಸುಭದ್ರವಾಗುತ್ತಿದ್ದಂತೆ ಕೆಲವೇ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವ ಮಾತು ಕೇಳಿಬಂದಿತು. ಕಾಂಗ್ರೆಸ್‌, ಜೆಡಿಎಸ್‌ ತೊರೆದು ಬಿಜೆಪಿ ಸೇರಿ ಗೆದ್ದಿರುವವರು ಪ್ರಭಾವಿ ಖಾತೆಗಳಿಗೆ ಪಟ್ಟು ಹಿಡಿದ್ದಾರೆ ಎನ್ನಲಾಗಿತ್ತು. ಯಡಿಯೂರಪ್ಪ ಅವರು ವರಿಷ್ಠರ ಭೇಟಿಗೆ ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಸಂಪುಟ ವಿಸ್ತರಣೆ ಮುಂದೂಡಿಕೆಯಾಯಿತು. ಬಳಿಕ ಧನುರ್ಮಾಸ ಕಾರಣಕ್ಕೆ ಶಾಸಕರು ಸಹ ಸಂಪುಟ ವಿಸ್ತರಣೆಗೆ ಹೆಚ್ಚು ಒತ್ತಡ ಹೇರಿಲ್ಲ. ಆ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರದಲ್ಲೇ ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸಿ ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಸಿಎಎ ವಿರುದ್ಧ ರಾಷ್ಟ್ರದ ಹಲವೆಡೆ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರು ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವತ್ತ ಗಮನ ಹರಿಸಿದ್ದಾರೆ.

ಕೇಂದ್ರ ಬಜೆಟ್‌ಗೂ ತಯಾರಿ ನಡೆಸಬೇಕಿರುವುದರಿಂದ ಕಾರ್ಯ ಒತ್ತಡದಲ್ಲಿದ್ದಾರೆ. ಈ ಹೊತ್ತಿನಲ್ಲಿ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಸಮಯಾವಕಾಶ ಸಿಗುವುದೇ ಎಂಬುದು ಮುಖ್ಯವೆನಿಸಿದೆ.
ಒಂದೊಮ್ಮೆ ಜನವರಿ ಮೊದಲ ವಾರದಲ್ಲಿ ಯಡಿಯೂರಪ್ಪ ವರಿಷ್ಠರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ ಸಂಕ್ರಾಂತಿ ಹೊತ್ತಿಗೆ ಭೇಟಿಗೆ ಪ್ರಯತ್ನಿಸಬಹುದು. ಅಲ್ಲಿಂದ ಅನುಮೋದನೆ ಪಡೆದು ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆ ಬಗ್ಗೆ ನಿರ್ಧಾರ ಕೈಗೊಳ್ಳುವುದು ವಿಳಂಬವಾದರೆ ನಂತರ ಯಡಿಯೂರಪ್ಪ ಅವರು ಸಿಡ್ಜರ್ಲೆಂಡ್‌ ಪ್ರವಾಸಕ್ಕೆ ತೆರಳಲಿದ್ದಾರೆ. ಅವರು ರಾಜ್ಯಕ್ಕೆ ಹಿಂತಿರುಗುವ ಹೊತ್ತಿಗೆ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಲಿದೆ. ಹಾಗಾಗಿ ಜನವರಿಯಲ್ಲೂ ಸಂಪುಟ ವಿಸ್ತರಣೆ ಬಗ್ಗೆ ಸಚಿವಾಕಾಂಕ್ಷಿಗಳಲ್ಲಿ ಅನುಮಾನ ಮೂಡಿದೆ ಎನ್ನಲಾಗಿದೆ.

ಅಧಿವೇಶನ ಮುಂದಕ್ಕೆ
ಸ್ವಿಡ್ಜರ್ಲೆಂಡ್‌ನ‌ಲ್ಲಿ ನಡೆಯಲಿರುವ ಡಬ್ಲ್ಯೂಇಎಫ್ ಸಾಮಾನ್ಯ ಸಭೆಗೆ ಸಚಿವರೊಬ್ಬರನ್ನು ಕಳುಹಿಸಲು ಬಿಎಸ್‌ವೈ ಚಿಂತಿಸಿದ್ದಾರೆ. ಆದರೆ ದೇಶದ ಎಲ್ಲ ಸಿಎಂಗಳು ಪಾಲ್ಗೊಳ್ಳುವ ಸಾಧ್ಯತೆ ಇರುವುದರಿಂದ ಅವರೇ ಹೋಗುವುದು ಸೂಕ್ತ ಎಂಬುದಾಗಿ ಆಪ್ತ ಸಚಿವರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಯಡಿಯೂರಪ್ಪ ಅವರೇ ಪ್ರವಾಸ ಕೈಗೊಂಡರೆ ಅಧಿವೇಶನ ಮುಂದೂಡಿಕೆಯಾಗುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next