Advertisement

ವಿಠಲಾಪುರದ ರಸಲಿಂಗ 

09:27 PM Mar 11, 2021 | Team Udayavani |

ಮುಂಡರಗಿ: ತಾಲೂಕಿನ ವಿಠಲಾಪುರ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಪರೂಪದ ಪಂಚ ಲೋಹದ ರಸಲಿಂಗ (ಶಿವಲಿಂಗ) ಇದೆ. ಈ ರಸಲಿಂಗಕ್ಕೆ ಮಹಾ ಶಿವರಾತ್ರಿಯಂದು ವಿಶೇಷ ಪೂಜೆ ನಡೆಯುತ್ತದೆ.

Advertisement

ಅಂದು ರಸಲಿಂಗವನ್ನು ತೊಳೆದು ಹೂವು, ಬಿಲ್ವಪತ್ರೆಗಳಿಂದ ಮಹಾಪುರುಷ ಕುಟುಂಬದವರು ಪೂಜೆ ನೆರವೇರಿಸುತ್ತಾರೆ. ದಕ್ಷಿಣ ಭಾರತದಲ್ಲಿಯೇ ವಿಶೇಷವಾಗಿರುವ ಈ ರಸಲಿಂಗ ಹಲವು ಕುತೂಹಲಕರ ಸಂಗತಿಗಳಿಂದ ಕೂಡಿದೆ. ರಸಶಾಸ್ತ್ರ ಅಧ್ಯಯನ ಮಾಡಿದ್ದ ಯೋಗ ಗುರುಗಳು ರಸಲಿಂಗ ರಚಿಸಿದ್ದರೆನ್ನುವ ಮಾತು ಜನಜನಿತವಾಗಿದೆ. ವಿಠಲಾಪುರದ ಮಹಾಪುರುಷರ ಕುಟುಂಬದ ಮೂಲ ಪುರುಷರಾದ ಬಿಷ್ಟಪ್ಪಯ್ಯ ಅವರೇ ರಸಲಿಂಗ ರಚನೆ ಮಾಡಿರುವ ಐತಿಹ್ಯವಿದೆ.

ರಸಲಿಂಗದ ರಚನೆ: ವಿಜಯನಗರ ಆಳ್ವಿಕೆ ಸಂದರ್ಭದಲ್ಲಿ ಹದಿನಾರನೇ ಶತಮಾನದ ಪೂರ್ವಾರ್ಧ ಕಾಲ ಘಟ್ಟದಲ್ಲಿ (16608-1698) ಇದ್ದ ಬಿಷ್ಟಪ್ಪಯ್ಯ ಮಹಾಪುರುಷರು ವಿಠಲಾಪುರದಲ್ಲಿ ನೆಲೆ ನಿಂತು ಯೋಗ, ರಸಶಾಸ್ತ್ರ, ಲೋಹಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ಆಗಮಶಾಸ್ತ್ರ ವಿದ್ಯೆ ಪಾರಂಗತ ಮಾಡಿಕೊಂಡಿದ್ದರು.

ಯೋಗ ಮತ್ತು ರಸಶಾಸ್ತ್ರ ವಿದ್ಯೆ ಮೂಲಕ ಪಂಚಲೋಹದಿಂದ ಕೂಡಿದ ರಸಲಿಂಗ ರಚಿಸಿದ್ದರು. ಎರಡರಿಂದ ಮೂರು ಅಡಿ ಎತ್ತರವಿರುವ ಪಂಚಲೋಹದ ರಸಲಿಂಗದ ಟೊಳ್ಳಾಗಿರುವ ಒಳಭಾಗದಲ್ಲಿ ಪಾದರಸ ತುಂಬಲಾಗಿದೆ. ರಸಲಿಂಗವು 30 ಕೆ.ಜಿಯಷ್ಟು ಭಾರವಿದೆ. ಕನಿಷ್ಟ ನಾಲ್ಕು ಶತಮಾನಗಳಷ್ಟು ಪುರಾತನವಾಗಿರುವ ರಸಲಿಂಗವು ದಿನದ ಸೂರ್ಯ ಕಿರಣಗಳ ಏರಿಳಿತಕ್ಕೆ ಅನುಗುಣವಾಗಿ ಮುಂಜಾನೆ ಕೆಂಪು, ಮಧ್ಯಾಹ್ನ ಹಳದಿ, ಸಂಜೆ ಹೊತ್ತು ಬಂಗಾರ ಬಣ್ಣದಲ್ಲಿ ಕಾಣುತ್ತದೆ. ತಾಪಮಾನದಲ್ಲಿ ಏರಿಳಿತ ಉಂಟಾದಾಗ ಈ ರಸಲಿಂಗದಿಂದ ಪಾದರಸ ಹೊರಬರುತ್ತದೆ.

ಮಹಾಪುರುಷ ಕುಟುಂಬದವರು ಪಾದರಸ ಸಂಗ್ರಹಿಸಿಟ್ಟಿದ್ದಾರೆ. ಈ ಪಾದರಸ ಆಯುರ್ವೇದಿಕ್‌ ಔಷಧಿ  ಗಳಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಮುಂಡರಗಿ -ಹೂವಿನಹಡಗಲಿ ಭಾಗದಲ್ಲಿ ಬಿಷ್ಟಪ್ಪಯ್ಯನವರು ಯೋಗ- ರಸಶಾಸ್ತ್ರ ಉಪಯೋಗಿಸಿಕೊಂಡು ಸತ್ಕಾರ್ಯ, ಧರ್ಮದ ದಾರಿಯಲ್ಲಿ ಸೇವೆ ಮಾಡಿರುವುದು ಈ ಎಲ್ಲ ಸಂಗತಿಗಳಿಂದ ತಿಳಿದು ಬರುತ್ತದೆ.

Advertisement

ಹು.ಬಾ. ವಡ್ಡಟ್ಟಿ,

Advertisement

Udayavani is now on Telegram. Click here to join our channel and stay updated with the latest news.

Next