ವಿಟ್ಲ: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ನಡೆಯುತ್ತಿದ್ದ ಸಭಾಂಗಣದಲ್ಲಿ ಶುಕ್ರವಾರ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ಆರಂಭವಾಗಿ, ವಿದ್ಯಾರ್ಥಿಗಳ ಎರಡು ತಂಡಗಳು ದಾಂಧಲೆ ನಡೆಸಿದವು.
ಕಾಲೇಜು ಪ್ರಾಶುಪಾಲ ಡಾ| ಶಂಕರ ಪಾಟಾಳಿ ವೈ ಅವರ ಪ್ರಕಾರ ನೃತ್ಯ ಮಾಡುತ್ತಿದ್ದ ಸಂದರ್ಭ ಹಾಡಿಗೆ
ಹುಚ್ಚೆದ್ದ ವಿದ್ಯಾರ್ಥಿಗಳ ಒಂದು ತಂಡ ಸಭಾಂಗಣದ ಹಿಂಭಾಗದಲ್ಲಿ ಕುಣಿಯಲು ಆರಂಭಿಸಿತು.
ಇನ್ನೊಂದು ತಂಡ ವಿರೋಧ ವ್ಯಕ್ತ ಪಡಿಸಿದ್ದು, ಜಗಳಕ್ಕೆ ನಾಂದಿಯಾಯಿತು. ಈ ಕೃತ್ಯದಿಂದ ಗಲಭೆ ಆರಂಭವಾಯಿತು ಎಂದು ಅವರು ಹೇಳಿದರು.
ಒಂದು ತಂಡ ವೇದಿಕೆಯ ಹಿಂಭಾಗದಲ್ಲಿ ನೃತ್ಯ ಮಾಡಿದ್ದು, ಅಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಮೈಗೆ ಮೈ ತಾಗಿತೆನ್ನಲಾಗಿದೆ. ಅದರಿಂದ ಗದ್ದಲ ಆರಂಭವಾಯಿತು ಎಂದು ಕೆಲವು ವಿದ್ಯಾರ್ಥಿಗಳು ಹೇಳಿದರು. ಸಭಾಂಗಣದ ಲ್ಲಿದ್ದ ಕುರ್ಚಿಗಳು ಚೆಲ್ಲಾಪಿಲ್ಲಿಯಾದವು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು.
ಸಿಸಿ ಕೆಮರಾ ಇಲ್ಲ ?: ಕಾಲೇಜು ಕಚೇರಿಯಿಂದ 200 ಮೀಟರ್ ದೂರದಲ್ಲಿರುವ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಭಾಂಗಣದಲ್ಲಿ ಸಿಸಿ ಕೆಮರಾ ವ್ಯವಸ್ಥೆಯೂ ಇಲ್ಲ.