Advertisement

ಬಹುಗ್ರಾಮ ಯೋಜನೆ: ನೀರು ಸರಬರಾಜು ವ್ಯವಸ್ಥೆ ವಿಫಲ

11:36 AM Apr 03, 2019 | Naveen |

ವಿಟ್ಲ : ವಿಟ್ಲಪಟ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋ ಪಾಡಿ ಗ್ರಾಮಗಳಲ್ಲಿ 26 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದು, ವಿದ್ಯುತ್‌ ಕಣ್ಣುಮುಚ್ಚಾಲೆಯಿಂದ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದೆ. ಇಲಾಖೆಗಳ ಹೊಂದಾಣಿಕೆ ಕೊರತೆ, ಸೂಕ್ತ ನಿರ್ವಹಣೆ ಸಮಸ್ಯೆಯಿಂದ ಈ ವೈಫಲ್ಯ ಹಳ್ಳಿಯ ಫಲಾನುಭವಿಗಳನ್ನು ಕಂಗೆಡಿಸಿದೆ. ಈ ಐದೂ ಪಂ.ಗಳು ಈ ಯೋಜನೆಯನ್ನು ನಂಬಿ ಕಂಗೆಟ್ಟಿವೆ.

Advertisement

ವಿದ್ಯುತ್‌ ಸಮಸ್ಯೆ ಮಾತ್ರ ಅಲ್ಲ
ವಿದ್ಯುತ್‌ ಲೋಪ ಯೋಜನೆ ಇರುವ ಸಜಿಪದಲ್ಲಿ ಮಾತ್ರವಲ್ಲ. ಗ್ರಾಮ ಗ್ರಾಮಗಳಲ್ಲಿ ವಿದ್ಯುತ್‌ ಇಲ್ಲ, ನೀರಿಲ್ಲ ಎನ್ನುವ ಕೂಗು ಕೇಳಿಬರುತ್ತಿದೆ. ಯೋಜನೆ ಪೈಪ್‌ಲೈನ್‌ ಕಾಮಗಾರಿಯೂ ಸಮರ್ಪಕವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಉತ್ತಮ ದರ್ಜೆಯ ಪೈಪ್‌ ಇದೆ. ಆದರೆ ಅನೇಕ ಕಡೆ ಅವುಗಳನ್ನು ಜೋಡಿಸಿದ ರೀತಿ ವೈಜ್ಞಾನಿಕವಲ್ಲ. ಆದುದರಿಂದ ಎಷ್ಟೋ ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಕನ್ಯಾನ ಗ್ರಾಮದ ಕಮ್ಮಜೆಯಲ್ಲಿ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದೆ. ಯಾರಿಗೂ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ. ಇಲಾಖೆಗಳ ನಡುವಿನ
ಹೊಂದಾಣಿಕೆ ಕೊರತೆಯಿಂದ ಈ ಅವ್ಯವಸ್ಥೆ ಆಗಿದೆ ಎನ್ನುವ ಮಾತೂ ಕೇಳಿಬರುತ್ತಿದೆ.

ನೀರು ತಾನಾಗಿ ಹರಿಯಬಹುದು
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೇತ್ರಾವತಿಯ ಬದಿಯಲ್ಲಿ 5 ಲಕ್ಷ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಲಾಗಿದೆ. ಇದಕ್ಕೆ ನೀರು ಭರ್ತಿ ಮಾಡಬೇಕು. ಅದು ಪಂಪ್‌ ಗಳ ಮೂಲಕವೇ ಆಗಬೇಕು. ಆದರೆ ನೀರು ಭರ್ತಿಯಾದಲ್ಲಿ ಮೇಲೆ ಹೇಳಿದ ಐದೂ ಗ್ರಾಮಗಳಿಗೆ ನೀರು ತಾನಾಗಿ ಹರಿದುಹೋಗುವ ಯೋಜನೆ ರೂಪಿಸಲಾಗಿದೆ. ಅಂದರೆ ಗ್ರಾವಿಟಿ ಫೋರ್ಸ್‌ ಮೂಲಕ ಈ ವ್ಯವಸ್ಥೆ ಅನುಷ್ಠಾನಿಸಲಾಗಿದೆ. ಆದರೆ ಈ ವರೆಗೆ ವಿದ್ಯುತ್‌ ಸಮಸ್ಯೆಯಿಂದ ಟ್ಯಾಂಕ್‌ನಲ್ಲಿ ನೀರು ಭರ್ತಿಯಾಗಲೇ ಇಲ್ಲ.

ಕೊಳ್ನಾಡು ಓಕೆ
ಈಗ 26 ಕೋಟಿ ರೂ. ಯೋಜನೆಯ ಫಲಾನುಭವಿ ವಿಟ್ಲಪಟ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾಮಗಳಲ್ಲಿ ಕೊಳ್ನಾಡು ಗ್ರಾಮದ ಜನತೆಗೆ ನೀರು ಸರಬರಾಜು ಆಗುತ್ತಿದೆ. ಗೇಟ್‌ವಾಲ್‌ ನಿರ್ವಹಣೆ ಬಗ್ಗೆ ನೀರು ಬಿಡುವ ಸಿಬಂದಿಗೆ ಸೂಕ್ತ ಮಾಹಿತಿ ನೀಡಿ, ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಲಾಗಿದೆ. ಗ್ರಾಮದಲ್ಲಿರುವ ಮೂಲಗಳಿಂದ ನೀರು ಸರಬರಾಜು ಮಾಡಿ ಜನತೆಗೆ ಯಾವ ಯೋಜನೆಯಿಂದ ನೀರು ಹರಿದುಬರುತ್ತಿದೆ ಎಂದು ತಿಳಿಯದಂತಾಗಿದೆ.

ನೀರಿನ ಟ್ಯಾಂಕ್‌-26, ಕೊಳವೆಬಾವಿ 19, ವಾಡ್‌-10, ಜನಸಂಖ್ಯೆ-14,260.

Advertisement

ವಿಟ್ಲಪಟ್ನೂರು ಗ್ರಾಮ
ವಿಟ್ಲಪಟ್ನೂರು ಗ್ರಾಮದಲ್ಲಿ ಒಮ್ಮೊಮ್ಮೆ ಈ ಯೋಜನೆಯ ನೀರು ಬರುತ್ತಿದೆ. ಆದರೆ ಯಾವುದೇ ಟ್ಯಾಂಕ್‌ಗಳನ್ನು ತುಂಬುತ್ತಿಲ್ಲ. ಕೆಲವೊಂದು ಭಾಗಗಳಿಗೆ ನೀರು ತಲುಪುತ್ತಿಲ್ಲ. ಅದಕ್ಕೆ ಸ್ಥಳೀಯ ಮೂಲಗಳ ಮೂಲಕ ನಾಗರಿಕರಿಗೆ ನೀರು ತಲುಪಿಸುವ ಪ್ರಯತ್ನ ನಡೆಯುತ್ತಿದೆ. ವಿದ್ಯುತ್‌ ಸಮಸ್ಯೆ ಇಲ್ಲಿಯೂ ಇರುವುದರಿಂದ ಟ್ಯಾಂಕ್‌ಗಳಿಗೆ ನೀರು ತುಂಬುತ್ತಿಲ್ಲವೆನ್ನಲಾಗಿದೆ.
ನೀರಿನ ಟ್ಯಾಂಕ್‌-13, ಕೊಳವೆಬಾವಿ-13, ವಾರ್ಡ್‌-7, ಜನಸಂಖ್ಯೆ- 10,750.

ಕರೋಪಾಡಿ ಗ್ರಾಮ
ಕರೋಪಾಡಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಟ್ರಯಲ್‌ ಮಾಡಲಾಗಿತ್ತು. ಆಗ ನೀರು ಬರುತ್ತಿತ್ತು. ಈಗ ನೀರು ತಲುಪುತ್ತಲೇ ಇಲ್ಲ. ಇಲ್ಲಿ ಈಗ ಈ ಯೋಜನೆಯನ್ನು ನಂಬಿ ನೀರು ಸರಬರಾಜಾಗುತ್ತಿಲ್ಲ.

ನೀರಿನ ಟ್ಯಾಂಕ್‌-15, ಕೊಳವೆಬಾವಿ-8, ವಾರ್ಡ್ -6, ಜನಸಂಖ್ಯೆ-6,250.

ಸಾಲೆತ್ತೂರು ಗ್ರಾಮ
ಸಾಲೆತ್ತೂರು ಗ್ರಾಮ ನೂತನ ಪಂಚಾಯತ್‌. ಇಲ್ಲಿ ನೀರೂ ಇಲ್ಲ, ವಿದ್ಯುತ್ತೂ ಇಲ್ಲ. ಟ್ಯಾಂಕ್‌ ಮಾಡಲು ಅನುದಾನ ಇಲ್ಲ. ನೀರಿನ ತೊಂದರೆ ತಾರಕಕ್ಕೇರಿದೆ. ಬಹುಗ್ರಾಮ ಕುಡಿಯುವ ನೀರು ಬರುತ್ತಿಲ್ಲ. ಇಲ್ಲಿರುವ ಎರಡು ವಾರ್ಡ್‌ಗಳಲ್ಲಿ ಒಂದನೇ ವಾರ್ಡ್ ನಲ್ಲಿ ನೀರು ಸರಬರಾಜು ವ್ಯವಸ್ಥೆಯಿದೆ. ಎರಡನೇ ವಾರ್ಡ್‌ನಲ್ಲಿ ನೀರಿನ ವ್ಯವಸ್ಥೆಯೇ ಇಲ್ಲ.

ನೀರಿನ ಟ್ಯಾಂಕ್‌-6, ಕೊಳವೆಬಾವಿ-5, ಸಾರ್ವಜನಿಕ ತೆರೆದ ಬಾವಿ-1, ವಾರ್ಡ್‌-2, ಜನಸಂಖ್ಯೆ-4,000.

ಕನ್ಯಾನ ಗ್ರಾಮ
ಪ| ಅಧಿಕಾರಿಗಳಿಗೆ ಬಂದಂತೆ ಕನ್ಯಾನ ಗ್ರಾಮಕ್ಕೂ ಜಾಕ್‌ವೆಲ್‌ ಪವರ್‌ ಕಟ್‌ ಮೆಸ್ಸೇಜ್‌ ತಲುಪುತ್ತದೆ. ನೀರು ಇಲ್ಲ. ವಿದ್ಯುತ್‌ ವ್ಯವಸ್ಥೆ ಇಲ್ಲ. ಪೈಪ್‌ ಲೀಕೇಜ್‌ ಎದ್ದು ಕಾಣುತ್ತಿದೆ.

ನೀರಿನ ಟ್ಯಾಂಕ್‌-16, ಕೊಳವೆಬಾವಿ-13, ವಾರ್ಡ್‌-9, ಜನಸಂಖ್ಯೆ-7,700.

ಈ ಐದು ಗ್ರಾಮಗಳಲ್ಲಿ ಸ್ಥಳೀಯ ವ್ಯವಸ್ಥೆಗಳನ್ನು ಕೈಬಿಟ್ಟು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕವೇ ನೀರು ಸರಬರಾಜು ಆಗಬೇಕಾಗಿತ್ತು. ಆದರೆ ಈ ಯೋಜನೆ ಯಶಸ್ವಿ
ಯಾಗುವವರೆಗೆ ಸ್ಥಳೀಯ ಮೂಲಗಳ ನೀರು ಸರಬರಾಜು ವ್ಯವಸ್ಥೆ ಕೈಬಿಡುವ ಹಾಗಿಲ್ಲ. ಹೊಸ ಯೋಜನೆಯ ಪೈಪ್‌ಗ್ಳು ಸಾರ್ವಜನಿಕ ರಸ್ತೆಯ ಬದಿಯಲ್ಲಿವೆ. ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಾಗ ಈ ಪೈಪ್‌ಗ್ಳಿಗೆ ಹಾನಿಯಾಗುತ್ತದೆ. ಇದನ್ನು ಸರಿಪಡಿಸುವುದಕ್ಕೆ ಎಸ್ಟಿಮೇಟ್‌ ಇಲ್ಲ, ಅನುದಾನ ವಿಲ್ಲ. ಅಂದರೆ ಇಲಾಖೆಗಳ ನಡುವೆ ಪರಸ್ಪರ ಹೊಂದಾಣಿಕೆಯಿಲ್ಲ. ಯೋಜನೆ ಅನುಷ್ಠಾನದ ಸಮತೋಲನವಾಗಬೇಕಾಗಿದೆ. ಇದಕ್ಕೆ ಸಂಬಂಧ ಪಟ್ಟ ಜವಾಬ್ದಾರಿಯುತ ಅಧಿಕಾರಿಗಳು ಪರಸ್ಪರ ಕಾರ್ಯಯೋಜನೆ ರೂಪಿಸದೇ ಇದ್ದಲ್ಲಿ ಇಷ್ಟು ದೊಡ್ಡ ಯೋಜನೆ ವಿಫಲವಾಗಬಹುದು.

ಪವರ್‌ ಕಟ್‌ ಸಮಸ್ಯೆ
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿದ್ಯುತ್‌ ಸರಬರಾಜಿಗಾಗಿ ಎಕ್ಸ್‌ಪ್ರೆಸ್‌ ಫೀಡರ್‌ ಅನುಷ್ಠಾನಗೊಳಿಸಲಾಗಿತ್ತು. ಕೆಲವು ತಿಂಗಳುಗಳ ಹಿಂದೆ ಅದು ಬಿದ್ದು ವಿದ್ಯುತ್‌ ಅವ್ಯವಸ್ಥೆ ಆರಂಭವಾಯಿತು. ಮತ್ತೆ ಫೀಡರ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ಇದೀಗ ಬೇಸಗೆಯಲ್ಲಿ ನೀರು ನೀರು ಎಂದು ಹಾಹಾಕಾರ ಎದ್ದಿರುವ ಕಾಲದಲ್ಲಿ ನೀರು ಸರಬರಾಜಾಗಿಲ್ಲ ಎಂದು ಹೇಳಲೇಬೇಕು. ಯೋಜನೆ ಬಗ್ಗೆ ಭಾರೀ ನಿರೀಕ್ಷೆ ಇಟ್ಟಿದ್ದ ನಾಗರಿಕರಿಗೆ ಭ್ರಮನಿರಸನ ಉಂಟಾಗಿದೆ. ಪವರ್‌ ಕಟ್‌ ಸಮಸ್ಯೆ ಎನ್ನುವ ಅಧಿಕಾರಿಗಳ ನಿತ್ಯ ಸಂದೇಶ ಆಯಾ ಗ್ರಾ.ಪಂ.ಗಳಿಗೆ ತಲುಪುತ್ತದೆ. ನೀರು ತಲುಪುತ್ತಿಲ್ಲ.

ನಿರ್ಮಾಣ ಹಂತದಲ್ಲಿ ಹೊಸ ಫೀಡರ್‌
ವಿದ್ಯುತ್‌ ಎಕ್ಸ್‌ಪ್ರೆಸ್‌ ಫೀಡರ್‌ ಕೆಲವು ತಿಂಗಳುಗಳ ಹಿಂದೆ ಬಿದ್ದು ಸಮಸ್ಯೆಯಾಗಿದೆ. ಹೊಸ ಫೀಡರ್‌ ನಿರ್ಮಾಣ ಹಂತದಲ್ಲಿದೆ. 15-20 ದಿನಗಳಲ್ಲಿ ಹೊಸ ವ್ಯವಸ್ಥೆ ಅಸ್ತಿತ್ವಕ್ಕೆ ಬರುತ್ತದೆ. ಇದು ಸುಸಜ್ಜಿತವಾದಲ್ಲಿ ವಿದ್ಯುತ್‌ ಸಮಸ್ಯೆ ನೀಗಬಹುದು ಎಂಬ ಆಶಯವಿದೆ. ಪ್ರಸ್ತುತ ವೋಲ್ಟೇಜ್‌ ಡ್ರಾಪ್‌ನಿಂದ ನೀರು ಸರಬರಾಜು ಮಾಡಲಾಗುತ್ತಿಲ್ಲ. ಪೈಪ್‌ಲೈನ್‌ನಲ್ಲಿ ನೀರು ಪೋಲಾಗುತ್ತಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಐದೂ ಗ್ರಾಮಗಳಿಗೆ ಗ್ರಾವಿಟಿ ಫೋರ್ಸಲ್ಲಿ ನೀರು ಸಾಗುವ ವ್ಯವಸ್ಥೆಯನ್ನೇ ಅನುಷ್ಠಾನಿಸಬಹುದು. ಆದರೆ ಆ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ. ಕೆಲವು ಪಂ.ಗಳಲ್ಲಿ ನೀರು ಸರಬರಾಜು ಮಾಡುವವರ ಸಮಸ್ಯೆಯೂ ಇದೆ. ಅದನ್ನು ಸೂಕ್ತವಾಗಿ ಹೊಂದಾಣಿಕೆ ಮಾಡಿ ನೀರು ಸರಬರಾಜು ಮಾಡಲಾಗುತ್ತದೆ. ಕೊಳ್ನಾಡಿನಲ್ಲಿ ಸಮರ್ಪಕವಾಗಿದೆ.
ಮಹೇಶ್‌,
ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಗ್ರಾಮೀಣ
ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಬಂಟ್ವಾಳ ಸಬ್‌ಡಿವಿಜನ್‌

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next