ಬೆಂಗಳೂರು: ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಪ್ರವಾಸಿ ತಾಣಗಳತ್ತ ಜನರು ಚಿತ್ತ ಹರಿಸಿದ್ದು, ರೈಲ್ವೆ ಇಲಾಖೆಯ ಮಹತ್ವಾಕಾಂಕ್ಷಿ ವಿಸ್ಟಾಡೋಮ್ ಬೋಗಿಗಳ ಸೀಟು ಮುಂಗಡ ವಾಗಿಯೇ ಶೇ.100ರಷ್ಟು ಭರ್ತಿಯಾಗಿವೆ.
ವಿಸ್ಟಾಡೋಮ್ ಬೋಗಿಗಳಲ್ಲಿ ಕುಳಿತು ಪಶ್ಚಿಮ ಘಟ್ಟಗಳ ರಮಣೀಯ ಪ್ರಾಕೃತಿಕ ಸೊಬಗನ್ನು ನೋಡಲು ಇಚ್ಛಿಸುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ವಿಸ್ಟಾಡೋಮ್ ಸೀಟುಗಳ ಬುಕ್ಕಿಂಗ್ ಸಂಖ್ಯೆ ನಿರೀಕ್ಷೆ ಮೀರಿದೆ. ಒಂದೆಡೆ ಮಳೆಗಾಲ, ಇನ್ನೊಂದೆಡೆ ಸಾಲು- ಸಾಲು ಸಾರ್ವಜನಿಕ ರಜೆ ಗಳಿರುವುದರಿಂದ ವಿಸ್ಟಾಡೋಮ್‌ಗೆ ಡಿಮ್ಯಾಂಡ್ ಬಂದಿದೆ. ಮೇ, ಜೂನ್, ಜುಲೈ, ಆಗಸ್ಟ್ ತಿಂಗಳ ಅಂತ್ಯದ ವರೆಗೆ ಶೇ.100ರಷ್ಟು ಸೀಟುಗಳು ಭರ್ತಿಯಾಗಿದೆ.
ವಾರಾಂತ್ಯ ಹಾಗೂ ಹಬ್ಬದ ಸಂದರ್ಭದಲ್ಲಿ ಶೇ.30 ರಷ್ಟು ವೇಟಿಂಗ್ ಲಿಸ್ಟ್ ಇದೆ. ಈಗಾಗಲೇ ನವರಾತ್ರಿ, ದೀಪಾವಳಿ ಹಬ್ಬದ ರಜಾದಿನಗಳು ಹಾಗೂ ವಿಕೇಂಡ್‌ನ ಸೀಟುಗಳ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ. ಬೆಂಗಳೂರು-ಮಂಗಳೂರು ಮಾರ್ಗವಾಗಿ ಸಂಚರಿಸುವ ರೈಲುಗಳಲ್ಲಿ ಇರುವ ವಿಸ್ಟಾಡೋಮ್ ಕೋಚ್‌ನಲ್ಲಿ ಪ್ರಯಾಣಿಸಲು ಒಬ್ಬರು 1525 ರೂ. ಟಿಕೆಟ್ ಪಾವತಿಸಬೇಕು. ಒಂದು ರೈಲಿನಲ್ಲಿ 2 ಬೋಗಿಯಲ್ಲಿ ತಲಾ 44 ರಂತೆ 88 ಆಸನಗಳಿವೆ. ಈ ಹಿಂದೆ ಅನೇಕರು ಪ್ರಯಾಣದ ಬೆಲೆ ಹೆಚ್ಚಿರುವುದರಿಂದ ಬೆಂಗಳೂರಿನಿಂದ ಸಕಲೇಶ ಪುರದವರೆಗೂ ಸಾಮಾನ್ಯ ಬೋಗಿಯಲ್ಲಿ ಪ್ರಯಾ ಣಿಸಿ, ಸಕಲೇಶಪುರದಿಂದ ಮಂಗಳೂರಿನ ವರೆಗೆ ವಿಸ್ಟಾಡೋಮ್ ಕೋಚ್ ಆಯ್ಕೆ ಮಾಡುತ್ತಿದ್ದರು. ಆದರೆ ಪ್ರಸ್ತುತ ಸೀಟುಗಳು ಬೆಂಗಳೂರಿನಿಂದಲೇ ಭರ್ತಿಯಾಗುತ್ತಿದೆ. ಇದರಿಂದಾಗಿ ಮಧ್ಯದಲ್ಲಿ ಕಡಿಮೆ ಮೊತ್ತದಲ್ಲಿ ವಿಸ್ಟಾಡೋಮ್ ಬೋಗಿಯಲ್ಲಿ ಕುಳಿತು ಆನಂದಿಸಲು ಸಾಧ್ಯವಿಲ್ಲ.
ಸಂಚಾರ ಮಾರ್ಗ: ಬೆಂಗಳೂರು – ಮಂಗಳೂರು ಮಾರ್ಗವಾಗಿ ಪ್ರತಿ ಮಂಗಳವಾರ, ಗುರುವಾರ, ರವಿವಾರ ಹಾಗೂ ಮಂಗಳೂರು- ಯಶವಂತಪುರ ಮಾರ್ಗವಾಗು ಸೋಮವಾರ, ಮಂಗಳವಾರ, ಶುಕ್ರವಾರ ವಿಸ್ಟಾಡೋಮ್ ರೈಲು ಸಂಚರಿಸಲಿದೆ. ಜತೆಗೆ ಯಶವಂತಪುರ- ಕಾರವಾರ ಮಾರ್ಗವಾಗಿ ಮಂಗಳವಾರ, ಗುರುವಾರ ಶನಿವಾರ ಹಾಗೂ ರವಿ ವಾರ ಮಂಗಳೂರು- ಯಶವಂತಪುರ ಮಾರ್ಗವಾಗಿ ವಿಸ್ಟಾಡೋಮ್ ಬೋಗಿಗಳನ್ನು ಹೊಂದಿರುವ ರೈಲುಗಳು ಸಂಚರಿಸುತ್ತಿದೆ. ಯಶವಂತಪುರ-ಮಂಗಳೂರು ಮಾರ್ಗದ ವಿಸ್ಟಾಡೋಮ್ ರೈಲು 2021ರ ಜುಲೈ ತಿಂಗಳಿನಲ್ಲಿ ಸಂಚಾರ ಪ್ರಾರಂಭ ವಾಗಿತ್ತು. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ತದನಂತರದಲ್ಲಿ ನಿರೀಕ್ಷೆ ಮಟ್ಟಕ್ಕೆ ಪ್ರಯಾಣಿಕರು ಸ್ಪಂದನೆ ದೊರಕಿರಲಿಲ್ಲ. 2022ರ ಫೆ. ವರೆಗೆ ಬೆಂಗಳೂರಿನಿಂದ ಶೇ.20ರಷ್ಟು , ಸಕಲೇಶಪುರ ಮಂಗಳೂರು ಮಾರ್ಗ ಶೇ.30ರಷ್ಟು ಆಸನಗಳು ಭರ್ತಿಯಾಗಿತ್ತು.
ವಿಕೇಂಡ್ ಹಾಗೂ ಹಬ್ಬದ ರಜಾದಿನಗಳಲ್ಲಿ ವಿಸ್ಟಾಡೋಮ್ ಬೋಗಿಗಳು ಸೀಟುಗಳು ಮುಂಗಡವಾಗಿ ಬುಕ್ಕಿಂಗ್ ಭರ್ತಿಯಾಗುತ್ತಿವೆ. ವೈಟಿಂಗ್ ಲಿಸ್ಟ್ ಸಂಖ್ಯೆ ಹೆಚ್ಚಿರುತ್ತದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ರಜಾ ದಿನಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ.
– ಕುಸುಮಾ ಹರಿಪ್ರಸಾದ್, ಡಿವಿಜನಲ್ ರೈಲ್ವೇ ಮ್ಯಾನೇಜರ್, ನೈರುತ್ಯ ರೈಲ್ವೆ
-ತೃಪ್ತಿ ಕುಮ್ರಗೋಡು