Advertisement

‘ನಿಯಮ ಪಾಲಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ’

08:27 AM Jan 03, 2019 | Team Udayavani |

ವಿಟ್ಲ: ರಸ್ತೆ ಬದಿಯ ಸುತ್ತಮುತ್ತಲಿನಲ್ಲಿ ಅಂಗಡಿ, ಮನೆ ನಿರ್ಮಾಣ ಮಾಡುವ ವೇಳೆ ರಸ್ತೆಗೆ ಜಾಗ ಬಿಡಬೇಕು. ಚರಂಡಿ ಮುಚ್ಚಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಜಾಗವನ್ನು ಸ್ವಾಧೀನ ಮಾಡುವಂತೆ ಕ್ರಮ ಜರಗಿಸಲಾಗುವುದು ಎಂದು ವಿಟ್ಲ ಪ.ಪಂ. ಅಧ್ಯಕ್ಷ ಅರುಣ್‌ ಎಂ. ವಿಟ್ಲ ಹೇಳಿದರು.

Advertisement

ಅವರು ಮಂಗಳವಾರ ವಿಟ್ಲ ಪ.ಪಂ.ನ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ವಿಟ್ಲದ ಸಾಲೆತ್ತೂರು ರಸ್ತೆಯಲ್ಲಿ ಮನೆ ನಿರ್ಮಾಣ ವೇಳೆ ರಸ್ತೆಗೆ ಜಾಗ ಬಿಟ್ಟುಕೊಟ್ಟಿಲ್ಲ. ಚರಂಡಿಯಲ್ಲಿ ಪೈಪು ಅಳವಡಿಸಿ ಚರಂಡಿಯನ್ನು ಮುಚ್ಚಲಾಗಿದೆ. ಶ್ರೀಮಂತರಿಗೆ ಹಾಗೂ ಬಡವರಿಗೆ ಎರಡು ರೀತಿಯ ಕಾನೂನು ಎಂಬಂತೆ ನಡೆಯುತ್ತಿದೆ. ಕಾನೂನು ಎಲ್ಲರಿಗೂ ಒಂದೇ ಅದು ಪಾಲನೆ ಆಗಬೇಕು ಎಂದು ವಿಪಕ್ಷ ನಾಯಕ ಅಶೋಕ್‌ ಕುಮಾರ್‌ ಶೆಟ್ಟಿ ಅವರ ಪ್ರಶ್ನೆಗೆ ಅಧ್ಯಕ್ಷರು ಉತ್ತರಿಸಿದರು.

ನಿವೇಶನ
ಸದಸ್ಯ ರವಿಪ್ರಕಾಶ್‌ ಮಾತನಾಡಿ, ವಿಟ್ಲ ಭಾಗದ ಬಡವರು ನಿವೇಶನಕ್ಕೆ ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಳೆದರೂ ಇದುವರೆಗೂ ಜಾಗದ ಗುರುತು ಮಾಡಿಲ್ಲ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಣ ನೀಡಿಯಾದರೂ ಜಾಗ ಖರೀದಿಸಬೇಕು ಎಂದು ಶಾಸಕರು ತಿಳಿಸಿದರೂ ಯಾವ ಕಾರ್ಯ ನಡೆದಿಲ್ಲ ಎಂದು ತಿಳಿಸಿದರು. ಈ ಸಂದರ್ಭ ಮಾತನಾಡಿದ ಅಧ್ಯಕ್ಷರು, ಈ ಬಗ್ಗೆ ಜಾಗದ ಬಗ್ಗೆ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಆಟೋ ನಿಲುಗಡೆ
ನೂತನವಾಗಿ ನಿರ್ಮಾಣಗೊಂಡ ಅಡ್ಡದ ಬೀದಿ-ಬಾಕಿಮಾರ್‌ ಸಂಪರ್ಕ ರಸ್ತೆಯಲ್ಲಿ ಆಟೋ ರಿಕ್ಷಾಗಳು ನಿಲ್ಲುವ ಪರಿಣಾಮ ಇತರ ವಾಹನಗಳಿಗೆ ತೊಂದರೆಯಾಗುತ್ತಿದೆ. ಆಟೋಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ರಾಮ್‌ದಾಸ್‌ ಶೆಣೈ ತಿಳಿಸಿದರು.

ಬೀದಿಬದಿ ವ್ಯಾಪಾರ ಸದಸ್ಯ ಶ್ರೀಕೃಷ್ಣ ಮಾತನಾಡಿ, ವಿಟ್ಲ ಪಂಚಲಿಂಗೇಶ್ವರ ದೇವರ ಜಾತ್ರೆ ವೇಳೆ ದೇವಸ್ಥಾನದ ರಸ್ತೆಯ ಎರಡು ಬದಿಗಳಲ್ಲಿ ಬೀದಿಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿದೆ. ಒಂದು ಬದಿಯಲ್ಲಿ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದರು. ಈ ಬಗ್ಗೆ ಉತ್ತರಿಸಿದ ಅಧ್ಯಕ್ಷರು, ಈ ಬಗ್ಗೆ ಸಂಬಂಧಪಟ್ಟವರು ಸಭೆ ಕರೆದು ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ಸ್ವಚ್ಛತೆ ವಿಭಾಗ ರಾಯಭಾರಿ ಜಾನ್‌ ಡಿ’ಸೋಜಾ ಮಾಹಿತಿ ನೀಡಿದರು. ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ಉಷಾಕೃಷ್ಣಪ್ಪ, ಇಂದಿರಾ ಅಡ್ಯಾಳಿ, ಲೋಕನಾಥ ಶೆಟ್ಟಿ ಕೊಲ್ಯ, ಲತಾ ಅಶೋಕ್‌, ಹಸೈನಾರ್‌ ನೆಲ್ಲಿಗುಡ್ಡೆ, ಸುನೀತಾ ಕೋಟ್ಯಾನ್‌, ಮಂಜುನಾಥ ಕಲ್ಲಕಟ್ಟ, ಅಬೂಬಕ್ಕರ್‌, ಗೀತಾ ಪುರಂದರ, ಸಂಧ್ಯಾ ಮೋಹನ್‌, ನಾಮನಿರ್ದೇಶಿತ ಸದಸ್ಯರಾದ ಸಮೀರ್‌ ಪಳಿಕೆ, ಭವಾನಿ ರೈ, ಪ್ರಭಾಕರ್‌ ಭಟ್‌, ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಎಂಜಿನಿಯರ್‌ ಶ್ರೀಧರ್‌ ಉಪಸ್ಥಿತರಿದ್ದರು.

Advertisement

ಸಂತೆ ಜಾಗ ಸ್ಥಳಾಂತರ
ವಿಟ್ಲದಲ್ಲಿ ವಾರದ ಸಂತೆಯಿಂದ ವಾಹನ ದಟ್ಟನೆಗೆ ಕಾರಣವಾಗುತ್ತಿದೆ. ಈಗ ನಡೆಯುವ ಸಂತೆ ಜಾಗ ಸ್ಥಳಾಂತರ ಮಾಡಿ ಬಾಡಿಗೆಗೆ ಜಾಗ ಪಡೆದು ಅಲ್ಲಿ ಸಂತೆ ನಡೆಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದರಿಂದ ವಾಹನ ದಟ್ಟನೆ ನಿಯಂತ್ರಿಸಲು ಸಾಧ್ಯ ಎಂದು ವಿಟ್ಲ ಪ.ಪಂ. ಅಧ್ಯಕ್ಷ ಅರುಣ್‌ ಎಂ. ವಿಟ್ಲ ತಿಳಿಸಿದರು. ಈ ಸಂದರ್ಭ ಸದಸ್ಯರು ಪುತ್ತೂರಿನಲ್ಲಿ ನಡೆದಂತೆ ಸಂತೆ ವಿವಾದ ಇಲ್ಲಿ ಮರುಕಳಿಸದಂತೆ ಜಾಗೃತೆ ವಹಿಸಬೇಕು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next