ಶ್ರೀರಂಗಪಟ್ಟಣ: ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಓಂ ಶ್ರೀನಿಕೇತನ ಶಾಲಾ ಮಕ್ಕಳಿಂದ ಸೈಕಲ್ ಜಾಥಾ ನಡೆಯಿತು.
ತಾಲೂಕು ಆಡಳಿತ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಅಂಗವಾಗಿ ಫಿಟ್‌ಇಂಡಿಯಾ ಅಭಿಯಾನದಡಿ ಸದೃಢ ಭಾರತಕ್ಕಾಗಿ ಸೈಕಲ್ ಜಾಥಾ ಕಾರ್ಯಕ್ರಮ ನಡೆಯಿತು.
ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾ ಲತಾ ಪುಟ್ಟೇಗೌಡ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿದಿನ ನಾವು ವ್ಯಾಯಾಮ ಮಾಡಬೇಕು. ದೇಹವನ್ನು ಗಟ್ಟಿಮಾಡಿಕೊಂಡಷ್ಟು ಮನಸ್ಸು ಕಟ್ಟಿಯಾಗುತ್ತದೆ. ಹೀಗಾಗಿ ನಮ್ಮ ರಾಷ್ಟ್ರದಲ್ಲಿನ ಯುವಕ- ಯುವತಿಯರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು.
ಸ್ವಾಮಿ ವಿವೇಕಾನಂದರು ಯುವ ಶಕ್ತಿಗೆ ಪ್ರೇರಣೆ ನೀಡಿದವರು. ಅವರ ಆದರ್ಶದಲ್ಲಿ ಯುವಕರ ಶಕ್ತಿ ಏನೇಂಬುದನ್ನು ತೋರಿಸಿಕೊಟ್ಟಿದ್ದಾರೆ. ಒಗ್ಗಟ್ಟಿನ ಬಲದಿಂದ ಎಲ್ಲವನ್ನೂ ಸಾಧಿಸಬಹುದು ಎಲ್ಲಾ ಯುವ ಜನರು ಅವರ ತತ್ವ ಆದರ್ಶ ಮೈಗೂಡಿಸಿಕೊಳ್ಳ ಬೇಕು ಎಂದು ತಿಳಿಸಿದರು. ಸಮಾಜದ ಉಪಾಧ್ಯಕ್ಷೆ ನಳಿನಮ್ಮ, ಸದಸ್ಯರಾದ ಸುವರ್ಣಾವತಿ, ನಾಗಮ್ಮ ಗೀತಾ ಇದ್ದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ವಿದ್ಯಾರ್ಥಿಗಳು ಪುರಸಭೆ ಕಚೇರಿ ವೃತ್ತದವರೆಗೂ ವಿವೇಕಾನಂದರ ಘೋಷವಾಣಿ ಕೂಗಿ ಜಾಥಾ ನಡೆಸಿದರು.