Advertisement

ಅಧಿವೇಶನದಲ್ಲಿ ಇಂಜೇಪಲ್ಲಿ ಸಮಸ್ಯೆಗೆ ಧ್ವನಿ

03:22 PM Sep 18, 2021 | Team Udayavani |

ಸೇಡಂ: ಹಲವು ವರ್ಷಗಳಿಂದ ಇತ್ಯರ್ಥ ವಾಗದೇ ಉಳಿದ ತಾಲೂಕಿನ ಇಂಜೇಪಲ್ಲಿ ಗ್ರಾಮಸ್ಥರ ಪುನರ್ವಸತಿ ಹಾಗೂ ನೌಕರಿ ಕುರಿತು ಕಡೆಗೂ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ| ಸಾಬಣ್ಣ ತಳವಾರ ಧ್ವನಿ ಎತ್ತಿದ್ದಾರೆ.

Advertisement

ಪಟ್ಟಣದ ಬಿರ್ಲಾ ಒಡೆತನದ ವಾಸವದತ್ತಾ ಸಿಮೆಂಟ್‌ ಕಾರ್ಖಾನೆಯ ಗಣಿಗೆ ಹೊಂದಿಕೊಂಡಿರುವ ಇಂಜೇಪಲ್ಲಿ ಗ್ರಾಮವನ್ನು ಸ್ಥಳಾಂತರಿಸಿ, ಅವರಿಗೆ ವಸತಿ ಹಾಗೂ ಉದ್ಯೋಗ ಕಲ್ಪಿಸುವ ಭರವಸೆಯನ್ನು ಕಾರ್ಖಾನೆ ಆಡಳಿತ ನೀಡಿತ್ತು. ಆದರೆ ಮನೆಗೊಂದು ನೌಕರಿ, ತಮ್ಮ ಜಮೀನಿಗೆ ಸೂಕ್ತ ಬೆಲೆ ನೀಡಿಲ್ಲ ಎಂದು ಆರೋಪಿಸಿ, ಜನ ಗ್ರಾಮ ಬಿಡವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಇದರಿಂದ ಪ್ರತಿನಿತ್ಯ ಸಂಭವಿಸುವ ಬ್ಲಾಸ್ಟಿಂಗ್‌ನಿಂದ ಇಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಹಲವಾರು ಬಾರಿ ತಾಲೂಕು ಆಡಳಿತ ಮತ್ತು ಗ್ರಾಮಸ್ಥರ ನಡುವೆ ಸಭೆಗಳು ಜರುಗಿದ್ದರೂ ಪರಿಹಾರ ಮಾತ್ರ ಶೂನ್ಯ ಎಂಬಂತಾಗಿತ್ತು. ಈಗ ಅ ಧಿವೇಶನದಲ್ಲಿ ಈ ಕುರಿತು ಎಂಎಲ್ಸಿ ಸಾಬಣ್ಣ ತಳವಾರ ಧ್ವನಿ ಎತ್ತಿದ್ದಾರೆ. ಇದಕ್ಕೆ ಗಣಿ ಮತ್ತು ಭೂ ವಿಜ್ಞಾನ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವ ಆಚಾರ ಹಾಲಪ್ಪ ಬಸಪ್ಪ ಉತ್ತರ ನೀಡಿದ್ದಾರೆ.

ವಾಸವದತ್ತಾ ಸಿಮೆಂಟ್‌ ಕಾರ್ಖಾನೆಯಲ್ಲಿ ನಡೆಯುವ ಬ್ಲಾಸ್ಟಿಂಗ್‌ ನಿಂದ ಪಕ್ಕದ ಇಂಜೇಪಲ್ಲಿ ಗ್ರಾಮದ ಮನೆಗಳು ಬಿರುಕು ಬಿಡುತ್ತಿರುವ ಕುರಿತು ಸರ್ಕಾರದ ಗಮನಕ್ಕೆ ಬಂದಿದೆಯೇ? ಜನರಿಗೆ ಪುನರ್ವಸತಿ ಕಲ್ಪಿಸಲು ವಾಸವದತ್ತಾ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆಯೇ ಎನ್ನುವ ಪ್ರಶ್ನೆಗೆ ಸಚಿವರು ಹೌದು ಎಂದು ಉತ್ತರಿಸಿದ್ದಾರೆ. ಅಲ್ಲದೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಂಜೇಪಲ್ಲಿ ನಿವಾಸಿಗಳ ಪುನರ್ವಸತಿ ಕಲ್ಪಿಸಲು ಕಂಪನಿ ಪ್ರತಿನಿಧಿಯೊಂದಿಗೆ ಸಭೆ ನಡೆಸಿ ನಿರ್ಣಯ ಕೈಗೊಂಡರೂ ಜಾರಿಯಾಗದ ಕಾರಣ ಕೇಳಿದ್ದು, ಇದಕ್ಕೆ ಸಚಿವರು ಹೀಗೆ ಉತ್ತರ ನೀಡಿದ್ದಾರೆ. 2006ರಲ್ಲಿ ಪರಿಸರ ತಿರುವಳಿ ಪತ್ರಕ್ಕಾಗಿ ನಡೆದ ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ತೀರ್ಮಾನಿಸಿದಂತೆ, ಸ್ಥಳೀಯರ ಪುನರ್‌ ವಸತಿಗಾಗಿ 6.23 ಎಕರೆ ಜಮೀನು ಖರೀದಿಸಲಾಗಿದೆ.

ಆದರೆ ಗ್ರಾಮಸ್ಥರು ಈ ಪ್ರದೇಶಕ್ಕೆ ತೆರಳಲು ಇಚ್ಚಿಸದ ಕಾರಣ ಈ ಜಮೀನನ್ನು ಸರ್ಕಾರಕ್ಕೆ ವಹಿಸಿ ಪ್ರವಾಹ ಪೀಡಿತರ ವಸತಿಗಾಗಿ ಮತ್ತು ಸ್ಮಶಾನಕ್ಕಾಗಿ ಬಳಸಲು ಕಂಪನಿಯು ಬಿಟ್ಟು ಕೊಟ್ಟಿದೆ. ನಂತರ ಡಿಸಿ ಅಧ್ಯಕ್ಷತೆಯಲ್ಲಿ 2007-08ರಲ್ಲಿ ನಡೆದ ಸಭೆಯ ತೀರ್ಮಾನದಂತೆ ವಾಸವದತ್ತಾ ಕಂಪನಿಯವರು ಇಂಜೇಪಲ್ಲಿ ಗ್ರಾಮದ 51 ಕುಟುಂಬಗಳಿಗೆ ಅವರ ಸ್ವ-ಇಚ್ಚೆಯಂತೆ ನಗದು ರೂಪದಲ್ಲಿ ಪೂರ್ಣ ಪ್ರಮಾಣದ ಪರಿಹಾರವನ್ನು ಪಾವತಿಸಿರುತ್ತಾರೆ. ಬಾಕಿ ಉಳಿದ 81 ಕುಟುಂಬಗಳಿಗೆ ಪುನರ್‌ ವಸತಿ ಕಲ್ಪಿಸುವ ಸಂಬಂಧ ಕಂಪನಿಯು 5.21 ಎಕರೆ ಜಮೀನನ್ನು ಖರೀದಿಸಿದ್ದು, ಪುನರ್‌ ವಸತಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next