ಬಳ್ಳಾರಿ: ಪ್ರಧಾನಮಂತ್ರಿ ಸ್ವಸ್ಥ ಸುರಕ್ಷಾ ಯೋಜನೆ ಅಡಿ ಬಳ್ಳಾರಿಯಲ್ಲಿ ನಿರ್ಮಿಸಲಾಗಿರುವ ವಿಶೇಷ ಅಪಘಾತ ಆಸ್ಪತ್ರೆ (ಟ್ರಾಮಾಕೇರ್ ಸೆಂಟರ್)ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಆನಂದಸಿಂಗ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಅಪಘಾತ ಆಸ್ಪತ್ರೆ (ಟ್ರಾಮಾಕೇರ್ ಸೆಂಟರ್)ಯಲ್ಲಿ ಕೊರೊನಾ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಟ್ರಾಮಾಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ಟ್ರಾಮಾಕೇರ್ ಸೆಂಟರ್ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಅಲ್ಪ ಕಾಮಗಾರಿ ಬಾಕಿ ಉಳಿದಿರುವುದನ್ನು ಸಚಿವ ಆನಂದಸಿಂಗ್ ಅವರು ಪರಿಶೀಲಿಸಿ ಕಾಮಗಾರಿ ಹೊಣೆಹೊತ್ತಿರುವ ಏಜೆನ್ಸಿದಾರರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಸೆಂಟರ್‌ನ ನಾಲ್ಕು ಮಹಡಿಗಳಲ್ಲಿ ಹಾಕಲಾಗಿರುವ 200 ಬೆಡ್ ಗಳನ್ನು (150ಐಸಿಯು ಬೆಡ್ ಸೇರಿ) ಪರಿಶೀಲಿಸಿದರು. ಶೌಚಾಲಯ ಹಾಗೂ ಇನ್ನಿತರೆ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಬಳಿಕ ಮಾತನಾಡಿದ ಅವರು, ಟ್ರಾಮಾಕೇರ್ ಸೆಂಟರ್‌ನ ಬಹುತೇಕ ಕಾಮಗಾರಿ ಮುಕ್ತಾಯವಾಗಿದ್ದು, ಜು.15ಕ್ಕೆ ಇದನ್ನು ಲೋಕಾರ್ಪಣೆ ಮಾಡಬೇಕು ಅಂತ ಅಂದುಕೊಳ್ಳಲಾಗಿತ್ತು. ಕೋವಿಡ್ ದಿಂದ ಅಲ್ಪ ತಾಂತ್ರಿಕ ಕೆಲಸ ಮಾತ್ರ ಬಾಕಿ ಉಳಿದಿದೆ. ಅದನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಎಕ್ಸಪ್ರಸ್ ಫಿಡರ್ ಕೂಡ ಒದಗಿಸಲಾಗಿದೆ. ಈ ತಿಂಗಳ ಅಂತ್ಯಕ್ಕೆ ಉದ್ಘಾಟಿಸಲಾಗುವುದು ಮತ್ತು ಆರಂಭದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗುವುದು. ನಂತರ ಇದನ್ನು ನಿಗದಿತ ಉದ್ದೇಶಕ್ಕಾಗಿ ಬಳಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ವಿಮ್ಸ್ ನಿರ್ದೇಶಕ ಡಾ| ದೇವಾನಂದ, ಅಪರ ಜಿಲ್ಲಾ ಧಿಕಾರಿ ಪಿ.ಎಸ್. ಮಂಜುನಾಥ, ಡಿಎಚ್‌ಒ ಡಾ| ಜನಾರ್ಧನ್ ಮತ್ತಿತರರು ಇದ್ದರು.