Advertisement

“ವಿವಿ ಭ್ರಷ್ಟಾಚಾರಕ್ಕೆ ರಾಜ್ಯಪಾಲ, ಕುಲಪತಿ ಹೊಣೆ’

11:10 AM Apr 16, 2017 | Team Udayavani |

ಧಾರವಾಡ: ರಾಜಕೀಯ ಕ್ಷೇತ್ರದಂತೆ ವಿಶ್ವವಿದ್ಯಾಲಯಗಳಲ್ಲಿಯೂ ಭ್ರಷ್ಟಾಚಾರ, ಜಾತಿ ತಾಂಡವವಾಡುತ್ತಿದೆ. ಇದಕ್ಕೆ ಕುಲಪತಿಗಳಿಂದ ಹಿಡಿದು ರಾಜ್ಯಪಾಲರವರೆಗೆ ಎಲ್ಲರೂ ಕಾರಣವಾಗಿರಬಹುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Advertisement

ನಗರದಲ್ಲಿ ಶನಿವಾರ ನಡೆದ ಕರ್ನಾಟಕ ವಿಶ್ವ ವಿದ್ಯಾಲಯ 67ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇಶದಲ್ಲಿ 784 ವಿಶ್ವವಿದ್ಯಾಲಯಗಳಿವೆ. ಕೋಟ್ಯಂತರ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ರಾಜ್ಯದಲ್ಲಿ 54 ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಉತ್ತಮ ಗುಣಮಟ್ಟದ ಅದರಲ್ಲೂ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ಲಭಿಸುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ವಿವಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಿಂತ ಹೆಚ್ಚಿನ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸ್ವಜನ ಪಕ್ಷಪಾತ ಸೇರಿ ಎಲ್ಲವೂ ನಡೆಯುತ್ತಿದ್ದು, ಇದಕ್ಕೆ ರಾಜಕಾರಣಿಗಳು, ಕುಲಪತಿಗಳು ಮತ್ತು ರಾಜ್ಯಪಾಲರು ಕಾರಣರಾಗಿರಬಹುದು ಎಂದು ವಿಷಾದ ವ್ಯಕ್ತಪಡಿಸಿದರು.

ನೂತನ ಕಾಯ್ದೆ: ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಅನುಕೂಲ ವಾಗಲೆಂದು ಮತ್ತು ವಿದ್ಯಾರ್ಥಿಗಳ ಕಲ್ಯಾಣ ವನ್ನು ಗಮನದಲ್ಲಿಟ್ಟುಕೊಂಡು ಬರುವ ಜೂನ್‌ನಿಂದಲೇ ಹೊಸ ಉನ್ನತ ಶಿಕ್ಷಣ ನೀತಿ ಜಾರಿಗೆ ಯೋಚಿಸಲಾಗಿದೆ. ಇದರಿಂದ ಖಂಡಿತವಾಗಿಯೂ ವಿಶ್ವದರ್ಜೆಯ ಗುಣ ಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು. 

ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಎಲ್ಲರೂ ಪದವಿ ಪಡೆದುಕೊಳ್ಳುವುದು ಸರ್ಕಾರಿ ನೌಕರಿ ಪಡೆಯುವುದಕ್ಕೆ ಎನ್ನುವ ಭಾವ ಬೇಡ. ಶಿಕ್ಷಣ ಪಡೆದುಕೊಂಡ ಎಲ್ಲರಿಗೂ ಉದ್ಯೋಗ ನೀಡುವುದು ಸರ್ಕಾರಕ್ಕೆ ಅಸಾಧ್ಯ. ಹೀಗಾಗಿ ಎಲ್ಲರೂ ಕೌಶಲ ಆಧಾರಿತ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು.ಜ್ಞಾನಕ್ಕಾಗಿ ಶಿಕ್ಷಣ ಪಡೆದುಕೊಳ್ಳಬೇಕೇ ಹೊರತು ಪದವಿ ಮತ್ತು ನೌಕರಿಗಾಗಿ ಅಲ್ಲ ಎಂದು ಹೇಳಿದರು.

Advertisement

ಘಟಿಕೋತ್ಸವ ಅತಿಥಿಗಳೆಲ್ಲ
ಹಳೆ ವಿದ್ಯಾರ್ಥಿಗಳೇ

ಶನಿವಾರ ನಡೆದ ಕವಿವಿಯ 67ನೇ ಘಟಿಕೋತ್ಸವ ವಿಭಿನ್ನ ವಿಚಾರಕ್ಕೂ ಸಾಕ್ಷಿಯಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಹಾಜರಿದ್ದ ಎಲ್ಲ ಅತಿಥಿಗಳು ಕವಿವಿ ಹಳೆ ವಿದ್ಯಾರ್ಥಿಗಳೇ ಆಗಿದ್ದು ವಿಶೇಷ. ಸುಪ್ರಿಂಕೋರ್ಟ್‌ ನ ನ್ಯಾಯಮೂರ್ತಿ ಮೋಹನ ಶಾಂತನಗೌಡರ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಗೌರವ ಡಾಕ್ಟರೇಟ್‌ ಪಡೆದ ಡಾ|ವಿ.ಸಿ.ಐರಸಂಗ, ಕವಿವಿ ಕುಲಪತಿ ಡಾ| ಪ್ರಮೋದ ಗಾಯಿ, ಕುಲಸಚಿವ ಡಾ|ಎಂ.ಎನ್‌.ಜೋಷಿ, ಮೌಲ್ಯಮಾಪನ ಕುಲಸಚಿವ ಡಾ|ಮಟ್ಟಿಹಾಳ ಒಟ್ಟಿನಲ್ಲಿ ವೇದಿಕೆ ಮೇಲಿದ್ದ ಎಲ್ಲಾ ಗಣ್ಯರೂ ಕವಿವಿಯ ಹಳೆಯ ವಿದ್ಯಾರ್ಥಿಗಳೇ ಆಗಿದ್ದು ವಿಶೇಷವಾಗಿತ್ತು

ಸುವರ್ಣ ಪದಕ ಪ್ರದಾನ
ಕವಿವಿಯ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದು ಉತ್ತಮ ಸಾಧನೆ ಮಾಡಿದ 92 ವಿದ್ಯಾರ್ಥಿಗಳಿಗೆ 67ನೇ ಘಟಿಕೋತ್ಸವದಲ್ಲಿ 191 ಸುವರ್ಣ ಪದಕ ನೀಡಲಾಯಿತು. ಎಂದಿನಂತೆ 70 ವಿದ್ಯಾರ್ಥಿಗಳು ಪಾರಿತೋಷಕ ಪಡೆದರು. 146 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಕೆಲವು ವಿಷಯಗಳಿಗೆ ವಿದ್ಯಾರ್ಥಿಗಳೇ ಇಲ್ಲದಿರುವುದು. ಇನ್ನು ಕೆಲವು ವಿಷಯಗಳಲ್ಲಿ ಗರಿಷ್ಠ ಅಂಕ ಪಡೆಯುವಲ್ಲಿ ವಿದ್ಯಾರ್ಥಿಗಳು ವಿಫಲರಾಗಿದ್ದರಿಂದ ಒಟ್ಟು 22 ಚಿನ್ನದ ಪದಕ ಮತ್ತು ಪಾರಿತೋಷಕಗಳನ್ನು ಪ್ರದಾನ ಮಾಡಲಾಗಲಿಲ್ಲ.

ಪದವಿ ಶಿಕ್ಷಣಕ್ಕಿಂತ ಕೌಶಲ ಆಧಾರಿತ ಶಿಕ್ಷಣ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ ಸರ್ಕಾರ ದೇಶದಲ್ಲಿಯೇ ಪ್ರಥಮ ಕೌಶಲ ವಿಶ್ವವಿದ್ಯಾಲಯ ಸ್ಥಾಪಿಸಲಿದೆ. ಅದೇ ರೀತಿ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಥಮ ವರ್ಷದಲ್ಲಿ ಓದುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ನೀಡಲು ಚಿಂತನೆ ನಡೆಸಿದೆ.
– ಬಸವರಾಜ ರಾಯರಡ್ಡಿ,
ಉನ್ನತ ಶಿಕ್ಷಣ ಸಚಿವ

ಉದ್ಯೋಗಕ್ಕಿಂತ ಉತ್ಕೃಷ್ಟ ಸಾಧನೆ ಶ್ರೇಷ್ಠ
ಧಾರವಾಡ:
ಕೇವಲ ಉದ್ಯೋಗ ಪಡೆಯುವ ಸ್ಪರ್ಧೆಗಿಂತ, ಪ್ರಸ್ತುತ ಕಾಲಕ್ಕೆ ಮಾದರಿಯಾಗುವ ಕಾಯಕ, ನಡೆ-ನುಡಿ ಮತ್ತು ಉತ್ಕೃಷ್ಟ ಸಾಧನೆಗೆ ಬೇಕಾದ ಅಸಾಧಾರಣ ಸ್ಪರ್ಧೆಯ ಕಡೆಗೆ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದು ಸುಪ್ರಿಂಕೋರ್ಟ್‌ನ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಸಲಹೆ ನೀಡಿದರು.

ಇಲ್ಲಿನ ಕವಿವಿಯ ಗಾಂಧಿ ಭವನದಲ್ಲಿ ಶನಿವಾರ ನಡೆದ ಕವಿವಿಯ 67ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಿದ ಅವರು, ಪದವಿ ಮುಗಿಸಿ ಉದ್ಯೋಗ ಪಡೆಯುವುದಕ್ಕಿಂತ, ಹತ್ತಾರು ಜನರನ್ನು ನಮ್ಮೊಂದಿಗೆ ಬೆಳೆಯುವುದಕ್ಕೆ ಸಹಾಯ ಮಾಡುವ ದೊಡ್ಡ ಸಂಸ್ಥೆಗಳನ್ನು ಹುಟ್ಟು
ಹಾಕುವ ಆತ್ಮವಿಶ್ವಾಸ ಇಟ್ಟುಕೊಳ್ಳಬೇಕು. ಭಾರತವನ್ನು ವಿಶ್ವದಲ್ಲೇ ಶ್ರೇಷ್ಠ ಸ್ಥಾನಕ್ಕೆ ಕೊಂಡೊಯ್ಯಬೇಕಾದರೆ ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡಬೇಕು. ಇತರರಿಗೆ ಮಾದರಿಯಾಗಿ ಬದುಕಬೇಕು. ಅದುವೇ ಶ್ರೇಷ್ಠ ಎಂದರು.

ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಗೌರವ ಡಾಕ್ಟರೇಟ್‌ ಪದವಿ ಪಡೆದ ಡಾ|ವಿ.ಸಿ.ಐರಸಂಗ, ಕುಲಸಚಿವರಾದ ಡಾ|ಎಂ. ಎನ್‌.ಜೋಷಿ, ಮೌಲ್ಯಮಾಪನ ಕುಲಸಚಿವರಾದ ಡಾ|ನಿಜಲಿಂಗಪ್ಪ ಮಟ್ಟಿಹಾಳ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next