ಬೆಂಗಳೂರು: ಸ್ವಾಮಿ ವಿವೇಕಾನಂದರ 155ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ರಾಜ್ಯದಾದ್ಯಂತ ಜನವರಿ 12 ರಿಂದ 26ರವರೆಗೆ “ವಿವೇಕ್ ಬ್ಯಾಂಡ್ ಅಭಿಯಾನ’ ಆಯೋಜಿಸಲಾಗಿದೆ ಎಂದು ಸಮರ್ಥ ಭಾರತ ಟ್ರಸ್ಟ್‌ನ ಟ್ರಸ್ಟಿ ರಾಜೇಶ್ ಪದ್ಮಾರ್ ತಿಳಿಸಿದರು.
ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಶ್ರುಕವಾರ ಸುದ್ದಿಗೋಷ್ಠಿ ನಡೆಸಿದ ಅವರು, ಯುವಕರಲ್ಲಿ ಸಾಮಾಜಿಕ ಸೇವಾ ಮನೋಭಾವ ಹೆಚ್ಚಿಸಲು ಅಭಿಯಾನ ಆರಂಭಿಸಲಾಗಿದೆ. ಅಭಿಯಾನದಲ್ಲಿ ವಿವೇಕಾನಂದರ “ಉತ್ತಮನಾಗು-ಉಪಕಾರಿಯಾಗು’ ಎಂಬ ಸಂದೇಶ ಸಾರುವ ಬ್ಯಾಂಡ್‌ಗಳನ್ನು ಬಲಗೈಗೆ ಧರಿಸಿ, ಸಂದೇಶದಂತೆ ತಮ್ಮ ಜೀವನ ರೂಪಿಸಿಕೊಳ್ಳಲು ಮುಂದಾಗಲಿದ್ದಾರೆ ಎಂದರು.
2015ರಿಂದ ಆರಂಭವಾದ ಅಭಿಯಾನದಲ್ಲಿ ಪಾಲ್ಗೊಳ್ಳುವ ಯುವಕರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದ್ದು, ಕಳೆದ ವರ್ಷ ನಡೆಸಿದ ಅಭಿಯಾನದಲ್ಲಿ 6 ಲಕ್ಷ ಯುವಕರು ಭಾಗವಹಿಸಿದ್ದರು. ಪ್ರಸಕ್ತ ಸಾಲಿನಲ್ಲಿ ರಾಜ್ಯದಾದ್ಯಂತ 6 ಸಾವಿರಕ್ಕೂ ಹೆಚ್ಚು ಶಾಲಾ-ಕಾಲೇಜುಗಳಲ್ಲಿ ಜಯಂತಿ ನಡೆಯುತ್ತಿದ್ದು, 12 ಲಕ್ಷ ಯುವಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
“ಉತ್ತಮನಾಗು’ ಎಂಬ ಸಂದೇಶದಂತೆ ಕಳೆದ ವರ್ಷ ಅಭಿಯಾನದಲ್ಲಿ ಭಾಗವಹಿಸಿದ್ದ ಯುವಕರು, ಕಾಲೇಜಿಗೆ ಸೂಕ್ತ ಸಮಯಕ್ಕೆ ಹಾಜರಾಗುವುದು, ನಕಲು ಮಾಡದಿರುವುದು, ಗುರು-ಹಿರಿಯರು ಹಾಗೂ ಹೆಣ್ಣು ಮಕ್ಕಳೊಂದಿಗೆ ಸಭ್ಯವಾಗಿ ವರ್ತಿಸುವುದು, ಧೂಮಪಾನ, ಮದ್ಯಪಾನದಂತಹ ವ್ಯಸನಗಳಿಂದ ಹೊರಗೆ ಬಂದಿರುವುದು ಕಂಡುಬಂದಿದೆ. ಕಳೆದ ವರ್ಷ ಅಭಿಯಾನದಲ್ಲಿ ಪಾಲ್ಗೊಂಡಿದ್ದ 6 ಲಕ್ಷ ಯುವಕರ ಪೈಕಿ 1.93 ಲಕ್ಷ ಮಂದಿ ಸಂದೇಶದಿಂದ ಬದಲಾಗಿರುವುದಾಗಿ ಸೆಲ್ಫಿ, ವಾಟ್ಸ್‌ಆ್ಯಪ್ ಮೂಲಕ ಟ್ರಸ್ಟ್‌ಗೆ ಮಾಹಿತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ಅದೇ ರೀತಿ “ಉಪಕಾರಿಯಾಗು’ ಸಂದೇಶದಂತೆ ಈಗಾಗಲೇ ಲಕ್ಷಾಂತರ ವಿದ್ಯಾರ್ಥಿಗಳು ಗಿಡಗಳನ್ನು ನೆಡುವುದು ಸೇರಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಟ್ರಸ್ಟ್‌ನೊಂದಿಗೆ ಕೈಜೋಡಿಸಿದ್ದು, ಕಳೆದ 7 ತಿಂಗಳಲ್ಲಿ ಟ್ರಸ್ಟ್‌ನಿಂದ 14 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಜತೆಗೆ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ ಒಂದು ಕೋಟಿ ಗಿಡ ನೆಡಲಾಗುವುದು ಎಂದು ರಾಜೇಶ್ ಪದ್ಮಾರ್ ತಿಳಿಸಿದರು.
ಪ್ಲಾಸ್ಟಿಕ್ ನಿಷೇಧಕ್ಕೆ ಆದ್ಯತೆ: ಅಭಿಯಾನದ 14 ದಿನಗಳಲ್ಲಿ ಖಾದಿ ಧರಿಸುವ ಮೂಲಕ ಖಾದಿ ಉದ್ಯಮಕ್ಕೆ ಉತ್ತೇಜನ ನೀಡುವುದು, ಈಗಾಗಲೇ ನೆಟ್ಟಿರುವ ಗಿಡಗಳನ್ನು ಪೋಷಿಸುವುದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸಲಾಗುವುದು. ಅಭಿಯಾನಕ್ಕೆ ಕೇಂದ್ರ ಸಚಿವೆ ಸ್ಮತಿ ಇರಾನಿ, ಧರ್ಮಸ್ಥಳ ದೇವಸ್ಥಾನ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಜ್ಞಾನಿ ಡಾ.ಅಣ್ಣಾದೊರೈ, ಭಾರತೀಯ ಮಹಿಳಾ ಕಬಡ್ಡಿ ತಂದ ನಾಯಕ ಮಮತಾ ಪೂಜಾರಿ, ಕ್ರಿಕೆಟರ್ ಮಿಥುನ್ ಅಭಿಮನ್ಯು, ನಟಿ ರೂಪಿಕಾ ಸೇರಿ ಹಲವು ದನಿಗೂಡಿಸಿದ್ದಾರೆ ಎಂದರು.