Advertisement

ಪಶು ಆಸ್ಪತ್ರೆಗಳಿಗೆ ಭೇಟಿ: ಏನೇನು ಮುನ್ನೆಚ್ಚರಿಕೆ ಅಗತ್ಯ?

11:04 PM Jun 08, 2020 | Sriram |

ಬೇಸಗೆ ಕಾಲದಿಂದ ಮಳೆಗಾಲಕ್ಕೆ ಹೊರಳುವ ಸಂದರ್ಭದಲ್ಲಿ ಸಾಕು ಪ್ರಾಣಿಗಳ ಆರೋಗ್ಯದಲ್ಲಿಯೂ ಏರುಪೇರು ಆಗುವುದು ಸಾಮಾನ್ಯ. ಅದೂ ಅಲ್ಲದೆ ಲಾಕ್‌ಡೌನ್‌ನಿಂದಾಗಿ ನಿಗದಿತವಾಗಿ ನಡೆಸುತ್ತಿದ್ದ ತಪಾಸಣೆ ಕೂಡ ಬಾಕಿ ಆಗಿದೆ. ಇದರ ನಡುವೆ ಕಾಲ ಕಾಲಕ್ಕೆ ನೀಡುತ್ತಿದ್ದ ಚುಚ್ಚುಮದ್ದು ಸಹಿತ ಇತರ ಚಿಕಿತ್ಸೆಗಳೂ ನಡೆಯಬೇಕು.

Advertisement

ಲಾಕ್‌ಡೌನ್‌ ಮುಗಿದಿರುವುದರಿಂದ ಸಹಜವಾಗಿಯೇ ಜನಸಂದಣಿ ಹೆಚ್ಚಾಗಿದೆ. ಈಗ ಮಾಸ್ಕ್ ಹಾಕುವುದು ಬೇರೆ ಅನಿವಾರ್ಯವಾಗಿರು ವುದರಿಂದ ಸಾಕುಪ್ರಾಣಿಗಳು ಕೆಲವೆಡೆ ಹಿಂದಿನಂತೆ ಚಿಕಿತ್ಸೆ ನೀಡಲು ಸಹಕರಿಸುತ್ತಿಲ್ಲ. ಮಾಸ್ಕ್ ನೋಡಿ ಹಲವು ಸಾಕುಪ್ರಾಣಿಗಳು ಹೆದರಿಕೊಂಡಿರುವುದೇ ಇದಕ್ಕೆ ಕಾರಣ. ಆದುದರಿಂದ ಮನೆಯಲ್ಲಿಯೇ ಮಾಸ್ಕ್ ಧರಿಸಿ ಸಾಕುಪ್ರಾಣಿಗಳ ಹತ್ತಿರ ಹೋಗಿ ಅವುಗಳ ಹೆದರಿಕೆ ಹೋಗಲಾಡಿಸಿ ಅನಂತರ ಪಶು ಆಸ್ಪತ್ರೆಗಳಿಗೆ ಕರೆದೊಯ್ಯುವುದು ಉತ್ತಮ.

ಗ್ರಾಮೀಣ ಮಾತ್ರವಲ್ಲದೆ ನಗರ ಪ್ರದೇಶಗಳ ಆಸ್ಪತ್ರೆಗಳಿಗೂ ಇತ್ತೀಚೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ಬೇರೆ ಪ್ರದೇಶಗಳ ಜನರು ಸಾಕುಪ್ರಾಣಿಗಳೊಂದಿಗೆ ಅಲ್ಲಿಗೆ ಭೇಟಿ ನೀಡುವುದರಿಂದ ಪ್ರತಿಯೊಬ್ಬರೂ ಗರಿಷ್ಠ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯ. ಇಲ್ಲಿದೆ ಕೆಲವು ಮಾಹಿತಿ.

– ಸಾಕುಪ್ರಾಣಿಗಳಿಗೆ ತೀರಾ ಗಂಭೀರವಾದ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಗಳಿದ್ದರೆ ಮಾತ್ರ ಇಂದಿನ ಪರಿಸ್ಥಿತಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆಗಳಿಗೆ ಕರೆತನ್ನಿ.ಹಾಗೆ ಕರೆತರುವ ವೇಳೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದನ್ನು ಮರೆಯದಿರಿ.

-ಸಾಕುಪ್ರಾಣಿಯನ್ನು ಚಿಕಿತ್ಸೆಗೆ ಕರೆತರುವಾಗ ಆದಷ್ಟು ಒಬ್ಬರೇ ಬನ್ನಿ. ಪಶು ಆಸ್ಪತ್ರೆಯಲ್ಲಿ ಒಬ್ಬರಿಗೆ ಮಾತ್ರ ಒಳಗಡೆಗೆ ಪ್ರವೇಶ ನೀಡಲಾಗುತ್ತದೆ. ಒಳಗೆ ಬರುವ ಮೊದಲು ಸ್ಯಾನಿಟೈಸರ್‌ ಬಳಸಿ ಮತ್ತೆ ನೀರಿನಿಂದ ಕೈ ತೊಳೆದ ಬಳಿಕ ಅವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ದಾಖಲಿಸಬೇಕಿದೆ.

Advertisement

-ಪಶು ಆಸ್ಪತ್ರೆಯಲ್ಲಿ ವೈದ್ಯರು, ಸಿಬಂದಿ ಮಾಸ್ಕ್, ಗ್ಲೌಸ್‌ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಚಿಕಿತ್ಸೆ ನೀಡುತ್ತಾರೆ. ಎಲ್ಲ ಸಮಸ್ಯೆಗಳಿಗೆ ಆಸ್ಪತ್ರೆಗೆ ಭೇಟಿ ನೀಡಬೇಕಿಲ್ಲ. ಕೆಲವು ಸಮಸ್ಯೆಗೆ ಫೋನ್‌ನಲ್ಲಿಯೇ ಪರಿಹಾರ ಸೂಚಿಸುವರು. ಅದನ್ನು ಪಡೆಯಲು ಪ್ರಯತ್ನಿಸಿ.

-ಪಶು ವೈದ್ಯಕೀಯ ಆಸ್ಪತ್ರೆಗೆ ಹತ್ತು ವರ್ಷ ವಯಸ್ಸಿಗಿಂತ ಕೆಳಗಿನವರು ಮತ್ತು ಅರುವತ್ತು ವರ್ಷ ವಯಸ್ಸಿಗಿಂತ ಮೇಲಿನವರು, ಶೀತ, ಕೆಮ್ಮು, ಉಸಿರಾಟ ಸಮಸ್ಯೆ ಇದ್ದವರು ಬರುವುದನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಅಂಥವರು ಪಶು ಚಿಕಿತ್ಸಾಲಯಕ್ಕೆ ಪ್ರಾಣಿಗಳನ್ನು ಕರೆದೊಯ್ಯುವುದು ಬೇಡ.

-ತುರ್ತು ಚಿಕಿತ್ಸೆ ಬೇಕಿದ್ದರೆ ಮಾತ್ರ ಮನೆಗಳಿಗೆ ಅಥವಾ ಪ್ರಾಣಿಗಳಿರುವ ಸ್ಥಳಕ್ಕೆ ಬಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆ ವೇಳೆಯಲ್ಲೂ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗುತ್ತಿದೆ. ಆ ಪ್ರದೇಶದಲ್ಲಿ ಜನದಟ್ಟಣೆ ಸೇರುವುದನ್ನು ನಿರ್ಬಂಧಿಸಲಾಗಿದೆ.

-ಅನಿವಾರ್ಯವಾಗಿ ಪಶು ವೈದ್ಯಕೀಯ ಆಸ್ಪತ್ರೆಗೆ ತೆರಳಿದವರು ಅಲ್ಲಿ ಗೋಡೆ, ರಾಡ್‌, ಕುರ್ಚಿ, ಟೇಬಲ್‌ ಇತ್ಯಾದಿಗಳನ್ನು ಸ್ಪರ್ಶಿಸದಿರುವುದು ಉತ್ತಮ. ಸ್ಪರ್ಶಿಸಿದರೆ ಮುಂಜಾಗ್ರತೆ ವಹಿಸಿ ಸ್ಯಾನಿಟೈಸರ್‌ ಬಳಸಿ ಸ್ವಚ್ಛಗೊಳಿಸಿ. ಮನೆಗೆ ಬಂದ ಬಳಿಕವೂ ಮುನ್ನೆಚ್ಚರಿಕೆ ವಹಿಸಿ ಸ್ವಚ್ಛತೆಯ ಕಡೆ ಗಮನ ಕೊಡಿ.

ನಿಮಗೆ ಏನಾದರೂ ಸಂಶಯ,ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್‌ ಮಾಡಿ.
9148594259

Advertisement

Udayavani is now on Telegram. Click here to join our channel and stay updated with the latest news.

Next