ಬೆಂಗಳೂರು: ಬಸವ ಜಯಂತಿ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ಮಂಗಳವಾರ ನಗರದ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಚನ ಸಂಗೀತ ಕಾರ್ಯಕ್ರಮ ನೆರೆದ ಸಭಿಕರನ್ನು ರಂಜಿಸಿತು. ಕಲಬುರಗಿ ಮೂಲದ ಗಾಯಕಿ ಮಾಲಾಶ್ರೀ ಕಣವಿ ಮತ್ತವರ ಸಂಗಡಿಗರು ಸುಮಾರು 1 ಗಂಟೆಗೂ ಹೆಚ್ಚು ಕಾಲ ಬಸವಣ್ಣನವರ ಕೆಲವು ವಚನಗಳನ್ನು ಹಾಡಿದರು.
ನಾನು ಬಂದ ಕಾರ್ಯಕ್ಕೆ ನಾವು ಬಂದೆರಯ್ನಾ!
ನಾವು, ನೀವು ಬಂದ ಕಾರ್ಯಕ್ಕೆ, ಪ್ರಭುದೇವ ಬಂದರಯ್ನಾ!.
ಎಂಬ ವಚನ ಗಾಯನ ನೆರೆದರ ಚಪ್ಪಾಳೆಗೆ ಪಾತ್ರವಾಯಿತು. ಈ ವೇಳೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ, ಬಸಣ್ಣ ಅವರ ಸಾಧನೆ ಬಗ್ಗೆ ಬೆಳಕು ಚೆಲ್ಲಿದರು.
ಪುರುಷರಷ್ಟೇ ಮಹಿಳೆಯರಿಗೂ ಸಮಾನತೆ ದೊರೆಯಬೇಕು ಎಂದು ಹೇಳುತ್ತಿದ್ದ ಬಸವಣ್ಣನ ಅವರು ತಮ್ಮ ವಚನ ಸಾಹಿತ್ಯದ ಮೂಲಕ ಇಂದಿಗೂ ಪ್ರಸ್ತುತರಾಗಿ ನಿಲ್ಲುತ್ತಾರೆ. ಹೀಗಾಗಿಯೆ ಬಸಣ್ಣ ಜಗತ್ತು ಕಂಡು ಶೇಷ್ಠ ಸಮಾಜ ವಿಜ್ಞಾನಿ ಎನಿಸಿಕೊಂಡಿದ್ದಾರೆ.
ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವೆಲ್ಲಾ ಸಾಗೋಣ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕಿ ಬನಶಂಕರಿ ಅಂಗಡಿ, ರಿಜಿಸ್ಟ್ರಾರ್ ಸಿದ್ರಾಮ ಸಿಂಧೆ, ಕರಿಯಪ್ಪ, ಹಿರಿಯ ರಂಗಭೂಮಿ ಕಲಾವಿದ ಕೆ.ವಿ.ನಾಗರಾಜು ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.