Advertisement

ವಿಟ್ಲ ಪಟ್ಟಣ ಪಂಚಾಯತ್‌: ಕಸ, ತ್ಯಾಜ್ಯ ವಿಲೇವಾರಿಗೆ ಕಾರ್ಮಿಕರ ಕೊರತೆ?

10:26 PM Jun 03, 2019 | mahesh |

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ ಡೋಲಾಯಮಾನ ಸ್ಥಿತಿಯಲ್ಲಿದೆ. ಕಾರ್ಮಿಕರ ಕೊರತೆಯಿಂದ ಕಸ, ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಾಗುತ್ತಿಲ್ಲ. ಲೆಸೆನ್ಸ್‌ ಮತ್ತು ವಾಸ್ತವ್ಯ ಪತ್ರ ಇತ್ಯಾದಿಗಳಿಗೆ ವ್ಯಾಪಾರಿಗಳ ನಾಗರಿಕರ ಅರ್ಜಿಗಳು ತುಂಬಿಕೊಂಡಿವೆ ಎಂದು ನಾಗರಿಕರು ದೂರುತ್ತಿದ್ದಾರೆ.

Advertisement

ಪಟ್ಟಣ ಪಂಚಾಯತ್‌ನಲ್ಲಿ ಖಾಯಂ ಕಂದಾಯ ಅಧಿಕಾರಿ ಇಲ್ಲ, ಎಂಜಿನಿಯರ್‌ ಇಲ್ಲ. ಚುನಾವಣೆಯ ಸಂದರ್ಭ ಇಲ್ಲಿನ ಮುಖ್ಯಾಧಿಕಾರಿ ವರ್ಗಾವಣೆಗೊಂಡಿದ್ದಾರೆ. ಕೆ.ಎಸ್‌. ರವಿಕುಮಾರ್‌ ಪ್ರಭಾರ ಮುಖ್ಯಾಧಿಕಾರಿಯಾಗಿ ಇಲ್ಲಿ ಕಾರ್ಯನಿರ್ವಹಿ ಸುತ್ತಿದ್ದಾರೆ. ಸಿಬಂದಿಗೆ ಎರಡು ತಿಂಗಳಿಂದ ವೇತನವೂ ಇಲ್ಲ ಎಂಬ ಮಾಹಿತಿ ಇದೆ.

ಕಸ ವಿಲೇವಾರಿ
ಕಸ ಸಂಗ್ರಹಿಸಲು ಒಟ್ಟು 15 ಮಂದಿ ಸಿಬಂದಿ ಬೇಕು. ಖಾಯಂ ಸಿಬಂದಿ ಇಲ್ಲದೇ ಇರುವುದರಿಂದ ತಾತ್ಕಾಲಿಕ ಸಿಬಂದಿಯನ್ನು ನೇಮಿಸಬೇಕು. ಅವರಿಗೆ ವೇತನ ಪಾವತಿಯನ್ನು ಮಾಡುವುದಕ್ಕಾಗಿ ಕಾರ್ಮಿಕರನ್ನಾಗಿಸಲಾಗಿದೆ. ಆದುದರಿಂದ ಕಸದ ಕೆಲಸಕ್ಕೆ ಸಿಗುವುದು ಕೇವಲ 6-7 ಮಂದಿ. ಅವರಲ್ಲಿ ಅನಾರೋಗ್ಯದ ಕಾರಣಕ್ಕೆ ಕೆಲವರು ರಜೆಯಲ್ಲಿದ್ದಾರೆ. ಕಸ ಸಂಗ್ರಹಕ್ಕೆ ವಾಹನ ತೆರಳದಂತಹ ಸ್ಥಿತಿಯಿದೆ. ಕೆಲವು ದಿನಗಳಲ್ಲಿ ವಾಹನ ಓಡಾಟವೇ ಮಾಡಿಲ್ಲ. ವಾಹನವು ಕಚೇರಿ ಮುಂಭಾಗದಲ್ಲಿ ನಿಂತುಕೊಂಡಿದೆ.

ಗೊಬ್ಬರವೂ ಇಲ್ಲ
ಸಿಬಂದಿಯಿಲ್ಲದೇ ಇದ್ದರೆ ಕಸದಿಂದ ಗೊಬ್ಬರ ಮಾಡಲಾಗುವುದಿಲ್ಲ. ಹಸಿ ಕಸ ಮತ್ತು ಒಣ ಕಸಗಳನ್ನು ಪ್ರತ್ಯೇಕಿಸಿ ಕೊಡಬೇಕೆಂದು ಹೇಳಿದರೂ ನಾಗರಿಕರು ಸೂಕ್ತವಾಗಿ ಸ್ಪಂದಿಸಿಲ್ಲ. ಆದುದರಿಂದ ಈಗ ಕಸ ಪಳಿಕೆಯಲ್ಲಿ ರಾಶಿ ಬೀಳುತ್ತಿದೆ. ಅವುಗಳ ಗೊಬ್ಬರ ಮಾಡುವ ಕಾರ್ಯವೂ ಸ್ಥಗಿತಗೊಂಡಿದೆ.

ಇಂಟರ್‌ಲಾಕ್‌ ರಸ್ತೆ
ಚುನಾವಣೆ ನೀತಿಸಂಹಿತೆಯ ಅವಧಿ ಯಲ್ಲಿ ಪಳಿಕೆಗೆ ಪ್ರವೇಶಿಸುವ ಕಾಂಕ್ರೀಟ್‌ ರಸ್ತೆಯನ್ನು ಕಿತ್ತೆಸೆದು ಇಂಟರ್‌ಲಾಕ್‌ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ. ಕಾಂಕ್ರೀಟ್‌ ರಸ್ತೆಯನ್ನು ಕಿತ್ತೆಸೆದದ್ದಕ್ಕೆ ಕಾರಣವೇನು? ಇದು ಪ.ಪಂ. ಅಧ್ಯಕ್ಷರ ಅಥವಾ ಸ್ಥಳೀಯ ಸದಸ್ಯರ ಗಮನಕ್ಕೂ ಬಂದಂತಿಲ್ಲ. ಅಳವಡಿಸಿದ ಇಂಟರ್‌ಲಾಕ್‌ ರಸ್ತೆ ಕಾಮಗಾರಿಯೂ ಕಳಪೆಯಾಗಿದೆ. ಈಗಾಗಲೇ ಅದು ಅಲ್ಲಲ್ಲಿ ಕೆಟ್ಟುಹೋಗಿದೆ.

Advertisement

ವ್ಯಾಪಾರಿಗಳು ಪರವಾನಿಗೆಗೆ ಅರ್ಜಿ ಸಲ್ಲಿಸಿದ್ದಾರೆ. ಕೆಲವು ತಿಂಗಳುಗಳು ಕಳೆದರೂ ಅದು ಸಿಗುತ್ತಿಲ್ಲ. ವಾಸ್ತವ್ಯ ಪತ್ರ ಹಿಂದೆ ಸಿಗುತ್ತಿತ್ತು. ಚುನಾವಣೆ ನೀತಿಸಂಹಿತೆ ಬಂದ ಬಳಿಕ ಅದೂ ಸಿಗುತ್ತಿಲ್ಲ. ಒಟ್ಟಿನಲ್ಲಿ ಸ್ಥಳೀಯ ನಾಗರಿಕರು ವಿಟ್ಲ ಪಟ್ಟಣ ಪಂಚಾಯತ್‌ಗೆ ತೆರಳಿದರೆ ಯಾವ ಕೆಲವೂ ಆಗುವುದಿಲ್ಲ ಎಂದು ದೂರುತ್ತಿದ್ದಾರೆ.

ಸಂಚಾರಕ್ಕೆ ಅಡ್ಡಿ
ಪಳಿಕೆಯಲ್ಲಿ ಕಾಂಕ್ರೀಟ್‌ ರಸ್ತೆಯನ್ನು ಕಿತ್ತು, ಇಂಟರ್‌ಲಾಕ್‌ ಅಳವಡಿಸಿದ್ದು ಎರಡು ದಿನಗಳ ಹಿಂದೆ ತಿಳಿದುಬಂತು. ಯಾಕೆ ಎಂದು ಎಂಜಿನಿಯರ್‌ ಅವರಲ್ಲಿ ಕೇಳಿದೆ. ಕಾಂಕ್ರೀಟ್‌ ರಸ್ತೆ ಕೆಟ್ಟುಹೋಗಿ, ಸಂಚಾರಕ್ಕೆ ಅಡ್ಡಿಯಾಗಿತ್ತು. ಹಾಗೆ ಬದಲಾಯಿಸಿದ್ದೇವೆ ಎಂದಿದ್ದಾರೆ. ಪಂಚಾಯತ್‌ನಲ್ಲಿ ಕೆಲಸ ಆಗುತ್ತಿಲ್ಲವೆಂದು ನಾಗರಿಕರು ದೂರುತ್ತಿದ್ದಾರೆ. ನೀತಿಸಂಹಿತೆಯ ಕಾರಣವೂ ತುಸು ಅಡ್ಡಿಯಾಯಿತು.
 - ದಮಯಂತಿ, ಅಧ್ಯಕ್ಷರು, ವಿಟ್ಲ ಪಟ್ಟಣ ಪಂಚಾಯತ್‌

ತುರ್ತು ಸಭೆ
ಕಸ ವಿಲೇವಾರಿ ಮಾಡುತ್ತೇವೆ. ಗಾಡಿಗಳು ಓಡುತ್ತಿವೆ. ಪಳಿಕೆಯಲ್ಲಿ ಗೊಬ್ಬರ ಮಾಡುತ್ತಿದ್ದೇವೆ. ಪರವಾನಿಗೆಯನ್ನು ಕೊಡುತ್ತೇವೆ. ಎಲ್ಲ ವ್ಯವಸ್ಥೆಗೆ ಕ್ರಮಕೈಗೊಳ್ಳುವುದಕ್ಕಾಗಿ ತುರ್ತು ಸಭೆ ಕರೆದಿದ್ದೇವೆ. ದಿನಾಂಕ ನಿಗದಿಯಾಗಿಲ್ಲ. ಆಮೇಲೆ ಎಲ್ಲ ವಿಚಾರಗಳಲ್ಲೂ ಸೂಕ್ತ ಕ್ರಮಕೈಗೊಳ್ಳುತ್ತೇವೆ.
– ಕೆ.ಎಸ್‌.ರವಿ ಕುಮಾರ್‌ ಪ್ರಭಾರ ಮುಖ್ಯಾಧಿಕಾರಿ, ವಿಟ್ಲ ಪಟ್ಟಣ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next