Advertisement

ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ

11:15 AM Aug 26, 2019 | Lakshmi GovindaRaj |

ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ವೈಭವದಿಂದ ಸಂಪನ್ನಗೊಂಡಿತು. ಅಷ್ಟಮಿ ದಿನ ನಿರ್ಜಲ ಉಪವಾಸವಿರುವ ಕಾರಣ ಶನಿವಾರ ದ್ವಾದಶಿಯಂತೆ ಮುಂಜಾವು ಶ್ರೀಕೃಷ್ಣ-ಮುಖ್ಯ ಪ್ರಾಣರಿಗೆ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿದರು.

Advertisement

ಇದಕ್ಕೂ ಮುನ್ನ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ಗೋಪಾಲಕೃಷ್ಣನ ಅಲಂಕಾರ ನಡೆಸಿದರು. ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು.

ಮೂರು ವಿಗ್ರಹಗಳ ಉತ್ಸವ: ಚಿನ್ನದ ರಥದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿ, ನವರತ್ನ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳ ಉತ್ಸವ ನಡೆಯಿತು. ಉತ್ಸವದಲ್ಲಿ ಪರ್ಯಾಯ ಪಲಿಮಾರು, ಕೃಷ್ಣಾಪುರ, ಅದಮಾರು ಕಿರಿಯ, ಪಲಿಮಾರು ಕಿರಿಯ ಶ್ರೀಪಾದರು ಪಾಲ್ಗೊಂಡಿದ್ದರು.

ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಒಂದೊಂದೇ ಮಡಕೆಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಸಾಗಿದರು. ಅಲಂಕೃತ ಆನೆ ಸುಭದ್ರೆ ಮೆರವಣಿಗೆಗೆ ಶೋಭೆ ನೀಡಿತು. ಮುಂಬೈನಿಂದ ಬಂದ ಅಲಾರೆ ತಂಡದವರು ಮಾನವ ಪಿರಮಿಡ್‌ ಮೂಲಕ ಮೊಸರು ಕುಡಿಕೆಗಳನ್ನು ಒಡೆದರು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸಲಾಯಿತು. ಉತ್ಸವ ನಡೆಯುವಾಗ ಪ್ರಸಾದ ಎಸೆಯುವ ಕ್ರಮವನ್ನು ಕೇವಲ ಸಾಂಕೇತಿಕವಾಗಿ ಹಣ್ಣುಗಳಿಗೆ ಮಾತ್ರ ಸೀಮಿತವಾಗಿಡಲಾಯಿತು.

ಹುಟ್ಟಿದ ಹೊತ್ತಿಗೆ ಮಳೆ: ಶ್ರೀಕೃಷ್ಣನ ಜನಿಸಿದ್ದು ಅಷ್ಟಮಿಯ ಮಧ್ಯರಾತ್ರಿ ಚಂದ್ರೋದಯದ ಹೊತ್ತಿಗೆ. ಆಗ ಮಳೆ ಬರುತ್ತಿತ್ತು. ಶುಕ್ರವಾರ ಮಧ್ಯರಾತ್ರಿ ಶ್ರೀಕೃಷ್ಣ ಮಠದಲ್ಲಿ ಮಹಾಪೂಜೆ, ಅರ್ಘ್ಯಪ್ರದಾನ ನಡೆಯುವಾಗಲೂ ಮಳೆ ಬರುತ್ತಿತ್ತು. ಶನಿವಾರ ಮಧ್ಯಾಹ್ನ ಮಳೆ ಬಂದಿದ್ದರೂ ಅಪರಾಹ್ನ ವಿಟ್ಲಪಿಂಡಿ ಉತ್ಸವ ನಡೆಯುವಾಗ ಮಳೆ ವಿರಾಮ ಹಾಡಿತ್ತು.

Advertisement

ಅತಿವೃಷ್ಟಿ ಪೀಡಿತರಿಗೆ ನಿಧಿ ಸಂಗ್ರಹಿಸಿದ ವೇಷಧಾರಿ ಗಾಂಧಿ!: ಈ ಬಾರಿ ಗಾಂಧೀಜಿ ವೇಷ ತೊಟ್ಟ ಉತ್ತರ ಕರ್ನಾಟಕದ ಐಹೊಳೆ ಮೂಲದ ಹನುಮಂತ ಅವರು ಕನಕದಾಸರ ಗುಡಿ ಎದುರು ಬಹಳ ಹೊತ್ತು ನಿಂತು ಜನರನ್ನು ದಂಗುಬಡಿಸಿದರು. 85 ವರ್ಷಗಳ ಹಿಂದೆ 1934ರ ಫೆ.25ರಂದು ಗಾಂಧೀಜಿಯವರು ಉಡುಪಿ ಅಜ್ಜರಕಾಡಿನಿಂದ ಕಲ್ಸಂಕಕ್ಕೆ ಇದೇ ರಥಬೀದಿ ಮಾರ್ಗ ವಾಗಿ ಕುಂದಾಪುರಕ್ಕೆ ತೆರಳಿದ್ದರು. ಅವರು ದಲಿತೋ ದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಬಂದಿದ್ದರೆ, ವೇಷಧಾರಿ ಗಾಂಧಿ ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಸಂತ್ರ ಸ್ತರಾದವರಿಗೆ ನೆರವಾಗಲು ನಿಧಿ ಸಂಗ್ರಹಿಸಿದ್ದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next