Advertisement

ಸ್ವರಾಜ್ಯ ಕಲ್ಪನೆಯಿಂದ ಉದ್ಯೋಗ ಕ್ಷೇತ್ರ ವಿಸ್ತಾರ: ವೀರೇಂದ್ರ ಹೆಗ್ಗಡೆ ಆಶಯ

02:53 AM May 30, 2019 | Sriram |

ನರೇಂದ್ರ ಮೋದಿಯವರು ಗುರುವಾರ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ‘ಉದಯವಾಣಿ’ ಜತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Advertisement

• ಜನಸಂಖ್ಯೆ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಉದ್ಯೋಗ ಸೃಷ್ಟಿಸುವ ಹೊಣೆಗಾರಿಕೆ ಮೋದಿ ಸರ್ಕಾರದ ಮೇಲಿದೆ. ನಮ್ಮ ಬಹುಪಾಲು ಯುವಕ-ಯುವತಿಯರಿಗೆ ಉದ್ಯೋಗ ಸೃಷ್ಟಿಸುವುದು ಸರಕಾರಕ್ಕಿರುವ ಮುಂದಿನ ಸವಾಲು. ಉದ್ಯೋಗ ಸೃಷ್ಟಿ ಎಂದರೆ ಅವಕಾಶಗಳ ನಿರ್ಮಾಣ. ನೀವು ಅವಕಾಶ ಮಾಡಿಕೊಡಿ, ಅವರು ಆಯ್ಕೆ ಮಾಡಿಕೊಳ್ಳುತ್ತಾರೆ.

• ಆದಾಯದ ದೃಷ್ಟಿಯಿಂದ ನಗರಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಗ್ರಾಮೀಣವಾಗಿಯೇ ಉದ್ಯೋಗ ನಿರ್ಮಿಸಿಕೊಡುವ ವ್ಯವಸ್ಥೆ ಮುನ್ನೆಲೆಗೆ ಬರಬೇಕಿದೆ. ಈ ನಿಟ್ಟನಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಖಾಸಗಿ ಬ್ಯಾಂಕ್‌ ಜತೆಗೂಡಿ ಕಳೆದ 35 ವರ್ಷದ ಹಿಂದೆ ಸ್ವ-ಉದ್ಯೋಗ ತರಬೇತಿ ಕೇಂದ್ರ ಆರಂಭಿಸಿದ್ದೆವು. ಉದ್ಯೋಗಾಕಾಂಕ್ಷಿಗಳು ಕೇವಲ ಸಂಬಳದ ಉದ್ಯೋಗವನ್ನಷ್ಟೇ ಅವಲಂಬಿಸದೆ, ಪಾರಂಪರಿಕ ಉದ್ಯೋಗ ಮತ್ತು ಸ್ವ-ಉದ್ಯೋಗ ನೆಚ್ಚಿಕೊಳ್ಳಬೇಕೆನ್ನುವುದು ಇದರ ಹಿಂದಿರುವ ಪರಿಕಲ್ಪನೆಯಾಗಿದೆ.

• ನಗರ ಪ್ರದೇಶ ಬೆಳೆದಂತೆ ಮಾರುಕಟ್ಟೆ ವ್ಯಾಪ್ತಿ ಹೆಚ್ಚುತ್ತಿದ್ದು, ಬೆಲೆ ಸ್ಪರ್ಧಾತ್ಮಕವಾಗಿ ಮನೆಯ ಉದ್ಯಮಗಳು ನಶಿಸುತ್ತಿವೆ. ಈ ನಿಟ್ಟಿನಲ್ಲಿ ಗುಡಿ ಕೈಗಾರಿಕೆಗೆ ಮತ್ತೆ ಪ್ರಾಶಸ್ತ್ಯ ಕೊಟ್ಟಲ್ಲಿ, ಸ್ವ-ಉದ್ಯೋಗಾಕಾಂಕ್ಷಿಗಳಿಗೆ ಸದಾವಕಾಶವಾಗಲಿದೆ.

• ಧರ್ಮಸ್ಥಳದಿಂದ ಸಿರಿ ಮಹಿಳಾ ಉದ್ಯೋಗ ಸಂಸ್ಥೆಯಲ್ಲಿ ಪ್ರಯೋಗ ಸಾಕಾರವಾಗಿದೆ. 3 ಸಾವಿರ ಮಂದಿ ಸಂಸ್ಥೆಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಗಾರ್ಮೆಂಟ್ಸ್‌, ಸಿಹಿ-ತಿಂಡಿ, ಕುರುಕಲು ತಿಂಡಿ, ಜ್ಯೂಸ್‌, ಗೃಹಬಳಕೆ, ಮನೆ ಬಳಕೆ ವಸ್ತು ತಯಾರಿಯಲ್ಲಿ ತಮ್ಮ ಕಾರ್ಯ ಚಟುವಟಿಕೆಯನ್ನು ವ್ಯಾಪಿಸಿಕೊಂಡಿದ್ದಾರೆ. ಹೀಗಾಗಿ, ಗ್ರಾಮೀಣ ಭಾಗದಿಂದ ವಲಸೆಯನ್ನು ತಪ್ಪಿಸಿ, ಆದಾಯ ಬರುವಂತ ಮೂಲಗಳನ್ನು ಸೃಷ್ಟಿಸಬೇಕು. ಮೋದಿಯವರು ಮುಂದಿನ ಅವಧಿಯಲ್ಲಿ ಇಂತಹ ಅನೇಕ ಕಾರ್ಯಕ್ರಮ ರೂಪಿಸಿ, ಸ್ವ-ಉದ್ಯೋಗ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಯೋಜನೆ ರೂಪಿಸುವ ಭರವಸೆ ಇದೆ.

Advertisement

• ಕೃಷಿಗೆ ಬೇಕಾಗುವ ಉಪಕರಣ, ಸಾವಯವ ಗೊಬ್ಬರ, ನರ್ಸರಿ, ತರಕಾರಿ ಬೀಜ ಮಾರಾಟ, ಗಿಡ ಮಾರಾಟ ಮಾಡುವುದರಿಂದಲೂ ಆದಾಯ ಗಳಿಸಬಹುದು. ಇದೂ ಉದ್ಯೋಗ ಸೃಷ್ಟಿಗೆ ಸಹಕಾರಿ. ಕೃಷಿಗೆ ಬಹುದೊಡ್ಡ ಸವಾಲು ಮಾರುಕಟ್ಟೆ. ಕರ್ನಾಟಕ ಸರಕಾರ (ಸಿಎಚ್ಎಸ್‌ಸಿ) ಕೃಷಿ ಯಂತ್ರೋಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಈಗಾಗಲೇ ಬಾಡಿಗೆ ನೀಡುತ್ತಿದೆ. ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು.

• ಹಳ್ಳಿಗಳಲ್ಲಿ ಯಂತ್ರೋಪಕರಣ ಬಳಕೆಗೆ ಆದ್ಯತೆ ಹೆಚ್ಚಿಸಬೇಕು. ಹಾಗಾದಲ್ಲಿ ಯಂತ್ರೋಪಕರಣ ಬಿಡಿ ಭಾಗ ತಯಾರಿಸಲು ಉದ್ಯೋಗ ಸೃಷ್ಟಿಯಾಗಲಿದೆ. ಉದಾಹರಣೆಗೆ ಕಸಪೊರಕೆಗಳು ಗುಜರಾತ್‌, ಕೋಲ್ಕತಾದಿಂದ ಪೂರೈಕೆಯಾಗುತ್ತಿವೆ. ಇವನ್ನೆಲ್ಲ ಗ್ರಾಮೀಣ ಪ್ರದೇಶದಲ್ಲೇ ತಯಾರಿಸಿ ಹೆಚ್ಚಿನ ಲಾಭ ಗಳಿಸಬಹುದು. ಜತೆಗೆ, ಪಾರಂಪರಿಕ ಕೃಷಿ ಮಧ್ಯೆ ದಿನ ನಿತ್ಯ ಆದಾಯ ನೀಡುವಂತಹ ಹೈನುಗಾರಿಕೆ, ಮೀನು ಸಾಕಣೆ, ಕೋಳಿ ಸಾಕಣೆ ಬಹುದೊಡ್ಡ ಆದಾಯ ಕೊಡಬಹುದು. ಇದಕ್ಕೆ ಪ್ರೋತ್ಸಾಹ ಅತ್ಯವಶ್ಯ.

• ಮಹಿಳೆಯರು ಈಗ ಮದುವೆಗೆ ಎರಡನೇ ಪ್ರಾಶಸ್ತ್ಯ ನೀಡುತ್ತಿದ್ದು, ದೃಢವಾದ ಸಂಪಾದನೆಯತ್ತ ಗಮನ ಹರಿಸುತ್ತಿದ್ದಾರೆ. ಮಹಿಳೆಯರಿಗೂ ಉದ್ಯೋಗದ ಅವಕಾಶ ಹೆಚ್ಚಿಸಬೇಕಿದೆ. ಮೋದಿಯವರು ಕಳೆದ 5 ವರ್ಷದಲ್ಲಿ ನಿರುದ್ಯೋಗದ ನಿವಾರಣೆಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ ಎಂಬುದು ಪ್ರಶಂಸನೀಯ.

ನಿರೂಪಣೆ: ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next