Advertisement

ವಿಟ್ಲ ಪ. ಪಂ.: 7 ಕೊಳವೆಬಾವಿಗಳಿಗೆ ಮರುಜೀವ

12:54 PM Mar 16, 2017 | Team Udayavani |

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ 7 ಅಣೆಕಟ್ಟು ನಿರ್ಮಿಸಲಾಗಿತ್ತು. ಚಂದಳಿಕೆ ಸಮೀಪದ ಕೂಟೇಲು ಅಣೆಕಟ್ಟೆಯೊಂದನ್ನು ಬಿಟ್ಟು ಉಳಿದೆಲ್ಲ ಅಣೆಕಟ್ಟೆಗಳಲ್ಲೂ ನೀರು ಮಾಯವಾಗಿದೆ. ಅಲ್ಲಿ ನೀರಿಲ್ಲದೆ  ಹೋದರೂ ಈ ಬಾರಿ ನೀರಿನ ಸಮಸ್ಯೆ ತೀವ್ರವಾಗಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ ಅಣೆಕಟ್ಟೆಗಳಿಂದ ಊರಿನಾ ದ್ಯಂತ ಪ್ರಯೋಜನ ಕಂಡುಬಂದಿದೆ ಎಂದು ಆಡಳಿತ ವ್ಯವಸ್ಥೆ ಸಮರ್ಥಿಸುತ್ತದೆ.

Advertisement

ಟ್ಯಾಂಕರ್‌ ಬಂದಿಲ್ಲ 
ಕಳೆದ ವರ್ಷ ಫೆಬ್ರವರಿ ತಿಂಗಳ ಕೊನೆಗೆ ಅಥವಾ ಮಾರ್ಚ್‌ ತಿಂಗಳ ಆರಂಭದಲ್ಲೇ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲು ಆರಂಭಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಈ ತನಕ ಟ್ಯಾಂಕರ್‌ ಬರಲಿಲ್ಲ ಎಂಬ ಸಮಾಧಾನ ಪಟ್ಟಣ ಪಂಚಾಯತ್‌ಗಿದೆ. ಅಣೆಕಟ್ಟೆಗಳಲ್ಲಿ ನೀರಿಲ್ಲದೆ ಆರಿರುವುದರಿಂದ ನೀರಿನ ಮಟ್ಟ ಕುಸಿತ ಕಾಣಲು ಆರಂಭವಾಗಿದೆ. ಆದರೆ ನೀರಿಗಾಗಿ ಹಪಹಪಿಕೆ ಅಥವಾ ಎಲ್ಲೆಡೆ ಭಾರೀ ಬೇಡಿಕೆ ಆರಂಭವಾಗಿಲ್ಲ. 

ಯೋಜನೆಗಳಿಗೆ ಸಜ್ಜು 
ವಿಟ್ಲ  ಪಟ್ಟಣ ಪಂಚಾಯತ್‌  ಈ ಬಾರಿ ನೀರಿಗೇ ಪ್ರಥಮ ಆದ್ಯತೆ ನೀಡಿತ್ತು. ಈ ಬಾರಿ 7 ಅಣೆಕಟ್ಟೆಗಳನ್ನು ರಚಿಸಿದ್ದರೂ ಅವುಗಳ ನೀರನ್ನು ಸರಬರಾಜು ಮಾಡಲಿಲ್ಲ. ಗುಣಮಟ್ಟದ ನೀರನ್ನು ಅಂದರೆ ಕೊಳವೆಬಾವಿಗಳ ನೀರನ್ನು ಮಾತ್ರ ಸರಬರಾಜು ಮಾಡಲಾಗಿತ್ತು. ಇವೆಲ್ಲವೂ ಪರಿಣಾಮಕಾರಿಯಾಗಿ ಫಲ ನೀಡಿದ್ದರೂ ಇನ್ನು ಅನೇಕ ಯೋಜನೆಗಳ ಆವಶ್ಯಕತೆಯಿದೆ. ಕೊಳವೆಬಾವಿಗಳನ್ನು ಶಾಶ್ವತವಾಗಿ ನಂಬಲಸಾಧ್ಯವಾಗಿರುವುದರಿಂದ ಕೆರೆ ನಿರ್ಮಾಣ, ಪುನಃಶ್ಚೇತನದತ್ತ ಗಮನಹರಿಸಬೇಕಾಗುತ್ತದೆ. ನೀರು ಬಿಡುವವರ ಸಮಸ್ಯೆ, ವಿದ್ಯುತ್‌ ಸಮಸ್ಯೆಯೂ ತೊಂದರೆ ಕೊಡುತ್ತಿದೆ. ವಿದ್ಯುತ್‌ ಸಮಸ್ಯೆ ಕಠಿನವಾದಂತೆ ನೀರು ಸರಬರಾಜು ವ್ಯವಸ್ಥೆ ಬಿಗಡಾಯಿಸುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟು ಕೆಲವೊಂದು ಕ್ರಮಕೈಗೊಳ್ಳಲಾಗುತ್ತಿದೆ.
ಪುಷ್ಕರಿಣಿ ನೀರು – ಉಳಿದ ಬಾವಿಗಳಲ್ಲಿ ಪ್ರಭಾವ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯ ನೀರನ್ನು ಕಳೆದ ವರ್ಷ ಕೆಲವು ಪ್ರದೇಶಗಳಿಗೆ ಒದಗಿಸಲಾಗಿತ್ತು. ಈ ಬಾರಿ ಅದರ ನೀರನ್ನು ಮುಟ್ಟಲಿಲ್ಲ. ಪರಿಣಾಮವಾಗಿ ಸುತ್ತಮುತ್ತಲ ಅನೇಕ ಕುಟುಂಬಗಳು ಉಪಯೋಗಿಸುವ ಸ್ವಂತ ಬಾವಿಯಲ್ಲಿ ನೀರಿನ ಮಟ್ಟ ಕುಸಿಯಲಿಲ್ಲ. ಉಳಿದ ಕಡೆಗಳಿಗೂ ನೀರು ಸರಬರಾಜು ಮಾಡುವಲ್ಲಿ ತೊಂದರೆಯಾಗಲಿಲ್ಲ. ಇದು ಕೂಡ  ಪರಿಣಾಮಕಾರಿ ಹೆಜ್ಜೆಯಾಗಿದೆ.

ಜೋಗಿಮಠದಲ್ಲಿ ಟಾಂಕಿ ನಿರ್ಮಾಣ 
ವಿಟ್ಲದ ಜೋಗಿಮಠದ ಬಳಿ, ಕಳೆಂಜಿಮಲೆ ಗುಡ್ಡೆಯ ವರತೆ ನೀರು ಬರುತ್ತಲೇ ಇರುತ್ತದೆ. ಅದನ್ನು ಸಂಗ್ರಹಿಸುವುದಕ್ಕಾಗಿ ಅಲ್ಲಿ ಟಾಂಕಿ ನಿರ್ಮಿಸುವ ಯೋಜನೆ ಇದೆ. ಮಳೆಗಾಲದಲ್ಲಿಯೂ ಆ ನೀರನ್ನು ಸಂಗ್ರಹಿಸುವ ಯೋಜನೆ ರೂಪಿಸಲಾಗುವುದು. ನೆಕ್ಕರೆಕಾಡು ಎಂಬಲ್ಲಿಯೂ ಇದೇ ರೀತಿಯ ಯೋಜನೆ ರೂಪಿಸಲಾಗುವುದು ಎಂದು ಅಧ್ಯಕ್ಷ ಅರುಣ ಎಂ.ವಿಟ್ಲ ಹೇಳುತ್ತಾರೆ.

ಕೊಳವೆಬಾವಿಗಳಿಗೆ ಮರುಜೀವ 
ಈ ನಡುವೆ ಪಟ್ಟಣ ಪಂಚಾಯತ್‌ ಹೊಸ ಕೊಳವೆಬಾವಿಗಳನ್ನು ಕೊರೆಯುವ ಬದಲಾಗಿ ಹಳೆಯ 7 ಕೊಳವೆಬಾವಿಗಳಿಗೆ ಮರುಜೀವ ನೀಡಿದೆ. ವಿಟ್ಲ ಶೋಕಮಾತೆ ಇಗರ್ಜಿಯ ಬಳಿ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಬಳಿ, ಅನ್ನಮೂಲೆ, ಪುಚ್ಚೆಗುತ್ತು, ಕಂಬಳಬೆಟ್ಟು, ಸೀಗೆಬಲ್ಲೆ, ಕಾಂತಡ್ಕಗಳಲ್ಲಿ ಇವು ಫಲ ನೀಡಿವೆ. ಕೆಲವು ಕೊಳವೆಬಾವಿಗಳಲ್ಲಿ 2 ಇಂಚು, ಮತ್ತೆ ಕೆಲವಲ್ಲಿ 1.5 ಇಂಚು ನೀರು ಲಭಿಸಿದೆ. ಇದು ಕೂಡ  ನೀರು ಸರಬರಾಜು ವ್ಯವಸ್ಥೆಗೆ ಪೂರಕವಾಗಿದೆ. ಉಕ್ಕುಡದಲ್ಲಿ ತೆಗೆದ ಹೊಸ ಕೊಳವೆಬಾವಿಗಳಲ್ಲಿ 3.5 ಇಂಚು ನೀರು ಮತ್ತು ನೆತ್ತರಕೆರೆಯಲ್ಲಿ 2 ಇಂಚು ನೀರು ಲಭಿಸಿದೆ.

Advertisement

ಪ್ರತಿದಿನ ನೀರು 
ಕಳೆದ ವರ್ಷ ಎಪ್ರಿಲ್‌ ತಿಂಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಕೊಡಲಾಗಿತ್ತು. ಈ ವರ್ಷ ಎಪ್ರಿಲ್‌ ಬಳಿಕ ಪ್ರತಿದಿನ ನೀರು ಸಿಗುವಂತೆ ಮಾಡಲಾಗುತ್ತದೆ. ದಿ| ಕೂಡೂರು  ಕೃಷ್ಣ ಭಟ್‌  ಅವರ ಆಡಳಿತಾವಧಿಯಲ್ಲಿ ನಿರ್ಮಿಸಿದ ಕೊಳವೆಬಾವಿಗಳನ್ನು ಹುಡುಕಾಡುತ್ತಿದ್ದೇವೆ. ಅವುಗಳಿಗೂ ಮರುಜೀವ ನೀಡುವ ಗುರಿಯಿರಿಸಿಕೊಂಡಿದ್ದೇವೆ. ನೆಕ್ಕರೆಕಾಡು, ಸೇರಾಜೆ ಎಂಬಲ್ಲಿ ನೀರಿಗೆ ಸಮಸ್ಯೆ ಹೆಚ್ಚು. ಸೇರಾಜೆಗೆ ಪೈಪ್‌ಲೈನ್‌ ವ್ಯವಸ್ಥೆಯೂ ಆಗಿಲ್ಲ. ಆ ಬಗ್ಗೆ ಗಮನ ಹರಿಸಲಾಗುವುದು.    
– ಅರುಣ ಎಂ.ವಿಟ್ಲ, ಪ.ಪಂ.  ಅಧ್ಯಕ್ಷ

– ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next