ನವದೆಹಲಿ:ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮ ನಡೆಯುತ್ತಿರುವ ಸಂದರ್ಭದಲ್ಲಿಯೇ ಶ್ರೀಕೃಷ್ಣ ವೇಷಧಾರಿ ಪ್ರವಾಸಿಗರು ತಾಜ್ ಮಹಲ್ ಒಳ ಪ್ರವೇಶಿಸದಂತೆ ತಡೆಯೊಡ್ಡಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಶ್ರೀಕೃಷ್ಣ ಜನ್ಮಾಷ್ಟಮಿ : ಡಾರ್ಕ್ ಅಲೈಟ್ ವೇಷದಲ್ಲಿ ರವಿ ಕಟಪಾಡಿ
ಶ್ರೀಕೃಷ್ಣ ವೇಷಧಾರಿ ತಾಜ್ ಮಹಲ್ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಭದ್ರತಾ ಸಿಬಂದಿಗಳು ತಡೆದು ಹೊರ ಕಳುಹಿಸಿದ್ದು, ಬಳಿಕ ಆತ ಕೊಳಲನ್ನು ನುಡಿಸಿದಾಗ ಜನಸಮೂಹ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಸಂಗ ನಡೆದಿರುವುದಾಗಿ ವರದಿ ವಿವರಿಸಿದೆ.
ಬಾವುಟ, ಬ್ಯಾನರ್ ಅಥವಾ ಪೋಸ್ಟರ್ ನೊಂದಿಗೆ ಸ್ವಯಂ ಪ್ರಚಾರಕ್ಕೆ ಯತ್ನಿಸುವ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸುವುದು ಸಾಮಾನ್ಯ ಎಂದು ಪುರಾತತ್ವ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆಯೂ ಗುಂಪೊಂದು ಶ್ರೀರಾಮನ ಹೆಸರಿನ ದುಪ್ಪಟ್ಟಾ ಧರಿಸಿದ್ದ ಗುಂಪನ್ನು ತಾಜ್ ಮಹಲ್ ಒಳಗೆ ಪ್ರವೇಶಿಸಲು ಅನುಮತಿ ನೀಡದೆ ವಿವಾದಕ್ಕೆ ಕಾರಣವಾಗಿತ್ತು.
ಕೋವಿಡ್ ಎರಡನೇ ಅಲೆಯ ಬಳಿಕ ತಾಜ್ ಮಹಲ್ ಗೆ ಪ್ರತಿದಿನ ಸುಮಾರು 20 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಏತನ್ಮಧ್ಯೆ ದೆಹಲಿಗೆ ಆಗಮಿಸಿರುವ ಸಾವಿರಾರು ಮಂದಿ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಮಧುರಾ ಮತ್ತು ವೃಂದಾವನಕ್ಕೆ ತೆರಳಿರುವುದಾಗಿ ವರದಿ ತಿಳಿಸಿದೆ.