Advertisement

ವಿಟ್ಲ-ಕಬಕ ರಸ್ತೆ ಸ್ಥಿತಿ ಶೋಚನೀಯ : ರಸ್ತೆ ವಿಸ್ತರಣೆಯೂ ಆಗಲಿಲ್ಲ, ಮರುಡಾಮರು ಕಾಣಲೇ ಇಲ್ಲ

03:35 PM Aug 18, 2022 | Team Udayavani |

ವಿಟ್ಲ : ಕಬಕ-ಸುರತ್ಕಲ್‌ ರಾಜ್ಯ ಹೆದ್ದಾರಿಯು ಗ್ರಾಮೀಣ ಭಾಗವಾದ ಕಬಕದಿಂದ ವಿಟ್ಲದವರೆಗೆ ಶೋಚನೀಯ ಸ್ಥಿತಿ ತಲುಪಿದೆ. ಹತ್ತಾರು ವರ್ಷಗಳ ಬಳಿಕವೂ ಮರುಡಾಮರು ಕಾಣಲೇ ಇಲ್ಲ. ಈ 7 ಕಿ.ಮೀ. ದೂರದ ರಸ್ತೆಯಲ್ಲಿ ಸಂಚರಿಸಲು ವಾಹನ ಚಾಲಕರು, ಮಾಲಕರು ಸಂಕಟಪಡುತ್ತಾರೆ.

Advertisement

ಈ ಹಿಂದೆ ಈ ಹೆದ್ದಾರಿಯ ಪೊಳಲಿ ಕೈಕಂಬದಿಂದ ಕಬಕ ವರೆಗೆ ರಸ್ತೆಯ ಅಗಲ 5.50 ಮೀಟರ್‌ ಇತ್ತು. ಅದನ್ನು 7 ಮೀಟರ್‌ ಅಗಲ ಮಾಡಲು ಇಲಾಖೆ ಕ್ರಮ ಕೈಗೊಂಡಿತ್ತು. ಇದಕ್ಕಾಗಿ 18 ಕೋಟಿ ರೂ. ಅನು ದಾನ ಮಂಜೂರಾಗಿತ್ತು. ಗುತ್ತಿಗೆದಾರರು ಕಾಮಗಾರಿಯನ್ನು ಅಲ್ಲಲ್ಲಿ ಆರಂಭಿಸಿ, ವಿಟ್ಲ ಕಬಕ ರಸ್ತೆಯನ್ನು ವಿಸ್ತರಿಸುವ ಕಾಮಗಾರಿ ಕೈಗೆತ್ತಿಕೊಂಡರು. 1.50 ಮೀಟರ್‌ ಅಗಲ, ಒಂದು ಅಡಿ ಹೊಂಡ ತೋಡ ಲಾಯಿತು. ಆ ಹೊಂಡದಲ್ಲಿ ನೀರು ತುಂಬಿ, ಅಪಾಯಕಾರಿ ಸನ್ನಿವೇಶ ಉಂಟಾಯಿತು. ಅರ್ಧಂಬರ್ಧ ಕಾಮಗಾರಿ ನಡೆಯುತ್ತಿದ್ದಂತೆ ಗುತ್ತಿಗೆದಾರರು ನಾಪತ್ತೆಯಾದರು. ಕಾಮಗಾರಿ ಸ್ಥಗಿತ ಗೊಂಡಿತು. ರಸ್ತೆ ಹದಗೆಡುತ್ತಲೇ ಹೋಯಿತು.

ಗುತ್ತಿಗೆ ರದ್ದು
ರಸ್ತೆ ಫಲಾನುಭವಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಪ್ರಬಲ ಹೋರಾಟ, ಆಕ್ಷೇಪಗಳಿಗೆ ತುತ್ತಾದ ಇಲಾಖೆಯು ಗುತ್ತಿಗೆಯನ್ನು ರದ್ದುಪಡಿಸಿತು. ಹೊಸ ಟೆಂಡರ್‌ ಪ್ರಕ್ರಿಯೆಯೂ ನಡೆಯಿತು. ಗುತ್ತಿಗೆದಾರರು ಮುಂದೆ ಬರಲಿಲ್ಲ.

ರಸ್ತೆ ಫಲಾನುಭವಿಗಳು ಅಸಂಖ್ಯ
ಈ ರಸ್ತೆಯಲ್ಲಿ ನಿತ್ಯವೂ 30ಕ್ಕೂ ಅಧಿಕ ಬಸ್‌ ಸಂಚಾರ, ಟೂರಿಸ್ಟ್‌ ಕಾರು, ರಿಕ್ಷಾ, ಖಾಸಗಿ ವಾಹನಗಳ ಸಂಖ್ಯೆ ಅಪಾರ. ಅಳಿಕೆ, ಕನ್ಯಾನ, ಕರೋಪಾಡಿ, ಕೇಪು, ಪೆರುವಾಯಿ, ಮಾಣಿಲ, ವಿಟ್ಲಮುಟ್ನೂರು, ಕುಳ, ಇಡಿRದು, ವಿಟ್ಲ ಗ್ರಾಮಗಳ ಜನತೆ ಪುತ್ತೂರಿಗೆ ಈ ರಸ್ತೆಯಲ್ಲೇ ಸಾಗಬೇಕು. ಕೇರಳದಿಂದ ವಿಟ್ಲ ಪುತ್ತೂರು ಸಾಗುವುದಕ್ಕೇ ಇದೇ ಮುಖ್ಯ ರಸ್ತೆ. ಕೇರಳ ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರವೂ ಇದೇ ಮಾರ್ಗದಲ್ಲಿ.

ಸಾವು ನೋವು
ದ್ವಿಚಕ್ರ ವಾಹನ ಹೊಂಡಕ್ಕಿಳಿದಾಗ ಹಿಂಬದಿ ಕುಳಿತಿದ್ದ ಮಹಿಳೆಯೋರ್ವರು ಆಯ ತಪ್ಪಿ ರಸ್ತೆಗೆ ಬಿದ್ದು ಮೃತಪಟ್ಟಿದ್ದರೆ ಇನ್ನೋರ್ವ ಪುರುಷರೂ ಇದೇ ರೀತಿ ಸಾವನ್ನಪ್ಪಿದ್ದಾರೆ. ಈ ರಸ್ತೆಯಲ್ಲಿ ಸಂಚಾರ ಮಾಡಿದಾಗ ಸಂಭವಿಸಿದ ಅನೇಕ ಅಪಘಾತಗಳಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ.

Advertisement

ಮರುಡಾಮರಿಗೆ ಆಗ್ರಹ
ಈ ಪ್ರಮುಖ ರಸ್ತೆಯ ಅವಗಣನೆಯನ್ನು ಖಂಡಿಸುತ್ತೇವೆ. ಇನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಸಂಬಂಧಪಟ್ಟವರು ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

ಅಧಿಕಾರಿಗಳಿಂದ ಪರಿಶೀಲನೆ
ಎಸ್‌ಎಚ್‌ಡಿಪಿ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾ ಖಾಧಿಕಾರಿಗಳು ಈ ರಸ್ತೆಯನ್ನು ಪರಿಶೀಲಿಸಿದ್ದಾರೆ. ಎಸ್‌ಎಚ್‌ಡಿಪಿ ಇಲಾಖೆ ಇದಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಲೋಕೋ ಪಯೋಗಿ ಇಲಾಖೆ ಕಾಮಗಾರಿ ನಡೆಸಬೇಕು. 2019ರ ನ. 1ರಂದು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ ಅದೇ ಗುತ್ತಿಗೆದಾರರಿಗೆ ಮತ್ತೆ ಜವಾಬ್ದಾರಿ ನೀಡಿದ್ದರು. ಅವರು ಕಾಮಗಾರಿ ಆರಂಭಿಸಲೇ ಇಲ್ಲ.

2022ರಲ್ಲಿ ಬದಲಾಗಲಿಲ್ಲ
2022ರ ಜುಲೈ ಕೊನೆಯ ವರೆಗೂ ರಸ್ತೆಯ ಸ್ಥಿತಿ ಶೋಚನೀಯವಾಗಿಯೇ ಇದೆ. ಎರಡು ತಾಲೂಕುಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಗೆ ಡಾಮರು ಕಾಮಗಾರಿ ಎಂದೋ ಆಗಬೇಕಿತ್ತು ಆದರೆ ಆಗಲಿಲ್ಲ.

ಈಗ ರಸ್ತೆ ಹೇಗಿದೆ ?
ಕಂಬಳಬೆಟ್ಟು ಎಂಬಲ್ಲಿ ರಸ್ತೆಯಲ್ಲೇ ನೀರು ಸಾಗಿ, ರಸ್ತೆಯ ಅಗಲ ನಾಲ್ಕು ಮೀಟರಿಗೆ ಕುಸಿದಿದೆ. ವಿಟ್ಲ, ಕಲ್ಲಕಟ್ಟ, ಚಂದಳಿಕೆ, ಬದನಾಜೆ, ಕಂಬಳಬೆಟ್ಟು, ಉರಿ ಮಜಲು, ಅಳಕೆಮಜಲು, ಕಬಕವರೆಗೆ ರಸ್ತೆ ಯುದ್ದಕ್ಕೂ ಹೊಂಡಗಳೇ ಇವೆ. ಇದೀಗ ತೇಪೆ ಹಚ್ಚುವ ಕಾರ್ಯ ನಡೆದಿದೆ.

13 ಕೋಟಿ ರೂ. ಅನುದಾನ
5.50 ಮೀಟರ್‌ ರಸ್ತೆಯನ್ನು 7 ಮೀ.ಗೆ ವಿಸ್ತರಿಸುವ ಕಾಮಗಾರಿಯ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ತೊಂದರೆಯಾಗಿದೆ. ಆದರೆ ಇದೀಗ ಹೊಸ ಗುತ್ತಿಗೆದಾರರು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಮಾರ್ನಬೈಲಿನಿಂದ ಕಬಕ ವರೆಗೆ ಒಟ್ಟು 13 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ.
– ಪ್ರೀತಮ್‌, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಬಂಟ್ವಾಳ‌.

ಕಾಮಗಾರಿ ನಡೆಯಲಿ
ಈ ರಸ್ತೆ ಸರ್ವಋತು ಉತ್ತಮ ರಸ್ತೆ ಯಾಗಬೇಕೆಂದು ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡುತ್ತೇನೆ. ನೆನೆಗುದಿಗೆ ಬಿದ್ದ ಈ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಿಕೊಡಬೇಕಾಗಿರುವುದು ಇಲಾಖೆಯ, ಅಧಿಕಾರಿಗಳ, ಜನಪ್ರತಿನಿಧಿಗಳ ಕರ್ತವ್ಯವೂ ಆಗಿದೆ.
– ಕೃಷ್ಣರಾಜ್‌, ಅಳಕೆಮಜಲು

Advertisement

Udayavani is now on Telegram. Click here to join our channel and stay updated with the latest news.

Next