Advertisement

ಹಾಡು, ವಿಸ್ಮಯ, ವಿನೋದ…

01:21 PM Jun 23, 2017 | Team Udayavani |

ಮೈಕ್‌ ಹಿಡಿದೇ ವೇದಿಕೆ ಹತ್ತಿದರು ಶ್ರುತಿ. ಇದೇನು ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ಚಿತ್ರದ ನಾಯಕಿ
ಮೊದಲು ಮಾತಾಡುತ್ತಿದ್ದಾರೆಲ್ಲಾ ಎಂದು ತಲೆ ಕೆರೆದುಕೊಳ್ಳುವುದಕ್ಕಿಂತ ಮುನ್ನವೇ, ಶ್ರುತಿ ತಾವು “ವಿಸ್ಮಯ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದ ನಿರೂಪಕಿಯಾಗಿ ವೇದಿಕೆ ಏರಿದ್ದಾಗಿ ಹೇಳಿದರು. ಅಲ್ಲಿಂದ ನಂತರ ಸುಮಾರು ಒಂದೂವರೆ ಗಂಟೆಯ ಸಮಾರಂಭವನ್ನು ಅವರು ನಡೆಸಿಕೊಟ್ಟರು.

Advertisement

ತಮ್ಮ ತಂಡದವರನ್ನು ಮಾತಿಗೆಳೆಯುವುದರ ಜೊತೆಗೆ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಅಂದಹಾಗೆ “ವಿಸ್ಮಯ’, ಅರ್ಜುನ್‌ ಸರ್ಜಾ ಅಭಿನಯದ 150ನೇ ಚಿತ್ರ. ಅಷ್ಟೇ ಅಲ್ಲ, ಚಿತ್ರವು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಅದೇ ಕಾರಣಕ್ಕೆ ಗ್ರಾಂಡ್‌ ಆಗಿ ಆಡಿಯೋ ಬಿಡುಗಡೆ 
ಸಮಾರಂಭವನ್ನು ಆಯೋಜಿಸಿಸಲಾಗಿತ್ತು. ಚಿತ್ರದ ಟ್ರೇಲರ್‌ ತೋರಿಸುವ ಮೂಲಕ ಸಮಾರಂಭ ಶುರುವಾಯಿತು. ಆ ನಂತರ ಸಂಗೀತ ನಿರ್ದೇಶಕ ನವೀನ್‌ ಅವರನ್ನು ಕರೆಯಲಾಯಿತು. ಡಾ. ರಾಜಕುಮಾರ್‌, ಡಾ. ವಿಷ್ಣುವರ್ಧನ್‌ ಮತ್ತು ಶಂಕರ್‌ ನಾಗ್‌ ಅವರ ಜನಪ್ರಿಯ ಹಾಡುಗಳನ್ನು ಕೊಳಲಲ್ಲಿ ನುಡಿಸುವ ಮೂಲಕ ನವೀನ್‌ ಗೌರವ ಸಲ್ಲಿಸಿದರು.

ನಂತರ “ಬಾರೋ ಬಾರೋ ಯುದ್ಧ ಮಾಡೋಣ’ ಎಂಬ ಹಾಡನ್ನು “ನೆರುಪ್ಪುಡಾ’ ಖ್ಯಾತಿಯ ಅರುಣ್‌  ರಾಜ,
“ಒಲವೇ ಶಾಶ್ವತ’ ಎಂಬ ಹಾಡನ್ನು ವಾಸುಕಿ ವೈಭವ್‌ ಹಾಡಿದರು. ಆ ನಂತರ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಒಬ್ಬೊಬ್ಬರೇ ಬಂದು ಮಾತಿಗೆ ನಿಂತರು. ಮೊದಲಿಗೆ ಅರ್ಜುನ್‌ ಸರ್ಜಾ. “ಅಭಿಮನ್ಯು’ ಚಿತ್ರದ ನಂತರ ಒಂದು ವಿಶೇಷವಾದ ಚಿತ್ರದಲ್ಲಿ ಅವರು ನಟಿಸಿದ್ದಾರಂತೆ. “ಇದು ನನ್ನ 150ನೇ ಚಿತ್ರ. ಮೊದಲು ಗೊತ್ತಿರಲಿಲ್ಲ. ಆ ನಂತರ ಚಿತ್ರತಂಡದವರು ಈ ವಿಷಯ ಹೇಳಿದರು. ಇದೊಂದು ಪಕ್ಕಾ ಕಮರ್ಷಿಯಲ್‌ ಚಿತ್ರ. ಥ್ರಿಲ್ಲರ್‌ ಜೊತೆಗೆ ಫ್ಯಾಮಿಲಿ ಚಿತ್ರ. ಒಂಥರಾ ಅಪರೂಪದ ಸಂಗಮ. ಈ ಚಿತ್ರದಲ್ಲಿ ನಟಿಸುವುದು ಬೇಡ ಅಂತಲೇ ಕಥೆ ಕೇಳಿದೆ. ಕೊನೆಗೆ ಇಷ್ಟವಾಗಿ ನಟಿಸಿದೆ’ ಎಂದರು ಅರ್ಜುನ್‌.

ಈ ಚಿತ್ರದಲ್ಲಿ ತಮಿಳು ನಟ ಪ್ರಸನ್ನ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಅರ್ಜುನ್‌ ಸರ್ಜಾ ಇಲ್ಲದಿದ್ದರೆ, ಕನ್ನಡ ಚಿತ್ರವೊಂದರಲ್ಲಿ ನಟಿಸುವುದು ಕಷ್ಟವಾಗುತಿತ್ತು ಎಂದರು ಪ್ರಸನ್ನ. “ಅವರ 150ನೇ ಚಿತ್ರದಲ್ಲಿ ನಟಿಸಿದ್ದು ನಮ್ಮ ಭಾಗ್ಯ. ನಾವಿಲ್ಲದಿದ್ದರೂ, ಆ ಚಿತ್ರ ಮುಗಿಯುತಿತ್ತು. ಆದರೆ, ನಾವು ಈ ಚಿತ್ರದಲ್ಲಿ ಇದ್ದೀವಿ ಎಂಬ ಖುಷಿ ಇದೆ. ಒಂದೇ ಬೇಸರ ಅಂದರೆ, ನನಗೆ ನಾಯಕಿ ಇಲ್ಲದಿರುವುದು.

ಅರ್ಜುನ್‌ ಮತ್ತು ಶ್ರುತಿ ಅವರ ರೊಮ್ಯಾನ್ಸ್‌ ನೋಡಿ, ನನಗೂ ಜೋಡಿ ಇಲ್ಲ ಎಂದು ಬೇಸರವಾಯಿತು’ ಎಂದು ನಕ್ಕರು ಪ್ರಸನ್ನ. ನಂತರ ನಿರ್ದೇಶಕ ಅರುಣ್‌ ವೈದ್ಯನಾಥನ್‌, ನಿರ್ಮಾಪಕರಾದ ಜಯರಾಮ್‌, ಸುಧನ್‌ ಹಾಗೂ ಉಮಾಶಂಕರ್‌, ಛಾಯಾಗ್ರಾಹಕ ಅರವಿಂದ್‌ ಕೃಷ್ಣ ಎಲ್ಲರೂ ಚಿತ್ರದ ಬಗ್ಗೆ ಮತ್ತು ಅರ್ಜುನ್‌ ಸರ್ಜಾ ಅವರ ಜೊತೆಗೆ ಕೆಲಸ ಮಾಡಿದ್ದರ ಖುಷಿಯನ್ನು ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next