ಮುಂಬಯಿ: ʼದಿ ಕಾಶ್ಮೀರ್ ಫೈಲ್ಸ್ʼ ಮೂಲಕ ಬಣ್ಣದ ಲೋಕದಲ್ಲಿ ದೊಡ್ಡ ಅಲೆಯನ್ನು ಎಬ್ಬಿಸಿದ್ದ ವಿವೇಕ್ ಅಗ್ನಿಹೋತ್ರಿ ತಮ್ಮ ಹುಟ್ಟು ಹಬ್ಬದ ದಿನದಂದು ( ನ.10 ರಂದು) ತಮ್ಮ ಹೊಸ ಚಿತ್ರವನ್ನು ಘೋಷಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್ʼ 200 ಕೋಟಿ ಕ್ಲಬ್ ಸೇರಿತ್ತು. ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾಶ್ಮೀರ ಪಂಡಿತರ ಕುರಿತಾದ ಕಥೆಯಲ್ಲಿ ನೈಜ ಘಟನೆಗಳನ್ನು ಹೇಳಲಾಗಿತ್ತು. ದೊಡ್ಡ ಹಿಟ್ ಬಳಿಕ ಮತ್ತೊಂದು ನೈಜ ಘಟನೆ ಆಧಾರಿತ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ಅನೌನ್ಸ್ ಮಾಡಿದ್ದಾರೆ.
ʼದಿ ವ್ಯಾಕ್ಸಿನ್ ವಾರ್ʼ ಎನ್ನುವ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ಘೋಷಿಸಿದ್ದಾರೆ. ಭಾರತಕ್ಕೆ ತಿಳಿಯದ ನಂಬಲಾಗದ ಹೋರಾಟದ ನೈಜ ಕಥೆ. ವಿಜ್ಞಾನ, ಧೈರ್ಯ ಭಾರತೀಯ ಮೌಲ್ಯದ ಸುತ್ತ ಸಾಗುವ ಕಥೆ. 2023 ರ ಸ್ವಾತಂತ್ರ್ಯ ದಿನದಂದು 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ವ್ಯಾಕ್ಸಿನ್ ಬಾಟಲಿಯಲ್ಲಿ ಚಿತ್ರದ ಟೈಟಲ್ ಹಾಗೂ ನಿರ್ಮಾಣ ಮುಂತಾದ ಮಾಹಿತಿಯನ್ನು ಬರೆಯಲಾಗಿದೆ. ಟೈಟಲ್ ನೋಡಿದರೆ ಕೋವಿಡ್ ಸಂದರ್ಭದಲ್ಲಿ ಭಾರತದಲ್ಲಿ ತಯಾರಾದ ವ್ಯಾಕ್ಸಿನ್ ಕುರಿತು ಆಗಿರಬಹುದು.
ಹಿಂದಿ, ಇಂಗ್ಲಿಷ್, ಬಾಂಗ್ಲಾ, ಪಂಜಾಬಿ, ಭೋಜ್‌ಪುರಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಗುಜರಾತಿ ಮತ್ತು ಮರಾಠಿ ಭಾಷೆಯಲ್ಲಿ ಸಿನಿಮಾ ತೆರೆಗೆ ಬರಲಿದೆ.
ವಿವೇಕ್ ಅಗ್ನಿಹೋತ್ರಿ ಇದಕ್ಕೂ ಮೊದಲು ʼದಿಲ್ಲಿ ಫೈಲ್ಸ್ʼ ಸಿನಿಮಾವನ್ನು ಮಾಡುವುದಾಗಿ ಹೇಳಿದ್ದರು. ಈ ಸಿನಿಮಾ 1984 ರ ಸಿಖ್ ವಿರೋಧಿ ದಂಗೆಗಳ ಕುರಿತಾಗಲಿದೆ. 2024 ರಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.