ವಿಟ್ಲ: ವಿಟ್ಲದಲ್ಲಿ ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗದಿಂದ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರು ರಾಜ್ಯ ರೈತ ಸಂಘ ಹಸಿರುಸೇನೆ ನೇತೃತ್ವದಲ್ಲಿ ವಿದ್ಯುತ್ ಮಾರ್ಗವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆ ಮೆರವಣಿಗೆಯನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ವಿಟ್ಲ ಉದ್ಘಾಟಿಸಿದರು. ಬಳಿಕ ಹೊರಟ ಪ್ರತಿಭಟನೆ ಮೆರವಣಿಗೆಯು ವಿಟ್ಲ ಪುತ್ತೂರು ರಸ್ತೆಯ ಚಂದ್ರನಾಥ ಸ್ವಾಮಿ ಬಸದಿಯಿಂದ ಹಳೆ ಬಸ್ ನಿಲ್ದಾಣ ಮೂಲಕ ಶಾಲಾ ರಸ್ತೆಯಲ್ಲಿ ಸಾಗಿ ನಾಡಕಚೇರಿಗೆ ತಲುಪಿತು.
ಮೆರವಣಿಗೆ ಸಾಗುವ ಸಂದರ್ಭದಲ್ಲೇ 400 ಕೆವಿ ಮಾರ್ಗದ ಸರ್ವೇ ತಂಡವು ವಿಟ್ಲ ಸಮೀಪದ ಪುಚ್ಚೆಗುತ್ತು ಎಂಬಲ್ಲಿ ಸರ್ವೇ ನಡೆಸುತ್ತಿದೆ ಎಂಬ ಮಾಹಿತಿ ಪ್ರತಿಭಟನೆಕಾರರಿಗೆ ತಿಳಿದುಬಂತು. ತತ್ ಕ್ಷಣ ಸಂತ್ರಸ್ತರು ರಸ್ತೆಯಲ್ಲಿ ನಿಂತು ರೈತವಿರೋಧಿ ಚಟುವಟಿಕೆ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.
ವಿಟ್ಲ ಪೊಲೀಸರು ಪುಚ್ಚೆಗುತ್ತಿಗೆ ತೆರಳಿ ಸರ್ವೇ ತಂಡವನ್ನು ನಿರ್ಗಮಿಸಲು ಸೂಚನೆ ನೀಡಿದ ಘಟನೆಯೂ ನಡೆಯಿತು. ಬಳಿಕ ಹೊರಟ ಪ್ರತಿಭಟನೆ ಮೆರವಣಿಗೆ ನಾಡಕಚೇರಿಯಲ್ಲಿ ಸಭೆ ನಡೆಸಿತು.