Advertisement

ಮತಯಂತ್ರಗಳೇಕೆ ಖಳನಾಯಕರಾಗಬೇಕು? ವಿವಿಪ್ಯಾಟ್‌ ತಂತ್ರಜ್ಞಾನ ಅಳವಡಿಸಿ

11:14 AM Apr 17, 2017 | |

2009ರಲ್ಲಿ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾದಾಗ ಚುನಾವಣಾ ಆಯೋಗ ಮತಯಂತ್ರಗಳನ್ನು ತಿರುಚಿ ತೋರಿಸುವಂತೆ ಸವಾಲು ಹಾಕಿತ್ತು. ಆದರೆ ಆಗ ಯಾರೂ ಈ ಸವಾಲನ್ನು ಸ್ವೀಕರಿಸಲು ಮುಂದೆ ಬಂದಿರಲಿಲ್ಲ.  

Advertisement

ಪಂಚರಾಜ್ಯಗಳ ಚುನಾವಣೆ ಫ‌ಲಿತಾಂಶ ಘೋಷಣೆಯಾದ ಬಳಿಕ ಶುರುವಾದ ಮತಯಂತ್ರ ತಿರುಚುವ ವಿವಾದ ಇನ್ನೂ ತಣ್ಣಗಾಗಿಲ್ಲ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ವಿಪಕ್ಷಗಳಿಗೆ ಬಡಪಾಯಿ ಮತಯಂತ್ರಗಳು ಖಳನಾಯಕರಂತೆ ಕಾಣಿಸಲಾರಂಭಿಸಿವೆ. ಮತಯಂತ್ರಗಳ ಕುರಿತು ಮೊದಲು ಆಕ್ಷೇಪ ಎತ್ತಿದ್ದು ಬಿಎಸ್‌ಪಿ. ಅನಂತರ ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಾರ್ಟಿ ಇದೇ ರಾಗ ಹಾಡತೊಡಗಿವೆ. ಆಪ್‌ ಅಂತೂ ಮತಯಂತ್ರಗಳ ವಿರುದ್ಧ ಸಮರವನ್ನೇ ಸಾರಿದ್ದು, ದಿಲ್ಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ  ಮತಪತ್ರಗಳನ್ನು ಬಳಸಬೇಕೆಂದು ಒತ್ತಾಯಿಸುತ್ತಿದೆ. ಬಿಎಸ್‌ಪಿಯ ಮಾಯಾವತಿ ಮತಯಂತ್ರಗಳ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ದಿಲ್ಲಿ ಸಿಎಂ ಕೇಜ್ರಿವಾಲ್‌ ಮತ ಯಂತ್ರಗಳನ್ನು ತಿರುಚುವ 10 ವಿಧಾನಗಳನ್ನು ಕಲಿಸಿಕೊಡುತ್ತೇನೆ ಎಂದು ತಮ್ಮ ಸ್ಥಾನದ ಘನತೆಯನ್ನು ಕುಗ್ಗಿಸಿಕೊಂಡಿದ್ದಾರೆ. 

2004ರಿಂದೀಚೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲಿ  ಮತಯಂತ್ರಗಳನ್ನೇ ಬಳಸಲಾಗಿದೆ. ಪ್ರತಿ ಚುನಾವಣೆ ಬಳಿಕ ಸೋತ ಪಕ್ಷಗಳು  ಮತಯಂತ್ರಗಳ ಸಾಚಾತನದ ಬಗಗೆ ಅಪಸ್ವರ ಎತ್ತಿವೆ.  ಹಾಗೆಂದು ಯಾವ ಪಕ್ಷವೂ ತಂತ್ರಜ್ಞರನ್ನು ಕರೆಸಿ ಮತಯಂತ್ರಗಳನ್ನು ತಿರುಚಲು ಸಾಧ್ಯ ಎಂದು ಪರಿಶೀಲನೆ ನಡೆಸಿ ಆರೋಪಗಳನ್ನು ಮಾಡಿವೆಯೇ ಎಂದರೆ ಅದೂ ಇಲ್ಲ. ತಮ್ಮ ಸೋಲಿಗೆ ನಿಜವಾದ ಕಾರಣ ಏನು ಎಂದು ಆತ್ಮವಲೋಕನ ಮಾಡುವುದನ್ನು ಬಿಟ್ಟು ಮತಯಂತ್ರಗಳ ಮೇಲೆ ಗೂಬೆ ಕೂರಿಸಿ ಜಾರಿಕೊಳ್ಳುವ ತಂತ್ರವಿದು. 2009ರಲ್ಲಿ ಇದೇ ಮಾದರಿಯ ಪರಿಸ್ಥಿತಿ ಸೃಷ್ಟಿಯಾದಾಗ ಚುನಾವಣಾ ಆಯೋಗ ಮತಯಂತ್ರಗಳನ್ನು ತಿರುಚಿ ತೋರಿಸುವಂತೆ ಸವಾಲು ಹಾಕಿತ್ತು. ಆದರೆ ಆಗ ಯಾರೂ ಈ ಸವಾಲನ್ನು ಸ್ವೀಕರಿಸಲು ಮುಂದೆ ಬಂದಿರಲಿಲ್ಲ.  ಮತಯಂತ್ರಗಳಿಗೆ ಅಳವಡಿಸುವ ಚಿಪ್‌ನ್ನು ಹೊರಗಿನಿಂದ ನಿಯಂತ್ರಿಸುವುದು ಅಸಾಧ್ಯ. ಅಲ್ಲದೆ ಅವು ಯಾವುದೇ ಅನ್ಯ ಉಪಕರಣಗಳ ಜತೆಗೆ ತಂತಿಯಿಂದ ಅಥವ ತಂತಿ ರಹಿತವಾಗಿ ಸಂಪರ್ಕ ಹೊಂದಿರುವುದಿಲ್ಲ. ಇದರ ತರಂಗಾಂತರ ಬಹಳ ಕಡಿಮೆಯಿರುವುದರಿಂದ ಬ್ಲೂಟೂತ್‌, ಶೇರ್‌ಇಟ್‌ನಂತಹ ಅತ್ಯಾಧುನಿಕ ಆ್ಯಪ್‌ಗ್ಳಿಂದಲೂ ಸಂಪರ್ಕ ಸಾಧ್ಯವಿಲ್ಲ. ಒನ್‌ ಟೈಮ್‌ ಪ್ರೊಗ್ರಾಮೇಬಲ್‌ ಚಿಪ್‌ ಅನ್ನು ಕೋಡ್‌ ಮಾಡಿ ತಯಾರಿಸಿದ ಸಾಫ್ಟ್ ವೇರ್‌ನ್ನು ಮತಯಂತ್ರಗಳಿಗೆ ಅಳವಡಿಸುತ್ತಾರೆ. ಹೀಗಾಗಿ ಸಾಫ್ಟ್ ವೇರ್‌ ಬದಲಿಸುವುದು ಕೂಡ ಅಸಾಧ್ಯ. ಮತದಾನ ಶುರುವಾಗುವುದಕ್ಕಿಂತ ಮೊದಲು ಎಲ್ಲ ಪಕ್ಷಗಳ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಕನಿಷ್ಠ 100 ಡಮ್ಮಿ ಮತಗಳನ್ನು ಚಲಾಯಿಸಿ ಅವುಗಳ‌ ಸಾಚಾತನ -ಕಾರ್ಯನಿರ್ವಹಣೆಯನ್ನು ದೃಢಪಡಿಸಿಕೊಳ್ಳಲಾಗುತ್ತದೆ. ಅಮೆರಿಕ ಸೇರಿದಂತೆ ಕೆಲವು ಮುಂದುವರಿದ ದೇಶಗಳು ಮತದಾನಕ್ಕೆ ಈಗಲೂ ಮತಪತ್ರಗಳನ್ನು ಬಳಸುತ್ತಿವೆ ಎನ್ನುವ ವಾದ ಸರಿಯಿದ್ದರೂ ಅನೇಕ ದೇಶಗಳು ಭಾರತದ ಮತಯಂತ್ರಗಳ ಕಾರ್ಯಕ್ಷಮತೆಯನ್ನು ಕಂಡು ಬೆರಗಾಗಿವೆ ಎನ್ನುವುದನ್ನು ಕೂಡ ಮರೆಯಬಾರದು.   ಮತಯಂತ್ರಗಳಗಳ ಬಳಕೆ ಶುರುವಾದ ಬಳಿಕ ಚುನಾವಣೆ ಪ್ರಕ್ರಿಯೆ ಸರಳ, ಕ್ಷಿಪ್ರ ಮತ್ತು ಪಾರದರ್ಶಕವಾಗಿದೆ. ಮತಗಟ್ಟೆ ವಶೀಕರಣ, ಮತ ಪೆಟ್ಟಿಗೆಗಳ ಅಪಹರಣದಂತಹ ಅಪರಾಧಗಳು ಸಂಪೂರ್ಣವಾಗಿ ನಿಂತಿವೆ. ಅಂತೆಯೇ ಸಾಗಾಟ, ದಾಸ್ತಾನು, ಖರ್ಚು, ನಿರ್ವಹಣೆ ಹೀಗೆ ಎಲ್ಲ ವಿಚಾರದಲ್ಲೂ ಮತಯಂತ್ರಗಳು ಹೆಚ್ಚು ಪ್ರಯೋಜನಕಾರಿ. ಮತಯಂತ್ರಗಳಿಂದಾಗಿ ಕುಲಗೆಡುವ ಮತಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಮತಯಂತ್ರಗಳು ಬರುವ ಮೊದಲು ವಿಧಾನಸಭೆ/ ಲೋಕಸಭೆ ಚುನಾವಣೆ ಫ‌ಲಿತಾಂಶ ಬರಲು  ಮೂರು ದಿನ ಹಿಡಿದ ಉದಾಹರಣೆಯೂ ಇದೆ. ಈಗ ಮಧ್ಯಾಹ್ನದೊಳಗೆ ಬಹುತೇಕ ಫ‌ಲಿತಾಂಶ ಪ್ರಕಟವಾಗಲು ಮತಯಂತ್ರಗಳು ಕಾರಣ. ಚುನಾವಣೆ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾಗಿರುವ ಮತಯಂತ್ರಗಳನ್ನು ಕೈಬಿಟ್ಟು ಮತಪತ್ರಗಳನ್ನೇ ಬಳಸಬೇಕೆಂದು ರಚ್ಚೆ ಹಿಡಿಯುವುದು ಅವಿವೇಕತನದ ನಡೆ. ಇದರ ಬದಲು ಮತಯಂತ್ರಗಳನ್ನು ಇನ್ನಷ್ಟು ಸುಧಾರಿಸುವತ್ತ ಗಮನ ಹರಿಸಬೇಕು. ಮತದಾನದ ವೇಳೆ ಗುಂಡಿ ಒತ್ತಿದ ಕೂಡಲೇ ಯಾರಿಗೆ ಮತ ಬಿದ್ದಿದೆ ಎಂಬುದನ್ನು ತಿಳಿಸುವ ವಿವಿಪ್ಯಾಟ್‌ ವ್ಯವಸ್ಥೆಯನ್ನು ಜಾರಿಗೆ ತಂದರೆ ಮತಯಂತ್ರಗಳ ಸಾಚಾತನದ ಕುರಿತು ಎದ್ದಿರುವ ಅನುಮಾನಗಳು ಪರಿಹಾರವಾಗಬಹುದು. ಚುನಾವಣಾ ಆಯೋಗ ಈ ವಿಧಾನವನ್ನು ತ್ವರಿತವಾಗಿ ಜಾರಿಗೊಳಿಸುವ ಅಗತ್ಯವಿದೆ. ಇಲ್ಲದಿದ್ದರೆ ಪ್ರತಿ ಚುನಾವಣೆಯಲ್ಲಿ ಸೋತವರು ಮತಯಂತ್ರವನ್ನು ಖಳನಾಯಕ ಮಾಡುವ ಚಾಳಿ ಮುಂದುವರಿಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next