Advertisement
ಅಧ್ಯಕ್ಷರು ಅಜೆಂಡವನ್ನು ಸಭೆಗೆ ಓದುತ್ತಿದ್ದಾಗ ಬಿಜೆಪಿ ಸದಸ್ಯ ರಾಮದಾಸ ಶೆಣೈ ಅವರು ಆಕ್ಷೇಪಿಸಿ, ಮಾ.1ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯ ನಂಬ್ರ 257/2018-19ರಲ್ಲಿ 3 ಕಾಮಗಾರಿಗಳ ಟೆಂಡರ್ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಪ.ಪಂ.ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು ಸೇರಿ ಒಟ್ಟು 12 ಮಂದಿ ಸದಸ್ಯರು ನಿರ್ಣಯ ಮಾಡಲಾಗಿದೆ. ಸಭೆಯ ಮಂಜೂರಾತಿ ಯನ್ನು ಪಡೆಯದೇ ಈ ಬಗ್ಗೆ ಟೆಂಡರ್ ಕರೆಯಲಾಗಿದೆ. ಆ ಬಗ್ಗೆ ನಿರ್ಣಯವನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
Related Articles
Advertisement
ಸ್ವಲ್ಪ ಸಮಯದ ಬಳಿಕ ಪಟ್ಟಣ ಪಂಚಾಯತ್ ಕಚೇರಿಗೆ ಮುಂಭಾಗದಲ್ಲಿ ಕುಳಿತ ಬಿಜೆಪಿ ಸದಸ್ಯರು ಅಧ್ಯಕ್ಷರಿಗೆ ಧಿಕ್ಕಾರ ಕೂಗಲಾರಂಭಿಸಿದರು. ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ ಅವರು ಮಾತನಾಡಿ, ಕೊಡಂಗೆಯಲ್ಲಿ ಸೋಲಾರ ದಪ ಅಳವಡಿಕೆ, ಬೊಬ್ಬೆಕೇರಿ ಕೋಡಿಯಲ್ಲಿ ದಾರಿ ಅಭಿವೃದ್ಧಿ ಕಾಮಗಾರಿ, ರಥಬೀದಿಯಲ್ಲಿ ಚರಂಡಿ ಕಾಮಗಾರಿ, ಕೊಡಂಗೆ ರಸ್ತೆ ಬದಿ ತಡೆಗೋಡೆ ರಚನೆ ಕಾಮಗಾರಿಯ ನಿರ್ಣಯಗಳಿಗೆ ಆಕ್ಷೇಪಿಸಿದ್ದೇವೆ. ಆದರೆ ಅದನ್ನು ತಿದ್ದುಪಡಿ ಮಾಡಿ, ಟೆಂಡರ್ ಕರೆದಿದ್ದಾರೆ. ಈ ಸಭೆಯಲ್ಲಿ ಟೆಂಡರ್ ಅಂತಿಮಗೊಳಿಸಲು ನಾವು ವಿರೋಧಿಸಿದ್ದೇವೆ. ಅಧ್ಯಕ್ಷರು ಇದನ್ನೆಲ್ಲ ತಿರಸ್ಕರಿಸಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಇಲ್ಲಿ ಬಿಜೆಪಿಯ ಬಹುಮತವಿದ್ದೂ ಪ್ರತಿಪಕ್ಷದ ಸದಸ್ಯರೆಂದು ಕರೆಯಲಾಗುತ್ತಿದೆ. ಈಗ ವಿರೋಧ ಪಕ್ಷ ಯಾವುದು ? ಆಡಳಿತ ಪಕ್ಷ ಯಾವುದು ಎಂಬ ಗೊಂದಲವೂ ಇಲ್ಲಿದೆ ಎಂದರು. ಬಿಜೆಪಿ ಮನವಿ : ಪಂಚಾಯತ್ ವ್ಯಾಪ್ತಿಯಲ್ಲಿರುವ ಅನೇಕ ರಸ್ತೆಗಳು, ಚರಂಡಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಮೊದಲೇ ಪುರಸಭಾ ನಿಧಿಯಿಂದ ಮಾಡಿಸಿರುವ ಕಾಮಗಾರಿಗಳ ಅನುದಾನ 40 ಸಾವಿರ ರೂ.ಗಳನ್ನು ಗುತ್ತಿಗೆದಾರರಿಗೆ ಪಾವತಿಸಿಲ್ಲ. ಈ ನಡುವೆ 9.33 ಲಕ್ಷ ರೂ.ಗಳ ಮೊತ್ತದ ಕಾಮಗಾರಿಯನ್ನು ಅಕ್ರಮವಾಗಿ ಟೆಂಡರ್ ಮಾಡಿರುವುದು ಸರಿಯಲ್ಲ. ಸಭೆಯ ಒಪ್ಪಿಗೆ ಇಲ್ಲದೇ ಮಾಡಿರುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ. ಬಹುಮತ ಪಡೆದ ಪಕ್ಷದವರನ್ನು ಪ್ರತಿಪಕ್ಷದ ಸದಸ್ಯರೆಂದು ಉಲ್ಲೇಖಿಸಲಾಗಿದೆ. ಮೀಸಲಾತಿ ನಿಯಮದಿಂದ ಪ್ರತಿಪಕ್ಷ ಸದಸ್ಯರು ಅಧ್ಯಕ್ಷ ಸ್ಥಾನ ಪಡೆದಿದ್ದಾರೆ ಹೊರತು ಬಹುಮತ ಪಡೆದ ಪಕ್ಷದವರು ಪ್ರತಿಪಕ್ಷದ ಸದಸ್ಯರಾಗಲು ಸಾಧ್ಯವಿಲ್ಲ. ತಿರುಚಿ ಬರೆದ ನಿರ್ಣಯದ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಿದ್ದೇವೆ. ಈ ಕಾಮಗಾರಿ ನಡೆದಲ್ಲಿ ಮುಂದಿ ನಸಮಸ್ಯೆಗೆ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ, ಇದೇ ರೀತಿ ಮುಂದುವರಿದರೆ ನಾವು ಯಾವುದೇ ಸಭೆಗೆ ಹಾಜರಾಗುವುದಿಲ್ಲ ಎಂದು ಬಿಜೆಪಿಯ 12 ಸದಸ್ಯರು ಮನವಿ ಪತ್ರವನ್ನು ಮುಖ್ಯಾಽಕಾರಿಗೆ ಸಲ್ಲಿಸಿದ್ದಾರೆ. ನಿರ್ಣಯ ತಿರುಚಲಿಲ್ಲ : ಅಧ್ಯಕ್ಷೆ ದಮಯಂತಿ ಅವರು ಉದಯವಾಣಿ ಪ್ರತಿನಿಧಿ ಜತೆ ಮಾತನಾಡಿ, ನಿರ್ಣಯವನ್ನು ನಾವು ತಿರುಚಲಿಲ್ಲ. ಕಾಮಗಾರಿ ನಿರ್ಣಯ, ಟೆಂಡರ್ ಬಿಜೆಪಿ ಅಧ್ಯಕ್ಷರ ಅವಧಿಯಲ್ಲೇ ಆಗಿದೆ. ನನ್ನ ಅವಧಿಯಲ್ಲಿ ಆ ಕಾಮಗಾರಿಯನ್ನು ನಿಲ್ಲಿಸಬೇಕೆಂಬುದು ಅವರ ಪ್ರಯತ್ನ. ಆದರೆ ನಾವು ಅದನ್ನು ಮುಂದುವರಿಸಿದ್ದೇವೆ. ಬಿಜೆಪಿ ಸದಸ್ಯರಿಗೆ ನನ್ನ ಅವಧಿಯಲ್ಲಿ ಅಭಿವೃದ್ಧಿ ಯಾಗಬಾರದೆಂಬ ಉದ್ದೇಶದಲ್ಲಿ ಗೊಂದಲ ಸೃಷ್ಟಿಸುತ್ತಾರೆ. ತೆರಿಗೆ ಪಾವತಿಸುವ ನಾಗರಿಕರಿಗೆ ಉಪಯುಕ್ತವಾದ ಅಭಿವೃದ್ಧಿ ಕಾರ್ಯ ಮಾಡಬೇಕಾಗಿದೆ. ಯಾವ ಬೇಧಭಾವ ಮಾಡದೇ ಎಲ್ಲ ಸದಸ್ಯರಿಗೆ 5.43 ಲಕ್ಷ ರೂ ಅನುದಾನ ಸಮಾನವಾಗಿ ಹಂಚಲಾಗಿದೆ. ಇದನ್ನೆಲ್ಲ ಗಮನಿಸುವಾಗ ಅವರಿಗೆ ಅಭಿವೃದ್ಧಿ ಬೇಡ, ಗೊಂದಲವೇ ಬೇಕೆನ್ನುವುದು ಸ್ಪಷ್ಟವಾಗುತ್ತದೆ. ಇವತ್ತಿನ ಸಭೆಯ ಪ್ರತಿಯೊಂದು ನಿರ್ಣಯವನ್ನೂ ಮಂಜೂರು ಮಾಡಲಾಗಿದೆ. ಈ ಸಭೆಯನ್ನು ಪೂರ್ಣಗೊಳಿಸಲಾಗಿದೆ ಎಂದರು. ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಅಧ್ಯಕ್ಷರು ಸಭೆಯಲ್ಲಿ ಮಾತನಾಡುವಾಗ ಒಬ್ಬೊಬ್ಬರಾಗಿ ಮಾತನಾಡಬೇಕಿತ್ತು. ಎಲ್ಲರೂ ಒಟ್ಟಿಗೇ ಮಾತನಾಡಿ, ಗೊಂದಲ ಸೃಷ್ಟಿಸುವುದು ಯಾಕೆ ? ರಾಮಮಂದಿರ ಬಳಿ ಚರಂಡಿ ಕಾಮಗಾರಿಗೆ 2.5 ಲಕ್ಷ ಅನುದಾನದಲ್ಲಿ ಕಾಮಗಾರಿ ಪೂರ್ತಿ ಯಾಗಲಿಲ್ಲ. ಮತ್ತೆ ಅದು ಸಂಪೂರ್ಣವಾಗಲು 4 ಲಕ್ಷ ರೂ. ಅನುದಾನವನ್ನು ಅಧ್ಯಕ್ಷರು ಇರಿಸಿದ್ದಾರೆ. ಅದು ತಪ್ಪೇ ? ಎಂದು ಪ್ರಶ್ನಿಸಿದ್ದಾರೆ. ಮುಖ್ಯಾಧಿಕಾರಿ ಮಾಲಿನಿ ಅವರು ಅಧ್ಯಕ್ಷರು ನಿರ್ಣಯಗಳನ್ನು ಓದಿ, ಸಭೆಯನ್ನು ಪೂರ್ಣಗೊಳಿಸಲಾಯಿತು ಎಂದಿದ್ದಾರೆ. ಇಂದಿನ ಸಭೆಯಲ್ಲಿ ಪ್ಲಾಸ್ಟಿಕ್ ಕಾರ್ಯಾಚರಣೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಬೇಕಾಗಿತ್ತು. ಅದಾಗಲಿಲ್ಲ. ಆದರೆ ನಾವು ಅದನ್ನು ಮಾಡಲೇಬೇಕು ಎಂದರು.