ಬೆಳಗಾವಿ: ಸಾಕಷ್ಟು ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದ್ದ ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ವಿಧಾನಪರಿಷತ್ ಸದಸ್ಯ ಹಾಗೂ ಹಾಲಿ ಅಧ್ಯಕ್ಷ ವಿವೇಕರಾವ್ ಪಾಟೀಲ ಪುನರಾಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ವಿವೇಕರಾವ್ ಪಾಟೀಲ ಅವಿರೋಧವಾಗಿ ಆಯ್ಕೆಯಾದರು. ಒಟ್ಟು 14 ನಿರ್ದೇಶಕರನ್ನು ಹೊಂದಿರುವ ಒಕ್ಕೂಟದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸಲಿಲ್ಲ. ಇದರಿಂದ ವಿವೇಕರಾವ್ ಪಾಟೀಲ ಮತ್ತೆ ಅವಿರೋಧವಾಗಿ ಆಯ್ಕೆಯಾದರು. 14 ನಿರ್ದೇಶಕರ ಜೊತೆ ಐವರು ಸರಕಾರ ನಾಮನಿರ್ದೇಶಿತ ಪ್ರತಿನಿಧಿಗಳು ಮತದಾನದ ಹಕ್ಕು ಹೊಂದಿದ್ದರು.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. ಆಗ ವಿವೇಕರಾವ್ ಪಾಟೀಲ ಒಬ್ಬರೇ ನಾಮಪತ್ರ ಸಲ್ಲಿಸಿದರು. ನಂತರ ನಾಮಪತ್ರ ಪರಿಶೀಲನೆ ನಡೆದು ವಿವೇಕರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಯಶ್ರೀ ಶಿಂತ್ರಿ ಘೋಷಿಸಿದರು.
ಜಾರಕಿಹೊಳಿ ಹಿಡಿತ: ಜಿಲ್ಲೆಯ ರಾಜಕಾರಣದ ಮೇಲೆ ಬಲವಾದ ಹಿಡಿತ ಸಾಧಿಸುತ್ತಿರುವ ಜಾರಕಿಹೊಳಿ ಸಹೋದರರು ಬೆಳಗಾವಿ ಹಾಲು ಒಕ್ಕೂಟದಲ್ಲೂ ತಮ್ಮ ಪ್ರಾಬಲ್ಯ ಇದೆ ಎಂಬುದನ್ನು ಸಾಬೀತುಪಡಿಸಿದರು. ಜಾರಕಿಹೊಳಿ ಅವರ ಬೆಂಬಲಿಗರಿಗೇ ಅಧ್ಯಕ್ಷ ಪಟ್ಟ ಎಂದು ಗೊತ್ತಾಗಿದ್ದರಿಂದ ಬೇರೆ ಯಾವ ನಾಯಕರು ಇಲ್ಲಿ ತಮ್ಮ ಪ್ರಭಾವ ಪರೀಕ್ಷಿಸುವ ಪ್ರಯತ್ನ ಮಾಡಲಿಲ್ಲ. ಬೆಳಗಾವಿ ಹಾಲು ಒಕ್ಕೂಟವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಶುಕ್ರವಾರ ಬೆಳಿಗ್ಗೆ ನಿರ್ದೇಶಕರ ಸಭೆ ನಡೆಸಿ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು. ಬಾಲಚಂದ್ರ ಜಾರಕಿಹೊಳಿ ಗುಂಪಿನಲ್ಲಿ 10 ಜನ ನಿರ್ದೇಶಕರು ಇರುವುದರಿಂದ ಚುನಾವಣೆಗೆ ಪೈಪೋಟಿ ನಡೆಯಲೇ ಇಲ್ಲ.
ಕಳೆದ ತಿಂಗಳು ನಿರ್ದೇಶಕ ಸ್ಥಾನಕ್ಕಾಗಿ ಚುನಾವಣೆ ನಡೆದಿತ್ತು. ಆಗ ಏಳು ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರಲ್ಲಿ ವಿವೇಕರಾವ ಪಾಟೀಲ ಹಾಗೂ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಜಾರಕಿಹೊಳಿ ಸಹ ಸೇರಿದ್ದರು. ಹೀಗಾಗಿ ಅಮರನಾಥ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲಿ ಮೂಡಿತ್ತು.
ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ವಿವೇಕರಾವ್ ಪಾಟೀಲ ಮರಳಿ ಅಧಿಕಾರ ಸ್ವೀಕರಿಸಿದರು. ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ವಿವೇಕರಾವ್ ಪಾಟೀಲರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ, ನಿರ್ದೇಶಕ ಅಮರನಾಥ ಜಾರಕಿಹೊಳಿ ಅಭಿನಂದಿಸಿದರು.