ಬೈಲಹೊಂಗಲ: ಭಾರತ ದೇಶದ ಸನಾತನ ಹಿಂದೂ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಎತ್ತಿ ಹಿಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ನಮಗೆಲ್ಲರಿಗೂ ಪ್ರೇರಣೆ. ಮಹಾನ್ ದೇಶ ಭಕ್ತರನ್ನು, ಸಾಧು-ಸಂತರನ್ನು ಸ್ಮರಿಸುವುದು ಕೇವಲ ಬಿಜೆಪಿ ಸಂಸ್ಕೃತಿಯಲ್ಲಿ ಮಾತ್ರ ಎಂದು ರಾಜ್ಯ ಬಿ.ಜೆ.ಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.
ತಾಲೂಕಿನ ಸಂಪಗಾಂವ ಗ್ರಾಮದ ಬೆ„ಲಬಸವೇಶ್ವರ ದೇವಸಾನದಲ್ಲಿ ಬಿಜೆಪಿ ಯುವ ಮೋರ್ಚಾ ಕಿತ್ತೂರ ಮಂಡಳ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವಿವೇಕ ಯುವ ಸಂಕಲ್ಪ ಯಾತ್ರೆಯ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಧಾರೆ ಯುವ ಸಮೂಹಕ್ಕೆ ಸ್ಫೂರ್ತಿದಾಯಕವಾಗಿದೆ ಎಂದರು.
ಚನ್ನಮ್ಮ ಕಿತ್ತೂರ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಸ್ವಾಮಿ ವಿವೇಕಾನಂದರು 1893ರ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಿದ್ದರು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. 1985ರಿಂದ ಭಾರತ ಸರ್ಕಾರವು ರಾಷ್ಟ್ರೀಯ ಯುವ ದಿನ ಆಚರಿಸಲು ಪ್ರಾರಂಭಿಸಿದೆ ಎಂದರು.
ಕಠಾಪೂರಿಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿವೇಕಾನಂದರ ಆದರ್ಶ, ತತ್ವಗಳನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಮೈಗೂಡಿಸಿಕೊಂಡು, ಬಲಿಷ್ಠ ರಾಷ್ಟ್ರ ನಿರ್ಮಾಣ ಸಂಕಲ್ಪ ಮಾಡಬೇಕು ಎಂದರು. ತಾರಿಹಾಳ ಅಡವಿಸಿದ್ದೇಶ್ವರ ಮಠದ ಅಡವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಯುವ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮಂಡಳ ಅಧ್ಯಕ್ಷ ಡಾ| ಬಸವರಾಜ ಪರವಣ್ಣವರ, ಹಿರಿಯರಾದ ಶಂಕರೆಪ್ಪ ಸಿದ್ನಾಳ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ನೇಸರಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಎಫ್. ಕೊಳದೂರ, ಉಳವಪ್ಪ ಉಳ್ಳೇಗಡ್ಡಿ, ಬಸನಗೌಡ ಸಿದ್ರಾಮನಿ, ಬಸವರಾಜ ಪುಟ್ಟಿ, ಬಸನಗೌಡ ಜುಟ್ಟನವರ, ಉಮಾ ಬುಲಾಕೆ, ಮಂಜುಳಾ ದೊಡ್ಡಗೌಡರ, ಸಾತಪ್ಪ ಟೊಣ್ಣಿ, ಅನಿಲ ನೇಸರಗಿ, ಮಹಾಂತೇಶ ಚಿನ್ನಪ್ಪಗೌಡರ, ಮಹಾಂತೇಶ ಜಕಾತಿ, ಶಿವಾನಂದ ಹಣಮಸಾಗರ,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಕುಲಕರ್ಣಿ ಸ್ವಾಗತಿಸಿದರು. ಸಿದ್ದು ಬೋಳನ್ನವರ ನಿರೂಪಿಸಿದರು. ಮಲ್ಲಿಕಾರ್ಜುನ ಉಳ್ಳಾಗಡ್ಡಿ ವಂದಿಸಿದರು. ಇದಕ್ಕೂ ಮುಂಚೆ ಸಂಪಗಾಂವ ಗ್ರಾಮದ ತಿಗಡಿ ಬಾವಿ ಹತ್ತಿರ ಕಲ್ಲಯ್ಯಜ್ಜನ ದೇವಸ್ಥಾನದಿಂದ 800 ಸುಮಂಗಲೆಯರ ಕುಂಭ ಮೇಳ ಮೆರವಣಿಗೆಗೆ ಶಾಸಕ ಮಹಾಂತೇಶ ದೊಡಗೌಡರ ದಂಪತಿ ಚಾಲನೆ ನೀಡಿದರು.