ಮಾಸ್ಕೋ: ಇತ್ತೀಚೆಗಷ್ಟೇ ಅನಾರೋಗ್ಯ ನಿಮಿತ್ತ ದಾಖಲೆಯ ಅವಧಿಗೆ ಜಪಾನ್ ಪ್ರಧಾನಮಂತ್ರಿಯಾಗಿದ್ದ ಶಿಂಜೋ ಅಬೆ ಹುದ್ದೆ ತ್ಯಜಿಸಿದ್ದರು. ಇದೀಗ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ 2021ರ ಜನವರಿ ವೇಳೆಗೆ ಹುದ್ದೆ ತ್ಯಜಿಸುವ ಸಾಧ್ಯತೆಗಳಿವೆ. ಕಾಯಿಲೆಯ ಕಾರಣದಿಂದಲೇ 68 ವರ್ಷದ ಪುಟಿನ್ ಹುದ್ದೆ ತ್ಯಜಿಸಬೇಕು ಎಂದು ಅವರ ಗೆಳತಿ ಅಲೆನಾ ಕಬಯೇವಾ ಮತ್ತು ಇಬ್ಬರು ಪುತ್ರಿಯರನ್ನು ಒತ್ತಾಯಿಸುತ್ತಿದ್ದಾರೆ ಎಂದು ರಷ್ಯಾ ಸಂಸತ್, “ಕ್ರೆಮ್ಲಿನ್’ ಮೂಲಗಳನ್ನು ಉಲ್ಲೇಖೀಸಿ “ದ ಸನ್’ ಪತ್ರಿಕೆ ವರದಿ ಮಾಡಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನೋವು ಕಾಡುತ್ತಿದ್ದು, ಕಾಲುಗಳನ್ನು ಸತತವಾಗಿ ಚಲನಾ ಸ್ಥಿತಿಯಲ್ಲಿ ಇರಿಸುತ್ತಿದ್ದಾರೆ. ಜತೆಗೆ ಕುರ್ಚಿಯ ಕೈಗಳನ್ನು ಹಿಡಿಯುವ ವೇಳೆ ಅವರಿಗೆ ನೋವು ಉಂಟಾಗುತ್ತಿರುವ ಅಂಶ ವಿಡಿಯೋದಲ್ಲಿ ದಾಖಲಾಗಿರುವುದನ್ನು ವಿಶ್ಲೇಷಕರು ಅವರಿಗೆ ಪಾರ್ಕಿನ್ಸ್ ಕಾಯಿಲೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಿಲ್ಲ: ಡಿಕೆ ಸುರೇಶ್ ಯೂಟರ್ನ್
ಹೀಗಾಗಿ, ಸ್ಟಾಲಿನ್ ಬಳಿಕ ಅತ್ಯಧಿಕ ಸಮಯದ ವರೆಗೆ ರಷ್ಯಾದ ನೇತೃತ್ವ ವಹಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಪುಟಿನ್ ಜನವರಿಯಲ್ಲಿ ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅವರ ಅನಾರೋಗ್ಯದ ಬಗ್ಗೆ ಸರ್ಕಾರದ ವತಿಯಿಂದ ಹೇಳಿಕೆ ಹೊರಬಿದ್ದಿಲ್ಲ.
ಇತ್ತೀಚೆಗಷ್ಟೇ ಜೀವಿತಾವಧಿವರೆಗೆ ಅಧ್ಯಕ್ಷರಾಗಿರುವ ಬಗ್ಗೆ ಮತ್ತು ಸರ್ಕಾರದ ವತಿಯಿಂದ ಎಲ್ಲ ವೆಚ್ಚವನ್ನು ಭರಿಸುವ ಕರಡು ವಿಧೇಯಕಕ್ಕೂ ಅನುಮೋದನೆ ನೀಡಿದ್ದರು.
ಮಾಸ್ಕೋದಲ್ಲಿನ ಪ್ರಮುಖ ರಾಜಕೀಯ ವಿಶ್ಲೇಷಕ ಪ್ರೊ.ವಲೆರಿ ಸೊಲೊವಿ ಪ್ರತಿಕ್ರಿಯೆ ನೀಡಿ, ಪುಟಿನ್ ಶೀಘ್ರದಲ್ಲಿಯೇ ಹೊಸ ಪ್ರಧಾನಮಂತ್ರಿಯನ್ನು ನೇಮಿಸಲಿದ್ದಾರೆ. ಅವರೇ ಮುಂದಿನ ದಿನಗಳಲ್ಲಿ ರಷ್ಯಾ ಅಧ್ಯಕ್ಷರಾಗುವಂತೆ ಪುಟಿನ್ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಪುಟಿನ್ ಆರೋಗ್ಯದ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು.