ಮಂಗಳೂರು : ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರು ನಿರ್ದೋಷಿಗಳು ಎಂದು ಗುರುವಾರ ಮೂರನೇ ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದ ವಿಠಲ್ ಮಲೆಕುಡಿಯ ಅವರ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು, ಹಲವು ಸಂಘಟನೆಗಳು, ರಾಜಕಾರಣಿಗಳು ಬೆಂಬಲ ಸೂಚಿಸಿದ್ದರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟ ನಡೆಸಿದ್ದರು.
ಬೆಳ್ತಂಗಡಿಯ ಕುತ್ಲೂರು ನಿವಾಸಿಯಾಗಿದ್ದ ವಿಠಲ್ ಮಲೆಕುಡಿಯ ಅವರನ್ನು 2012 ಮಾರ್ಚ್ 3 ರಂದು ನಕ್ಸಲ್ ನಿಗ್ರಹ ಪಡೆ ಬಂಧಿಸಿತ್ತು.ಸುಮಾರು ನಾಲ್ಕು ತಿಂಗಳು ಜೈಲು ಶಿಕ್ಷೆ ಅನುಭವಿಸಿದ ನಂತರ, ವಿಠಲ್ ಗೆ ಜಾಮೀನು ನೀಡಲಾಗಿತ್ತು .
2015 ರಲ್ಲಿ ಪೊಲೀಸರು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಸೆಷನ್ಸ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದರು.
ನಕ್ಸಲ್ ನಿಗ್ರಹ ಪಡೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ವಿಠಲ್ 6 ನೇ ಆರೋಪಿಯಾಗಿದ್ದು, ತಂದೆ 7 ನೇ ಆರೋಪಿಯಾಗಿದ್ದರು.
ಬಂಧನಕ್ಕೊಳಗಾದ ಬಳಿಕ ಕೈಕೊಳ ತೊಟ್ಟುಕೊಂಡೇ ಪರೀಕ್ಷೆ ಬರೆದದ್ದು ಭಾರಿ ಸುದ್ದಿಯಾಗಿತ್ತು.ವಿಠಲ ಮಲೆಕುಡಿಯ ರಕ್ಷಣೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಾಟ್ ಬೆಂಬಲ ಸೂಚಿಸಿದ್ದರು.