ಮಂಗಳೂರು: ಸ್ವಾಮಿ ವಿವೇಕಾನಂದರು ದೇಶದ ಕಟ್ಟ ಕಡೆಯ ವ್ಯಕ್ತಿಯೂ ಅಭಿವೃದ್ಧಿ ಹೊಂದಬೇಕು ಎಂದು ಕನಸು ಕಂಡಿದ್ದರು. ಆದರೆ ದೇಶ ಸ್ವತಂತ್ರಗೊಂಡು ಏಳು ದಶಕಗಳೇ ಕಳೆದರೂ ಇಂದಿಗೂ ಹಲವರಿಗೆ ಮೂಲಸೌಕರ್ಯಗಳು ತಲುಪಿಲ್ಲ. ಹೀಗಾಗಿ ಅವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ. ಜತೆಗೆ ಗಾಂಧೀಜಿಯಿಂದ ಹಿಡಿದು ಇಂದಿನ ಪ್ರಧಾನಿ ವರೆಗೂ ವಿವೇಕಾನಂದರು ಆದರ್ಶರಾಗಿದ್ದಾರೆ ಎಂದು ಹೊಸದಿಲ್ಲಿಯ ಸಂಸದೆ ಮೀನಾಕ್ಷಿ ಲೇಖೀ ಹೇಳಿದರು.
ಅವರು ಬುಧವಾರ ನಗರದ ಸಾರಸ್ವತ ವಿದ್ಯಾಸಂಸ್ಥೆಯ ಗಣಪತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ನಡೆದ ರಾಷ್ಟ್ರೀಯ ಯುವದಿನ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಆಯ್ಕೆಗೊಂಡಿದ್ದು, ಇಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ವಿದ್ಯಾರ್ಥಿಗಳು ವಿವೇಕಾನಂದರ ಕುರಿತು ತಿಳಿದುಕೊಂಡು ಅವರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕೃಷ್ಣ ಮಠದ ಧರ್ಮವೃತಾನಂದಜಿ ಮಾತನಾಡಿ, ದೇಶದ ಪ್ರತಿ ವ್ಯಕ್ತಿಯಲ್ಲೂ ಸಂಸ್ಕಾರ, ವ್ಯಕ್ತಿತ್ವ ಕಟ್ಟುವ ಕಾರ್ಯವಾಗಬೇಕು. ನಾವು ಜೀವನದಲ್ಲಿ ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಅತಿ ಅಗತ್ಯ. ನಮ್ಮಲ್ಲಿ ಸಾಧಿಸುವ ಛಲ ಇದ್ದಾಗ ಮಾತ್ರ ನಾವು ನೈಜ ಯುವಕರಾಗುತ್ತೇವೆ. ಸ್ವಾಮಿ ವಿವೇಕಾನಂದರು ಕೂಡ ತನ್ನ ಬೋಧನೆಯಲ್ಲಿ ಅದನ್ನೇ ತಿಳಿಸಿದ್ದರು ಎಂದರು.
ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಲ್. ಬೊಂಡಾಲ್, ಮುಖ್ಯಶಿಕ್ಷಕಿಯರಾದ ಭಾರತಿ, ರಂಜಿತಾ ಜೋಶಿ, ಪ್ರಾಂಶುಪಾಲ ರತ್ನಾಕರ ಬನ್ನಾಡಿ, ಸೋಮೇಶ್ವರ ಪರಿಜ್ಞಾನ್ ಕಾಲೇಜಿನ ಪ್ರಾಂಶುಪಾಲ ವಿಕ್ರಮ್ ಉಪಸ್ಥಿತರಿದ್ದರು.
ಸಂಸ್ಥೆಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅಲೆಕ್ಕಲ್ ರಾಮಚಂದ್ರ ರಾವ್ ಪ್ರಸ್ತಾವನೆ ಗೈದರು.
ವಿದ್ಯಾರ್ಥಿನಿ ನೇಹಾ ಸ್ವಾಗ ತಿಸಿದರು. ನಿಶ್ಮಿತಾ ವಂದಿಸಿದರು. ವೈಷ್ಣವಿ ಗಟ್ಟಿ ಕಾರ್ಯಕ್ರಮ ನಿರ್ವ ಹಿಸಿದರು.