Advertisement
ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ವಿಮಾನದಲ್ಲಿ ಗುರುವಾರ ಬೆಳಗ್ಗೆ ದಿಲ್ಲಿಗೆ ಪ್ರಯಾಣ ಬೆಳೆಸಿದರು. ಕೆಲವು ಶಾಸಕರೂ ಜತೆಗಿದ್ದರು. ಸಚಿವ ಸ್ಥಾನಕ್ಕೆ ಲಾಬಿ ನಡೆಸುವುದಕ್ಕಾಗಿ ಕೆಲವು ಶಾಸಕರು ಶಾಸಕಾಂಗ ಪಕ್ಷದ ಸಭೆಗೂ ಬಾರದೆ ದಿಲ್ಲಿಯಲ್ಲೇ ಉಳಿದುಕೊಂಡರೆ ಇನ್ನು ಕೆಲವರು ಸಭೆ ಮುಕ್ತಾಯವಾಗುತ್ತಿದ್ದಂತೆ ದಿಲ್ಲಿಗೆ ಹಾರಿದ್ದಾರೆ.
Related Articles
Advertisement
ವಿಪಕ್ಷಗಳ ಶಕ್ತಿ ಪ್ರದರ್ಶನ
ಶನಿವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ರಾಹುಲ್ ಗಾಂಧಿ ಸಾಕ್ಷಿಯಾಗಲಿದ್ದಾರೆ. ಇವರಲ್ಲದೆ ವಿವಿಧ ರಾಜ್ಯಗಳ ಸಿಎಂಗಳಾದ ಎಂ.ಕೆ. ಸ್ಟಾಲಿನ್, ನಿತೀಶ್ ಕುಮಾರ್, ಹೇಮಂತ್ ಸೊರೇನ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್; ಉದ್ಧವ್ ಠಾಕ್ರೆ, ಅಖೀಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸೀತಾರಾಂ ಯೆಚೂರಿ, ಡಿ. ರಾಜಾ ಮತ್ತಿತರರು ಆಗಮಿಸಲಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ವಿಪಕ್ಷಗಳ ಶಕ್ತಿ ಪ್ರದರ್ಶನಕ್ಕೂ ಈ ಕಾರ್ಯಕ್ರಮ ವೇದಿಕೆಯಾಗಲಿದೆ.
ಸಂಭಾವ್ಯ ಸಚಿವರು
ಸಂಪುಟದಲ್ಲಿ ಲಿಂಗಾಯತ, ಪರಿಶಿಷ್ಟ ಜಾತಿ, ವಾಲ್ಮೀಕಿ ಹಾಗೂ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಲಭಿಸುವ ಸಾಧ್ಯತೆ ಇದೆ. ಕುರುಬ ಹಾಗೂ ಒಕ್ಕಲಿಗ ಸಮುದಾಯಕ್ಕೆ ತುಸು ಕಡಿಮೆ ಅವಕಾಶ ಲಭಿಸಬಹುದು ಎಂದು ಹೇಳಲಾಗುತ್ತಿದೆ. ಸಂಭಾವ್ಯರ ಪಟ್ಟಿಯಲ್ಲಿ ಡಾ| ಪರಮೇಶ್ವರ, ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಶರಣಪ್ರಕಾಶ್ ಪಾಟೀಲ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಲಕ್ಷ್ಮೀ ಹೆಬ್ಟಾಳ್ಕರ್, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ರಾಜಾ ವೆಂಕಟಪ್ಪ ನಾಯಕ, ಇ. ತುಕಾರಾಂ, ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಶಿವರಾಜ ತಂಗಡಗಿ, ಎಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್, ಯು.ಟಿ. ಖಾದರ್, ತನ್ವೀರ್ ಸೇಠ್, ಹ್ಯಾರೀಸ್/ ಜಮೀರ್, ರಹೀಂಖಾನ್/ ಸಲೀಂ ಅಹ್ಮದ್, ಮಧು ಬಂಗಾರಪ್ಪ, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ಟಿ.ಬಿ. ಜಯಚಂದ್ರ/ಕೆ.ಎನ್. ರಾಜಣ್ಣ, ಬಿ.ಕೆ. ಹರಿಪ್ರಸಾದ್ (ವಿಧಾನ ಪರಿಷತ್ ಸದಸ್ಯ) ಸ್ಥಾನ ಪಡೆಯುವ ಸಾಧ್ಯತೆಗಳಿವೆ.
ಇಂದೇ ಗ್ಯಾರಂಟಿಗಳಿಗೆ ಅಸ್ತು?
ಪ್ರಮಾಣವಚನ ಸಮಾರಂಭ ಮುಗಿದ ಬಳಿಕ ಮಧ್ಯಾಹ್ನ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ. ಈ ಸಭೆಯಲ್ಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳ ಜಾರಿಗೆ ಅಧಿಕೃತ ಮುದ್ರೆಯೂ ಬೀಳುವ ಸಾಧ್ಯತೆಯಿದೆ. ಈಗಾಗಲೇ ಅಧಿಕಾರಿಗಳಿಗೆ ಸಂಪುಟ ಸಭೆಯ ಅಜೆಂಡಾ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.