Advertisement

ಕೊಯ್ಲು, ಔಷಧ ಸಿಂಪಡಣೆಗೆ ಕಾರ್ಮಿಕರ ಕೊರತೆ ಇರದು

12:29 PM Dec 09, 2018 | Team Udayavani |

ವಿಟ್ಲ: ಅಡಿಕೆ ಬೆಳೆಗಾರರು ಫಸಲು ಪಡೆಯಲು ಯೋಚಿಸಬೇಕಾಗುತ್ತಿರಲಿಲ್ಲ. ನಿರ್ವಹಣೆ ವೆಚ್ಚವನ್ನು ನಿಭಾಯಿಸುವ ಬಗ್ಗೆ ಚಿಂತಿಸುತ್ತಿರಲಿಲ್ಲ. ಆರ್ಥಿಕವಾದ ಹೊಡೆತಗಳಿಗೂ ಭಾರೀ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಸೂಕ್ತ ಸಮಯದಲ್ಲಿ ಸೂಕ್ತ ಗೊಬ್ಬರ, ಕಾಲ ಕಾಲಕ್ಕೆ ನೀರಾವರಿ ವ್ಯವಸ್ಥೆಯನ್ನು ಹೊಂದಿಸಿಕೊಳ್ಳುವ ಬೆಳೆಗಾರರು ಅಡಿಕೆ ಕೊಯ್ಲು ಮತ್ತು ಔಷಧ ಸಿಂಪಡಣೆಗೆ ಕಾರ್ಮಿಕರ ಕೊರತೆಯಿಂದ ತತ್ತರಿಸಿದ್ದರು. ಅದಕ್ಕೆ ಅವಶ್ಯವಾದ ಯುವ ಪಡೆ ತಯಾರಾಗಿರಲೇ ಇಲ್ಲ. ಇದೀಗ ಆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋ ಸಂಸ್ಥೆ ವಿಟ್ಲ ಸಿಪಿಸಿಆರ್‌ಐಯಲ್ಲಿ ಅಡಿಕೆ ಕೌಶಲ ಪಡೆ ತರಬೇತಿ ಶಿಬಿರವನ್ನು ಆಯೋಜಿಸಿರುವುದು ಸೂಕ್ತವಾಗಿದೆ. ಅಡಿಕೆ ಮರ ಏರುವ ಹಾಗೂ ಅಡಿಕೆ ಕೊಯ್ಲು, ಔಷಧ ಸಿಂಪಡಣೆಯ ಬಗ್ಗೆ ಪ್ರಾಥಮಿಕ ಜ್ಞಾನ ನೀಡುವ ಕಾರ್ಯ ಇಲ್ಲಿ ನಡೆಯುತ್ತಿದೆ.

Advertisement

ಹಿಂದೆ ಹೇಗಿತ್ತು ?
ಹಿಂದೆ ಅಡಿಕೆ ಬೆಳೆಗಾರರಿಗೆ ಅಡಿಕೆ ಕೊಯ್ಲು, ಔಷಧ ಸಿಂಪಡಣೆ ಸಮಸ್ಯೆಯೇ ಆಗಿರಲಿಲ್ಲ. ನುರಿತ ಕಾರ್ಮಿಕರ ಪಡೆಯಿತ್ತು. ಇತ್ತೀಚೆಗೆ ಯುವ ಕಾರ್ಮಿಕರು ಈ ನಿಟ್ಟಿನಲ್ಲಿ ಸೃಷ್ಟಿಯಾಗದೇ ಬೆಳೆಗಾರರು ಸಮಸ್ಯೆ ಎದುರಿಸುವಂತಾಯಿತು. ವರ್ಷಪೂರ್ತಿ ಶ್ರಮಿಸಿ, ಕೊಂಬೆಯಲ್ಲಿ ಅಡಿಕೆ ಗೊನೆಗಳು ಬೆಳೆಯುತ್ತಿರುವುದನ್ನು ನೋಡಿ ಸಂಭ್ರಮಿಸುವಂತಿರಲಿಲ್ಲ. ಮಳೆಗಾಲದ ಅಬ್ಬರಕ್ಕೆ ಕೊಳೆ ರೋಗ ಪ್ರವೇಶಿಸಿ, ಅಡಿಕೆ ಕೊಳೆತು ಬಿದ್ದು ನಾಶವಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿ ನಲ್ಲಿ ಯುವ ಕಾರ್ಮಿಕರನ್ನು ಸಿದ್ಧಪಡಿಸುವ ಅನಿವಾರ್ಯ ವಿತ್ತು. ಈ ತರಬೇತಿ ಈಗಾಗಲೇ ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದ್ದು, ವಿಟ್ಲದಲ್ಲಿ ನಡೆಯುವುದು ಎರಡನೆಯದು.

30 ಮಂದಿಗೆ 100 ಅರ್ಜಿ!
ಈ ಶಿಬಿರಕ್ಕೆ 30 ಯುವಕರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ 100ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಬಹುತೇಕ ಅರ್ಜಿಗಳು ಯುವಕರದ್ದು. ಈಗ ತರಬೇತಿಗೆ ಆಯ್ಕೆಯಾಗಿರುವವರಲ್ಲಿ 27ರಿಂದ 32 ವರ್ಷ ಪ್ರಾಯದ ಒಳಗಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಯುವಕರಿದ್ದಾರೆ. ಯುವ ಸಮೂಹ ಕೃಷಿಯತ್ತ ಆಕರ್ಷಿತವಾಗಿರುವುದು ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ. 

ಮಾಹಿತಿ
ಔಷಧ ಸಿಂಪಡಣೆ ಬಗ್ಗೆ ಬೇಕೂರಿನ ತಿಮ್ಮಪ್ಪ ಭಂಡಾರಿ, ಪ್ರವೀಣ್‌ ಶೆಟ್ಟಿ, ತಳೆಕಟ್ಟುವ ಪ್ರಾಥಮಿಕ ಮಾಹಿತಿಯನ್ನು ಪುಣಚದ ರಾಮಕೃಷ್ಣ, ಮರ ಏರುವಾಗ ಸುರಕ್ಷತೆ ಬಗ್ಗೆ ಬಾಬು ಮೂಲ್ಯ, ತಳೆಕಟ್ಟುವುದು, ಸೆಂಟರ್‌ಪ್ಯಾಡ್‌ ಬಗ್ಗೆ ಪುಣಚದ ಮೋಹನ ನಾಯ್ಕ, ಅಡಿಕೆ ಕೊಯ್ಲು ಬಗ್ಗೆ ತಿಮ್ಮಪ್ಪ ಶೆಟ್ಟಿ ಅವರು ಶಿಬಿರದ ಯುವಕರಿಗೆ ಮಾಹಿತಿ ನೀಡಿದರು.

ಶಿಬಿರಾರ್ಥಿಗಳ ಅನುಭವ
ತರಬೇತಿಯಲ್ಲಿ ಮರ ಏರುವ ಹಾಗೂ ಪ್ರಾಥಮಿಕ ವಿಷಯಗಳನ್ನು ಕಲಿತಿದ್ದೇನೆ ಎಂದು ಶಿಬಿರಾರ್ಥಿ ಸತೀಶ ಹಾಗೂ ಶಿಕ್ಷಣ ಪಡೆಯುತ್ತಿದ್ದಾಗಲೇ ಕೃಷಿಯತ್ತ ಆಸಕ್ತಿಯಿತ್ತು. ಓದಿನ ಬಳಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೆ. ಇದೀಗ ಉತ್ತಮ ಅವಕಾಶ ಸಿಕ್ಕಿದೆ ಎಂದು ಶಿಬಿರಾರ್ಥಿ ಅಭಿಜ್ಞಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Advertisement

ತರಬೇತಿ ನೀಡುವ ವ್ಯವಸ್ಥೆ 
ಕ್ಯಾಂಪ್ಕೋ, ಐಸಿಎಆರ್‌ -ಸಿಪಿಸಿಆರ್‌ಐ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ಅಡಿಕೆ ಕೌಶಲ ಪಡೆ ತರಬೇತಿ ಶಿಬಿರವನ್ನು ವಿಟ್ಲ ಸಿಪಿಸಿಆರ್‌ಐಯಲ್ಲಿ ಆಯೋಜಿಸಿದೆ. ಅಡಿಕೆ ಕೌಶಲ ಪಡೆ ತರಬೇತಿಯಲ್ಲಿ ಅಡಿಕೆ ಮರ ಏರುವುದು ಮಾತ್ರವಲ್ಲ ತಳೆ ಕಟ್ಟುವುದು, ಕೊಟ್ಟೆ ಮಣೆ ಸಿದ್ಧತೆ, ಕೊಕ್ಕೆ ಕಟ್ಟುವುದು, ಸೆಂಟರ್‌ಪ್ಯಾಡ್‌ ತಯಾರಿ, ಕೊಕ್ಕೆಯ ಹಲ್ಲು ಸಿದ್ಧತೆ, ಔಷಧ ಸಿಂಪಡಣೆ, ಅಡಿಕೆ ಕೊಯ್ಲು ಬಗ್ಗೆ ವಿವಿಧ ತರಬೇತಿಗಳು, ಸ್ಪ್ರೇಯರ್‌ಗಳ ಸಮಸ್ಯೆ ಮತ್ತು ರಿಪೇರಿ ಬಗ್ಗೆ ತರಬೇತಿ ಮತ್ತು ಮಾಹಿತಿ ನೀಡಲಾಗುತ್ತಿದೆ. 5 ಮಂದಿ ತರಬೇತುದಾರರು, ಓರ್ವ ಮುಖ್ಯ ತರಬೇತುದಾರರು ಈ ಕಾರ್ಯವನ್ನು ನಿಭಾಯಿಸುತ್ತಿದ್ದಾರೆ.

ಸಮಸ್ಯೆಗೆ ಪರಿಹಾರ ಸಿಗಲಿದೆ
ಯುವಕರು ಉತ್ಸಾಹ ತೋರುತ್ತಿರುವುದು ಈ ಶಿಬಿರಕ್ಕೆ ಹೆಮ್ಮೆ. ಕೃಷಿಕರ ಪ್ರಮುಖ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಡಿಕೆ ಬೆಳೆಗಾರ ನಿಶ್ಚಿಂತನಾಗುವುದಾದರೆ ಈ ತರಬೇತಿ ಕಾರ್ಯದ ಯಶಸ್ಸು ನಿಶ್ಚಿತ.
ಶಂಕರನಾರಾಯಣ ಖಂಡಿಗೆ
ಉಪಾಧ್ಯಕ್ಷರು, ಕ್ಯಾಂಪ್ಕೋ

30 ಸ್ಥಾನಕ್ಕೆ 100 ಅರ್ಜಿ!
ಈ ಶಿಬಿರಕ್ಕೆ 30 ಯುವಕರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈ ಶಿಬಿರಕ್ಕೆ 100ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಬಹುತೇಕ ಅರ್ಜಿಗಳು ಯುವಕರದ್ದು. ಈಗ ತರಬೇತಿಗೆ ಆಯ್ಕೆಯಾಗಿರುವವರಲ್ಲಿ 27ರಿಂದ 32 ವರ್ಷ ಪ್ರಾಯದ ಒಳಗಿನ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಯುವಕರಿದ್ದಾರೆ. ಯುವ ಸಮೂಹ ಕೃಷಿಯತ್ತ ಆಕರ್ಷಿತವಾಗಿರುವುದು ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next