ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಾಲಿಕತ್ವದ ಜಿಯೋ ಮೊಬೈಲ್ ನೆಟ್‌ವರ್ಕ್‌ನಲ್ಲಿ, ಅಮೆರಿಕದ ಪ್ರತಿಷ್ಠಿತ ಕಂಪನಿ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್ 11,367 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಇದರ ಮೂಲಕ ಜಿಯೋದ ಶೇ.2.3ರಷ್ಟು ಷೇರುಗಳನ್ನು ಖರೀದಿಸಿದೆ. ಇದೀಗ ಜಿಯೋದ ಒಟ್ಟು ಉದ್ಯಮ ಮೌಲ್ಯ 5.16 ಲಕ್ಷ ಕೋಟಿ ರೂ.ಗೇರಿದೆ. ಕೆಲವೇ ದಿನಗಳ ಹಿಂದೆ ವಿಶ್ವದ ಪ್ರತಿಷ್ಠಿತ ಸಾಮಾಜಿಕ ತಾಣ ಫೇಸ್‌ಬುಕ್ 43,574 ಕೋಟಿ ರೂ.ಗಳನ್ನು ಹೂಡಿ ಶೇ.9.99ರಷ್ಟು ಷೇರುಗಳನ್ನು, ದೈತ್ಯ ತಾಂತ್ರಿಕ ಸಂಸ್ಥೆ ಸಿಲ್ವರ್ ಲೇಕ್ 5,665 ಕೋಟಿ ರೂ.ಗಳನ್ನು ಹೂಡಿ ಶೇ.1.15ರಷ್ಟು ಷೇರುಗಳನ್ನು ಖರೀದಿಸಿದ್ದವು. ಅದರ ಬೆನ್ನಲ್ಲೇ ವಿಸ್ಟಾ ಹೂಡಿಕೆ ಮಾಡಿರುವುದರಿಂದ, ಒಟ್ಟಾರೆ ಜಿಯೋ ಮೊಬೈಲ್ ನೆಟ್‌ವರ್ಕ್ ಕೆಲವೇ ದಿನದಲ್ಲಿ 60,596.37 ಕೋಟಿ ರೂ. ಸಂಗ್ರಹಿಸಿದೆ.
ಜಿಯೋದಲ್ಲೂ ಸಿಗಲಿದೆ ಆರೋಗ್ಯ ಸೇತು ಆ್ಯಪ್
ಮುಂಬೈ: ಕೇಂದ್ರಸರ್ಕಾರ ಕೋವಿಡ್ ಸೋಂಕಿತರ ಬಗ್ಗೆ ಎಚ್ಚರಿಸಲು ಆರೋಗ್ಯ ಸೇತು ಎಂಬ ಆ್ಯಪ್ ಬಿಡುಗಡೆ ಮಾಡಿದೆ. ಇದುವರೆಗೆ ಅದು ಆ್ಯಂಡ್ರಾಯ್ಡ ಮೊಬೈಲ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಇನ್ನು ಮುಂದೆ ಅದು ಕಡಿಮೆ ಬೆಲೆಯ ಜಿಯೋ ಮೊಬೈಲ್‌ನಲ್ಲೂ ಸಿಗಲಿದೆ. ಇದುವರೆಗೆ ಅದನ್ನು 8.3 ಕೋಟಿ ಆ್ಯಂಡ್ರಾಯ್ಡ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಅದು ಅಂದಾಜು 50 ಕೋಟಿ ಆ್ಯಂಡ್ರಾಯ್ಡ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಸರಳ ಮೊಬೈಲ್ ಬಳಸುವ 40 ಕೋಟಿ ಮಂದಿಗೆ ಈ ಆ್ಯಪ್ ಸಿಗುವುದಿಲ್ಲ. ಈ ಪೈಕಿ 10 ಕೋಟಿ ಜಿಯೋ ಮೊಬೈಲ್ ಬಳಕೆದಾರರೇ ಇದ್ದಾರೆ. ಮುಂದೆ ಇವರು ಅದರ ಲಾಭ ಪಡೆಯಲಿದ್ದಾರೆ.