Advertisement

ಬದುಕಿಗೆ ಸಾರ್ಥಕ ಸ್ಪರ್ಶ

07:30 PM Dec 06, 2019 | mahesh |

ಹತ್ತಿರವಿದ್ದವರು ದೂರ ಸರಿಯುತ್ತಾರೆ. ದೂರ ಇದ್ದವರು ಹತ್ತಿರಕ್ಕೆ ಬರುತ್ತಾರೆ. ಶತ್ರುಗಳು ಮಿತ್ರರಾಗುತ್ತಾರೆ. ಮಿತ್ರರು ಶತ್ರುಗಳಾಗುತ್ತಾರೆ. ಪರಿಚಿತರು ಅಪರಿಚಿತರಾಗುತ್ತಾರೆ. ಅಪರಿಚಿತರು ಪರಿಚಿತರಾಗುತ್ತಾರೆ. ಅದೂ ವಿಶೇಷವಾಗಿ ಕಷ್ಟಕಾಲದಲ್ಲಿ ಪರಿಚಿತರು, ಅಪರಿಚಿತರಂತೆ ವರ್ತಿಸುತ್ತಾರೆ. ಅಪರಿಚಿತರು, ಚಿರಪರಿಚಿತರಂತೆ ಸಹಾಯಹಸ್ತ ಚಾಚಿರುತ್ತಾರೆ. ಪ್ರೇಮ, ವಿವಾಹಕ್ಕೆ ಮುನ್ನುಡಿ ಬರೆಯುತ್ತದೆ. ವಿವಾಹ, ವಿಚ್ಛೇದನಕ್ಕೆ ನಾಂದಿ ಹಾಡುತ್ತದೆ.ಅಂಕೆ, ಶಂಕೆಯಾಗುತ್ತದೆ. ಶಂಕೆ, ಲಂಕೆಯಾಗುತ್ತದೆ. ಲಂಕೆ ದಹನವಾಗುತ್ತದೆ. ಸಮಾಜವಾದ, ಸಮತಾವಾದ ತೆರೆಯ ಹಿಂದೆ ತಳ್ಳಲ್ಪಡುತ್ತವೆ. ಅಧಿಕಾರವಾದ, ಅವಕಾಶವಾದ ತೆರೆಯನ್ನು ಆಕ್ರಮಿಸಿಕೊಂಡಿರುತ್ತದೆ. ಅಣ್ಣ, ತಮ್ಮಂದಿರು ದಾಯಾದಿಗಳಂತೆ ಕಿತ್ತಾಡಿಕೊಂಡಿರುತ್ತಾರೆ. ದಾಯಾದಿಗಳು ಆಪ್ತ, ಪರಮಾಪ್ತರಂತೆ ವೇಷ ತೊಡುತ್ತಾರೆ.

Advertisement

“ಇದೆಲ್ಲ ಏಕೆ ಹೀಗೆ?’ ಎಂದು ಕೇಳುವ ಹಾಗಿಲ್ಲ. ಇದುವೇ ಜೀವನ.ಜೀವನವೆಂದರೆ, ಏಕತಾನತೆ ಇಲ್ಲ; ಅದು ವಿವಿಧತೆ. ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವುದು- ಬಿಡುವುದು, ನಮ್ಮ ವಿವೇಚನೆಗೆ ಬಿಟ್ಟ ವಿಷಯ. “ಬದುಕು ಹೀಗೇಕೆ?’ ಎನ್ನುತ್ತಾ ಗೊಂಯ್‌ ಗೊಂಯ್‌, ಕೊರಕೊರ ಅನ್ನೋದು ಬೇಡ. ಜೀವನ ಧರ್ಮಕ್ಷೇತ್ರವೂ ಹೌದು, ಕುರುಕ್ಷೇತ್ರವೂ ಹೌದು.”ಬದುಕು ಜಟಕಾ ಬಂಡಿ. ವಿಧಿ ಅದರ ಸಾಹೇಬ’- ಇದು ಡಿ.ವಿ.ಜಿ. ಉವಾಚ. ಅಕ್ಷರಶಃ ಸತ್ಯವಾದ ಮಾತು. ಬದುಕು ಗುಟ್ಕಾ ಬಂಡಿಯಾದರೂ ಆಗಲೂ ವಿಧಿನೇ ಅದರ ಸಾಹೇಬ..! ನಾವುಗಳು ಬದುಕಿನ ಸಾರ್ಥಕತೆಗೆ ಉಸಿರು ತುಂಬಬೇಕು. ಬದುಕನ್ನು ದ್ವೇಷ, ದೋಷ, ದುವ್ಯìಸನಗಳಿಗೆ ಒಪ್ಪಿಸಿಬಿಟ್ಟು ಪವಿತ್ರವಾದ ಮಾನವಜನ್ಮವನ್ನು ಹಾಳುಮಾಡಬಾರದು. ನಮ್ಮ ದಾಸರುಗಳು ಕೂಡ “ಮಾನವ ಜನ್ಮ ದೊಡ್ಡದು. ಇದನು ಹಾನಿಮಾಡಬೇಡಿರಿ ಹುಚ್ಚಪ್ಪಗಳಿರಾ’ ಎಂದು ಪ್ರೀತಿಯಿಂದ ಗಲ್ಲಕ್ಕೆ ತಿವಿದು ನಮಗೆಲ್ಲ ಬುದ್ಧಿಹೇಳಿದ್ದಾರೆ. ಅವರುಗಳ ಬುದ್ಧಿಮಾತಿಗೆ ನಾವು ಕಿವಿಯಾಗಬೇಕು. ದೇವರು ನಿಗದಿಪಡಿಸಿದ ಆಯುಷ್ಯದ ಅವಧಿಯಲ್ಲಿ ಬದುಕಿಗೆ ಸಾರ್ಥಕ, ಸೃಜನಾತ್ಮಕ ಸ್ಪರ್ಶ ಕೊಟ್ಟುಕೊಂಡು ಇರಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ.

Advertisement

Udayavani is now on Telegram. Click here to join our channel and stay updated with the latest news.

Next