ಬೀಳಗಿ: ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿರುವ ಸನಾದಿ ಅಪ್ಪಣ್ಣ ಸಮಾಧಿ ಸ್ಥಳಕ್ಕೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್. ಹೇಮಾವತಿ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಸನಾದಿ ಅಪ್ಪಣ್ಣ ಅವರ ಸಮಾಧಿ ಸ್ಥಳ ಅಭಿವೃದ್ಧಿ ಜತೆಗೆ ಸ್ಮಾರಕ ಭವನ ನಿರ್ಮಾಣ ಮಾಡುವ ಉದ್ದೇಶದಿಂದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಅವರು 2 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಲು ತಿಳಿಸಿದ್ದಾರೆ. ಹೀಗಾಗಿ ಪರಿಣಾಮ ಸ್ಥಳ ವೀಕ್ಷಣೆ ಮಾಡಲಾಗುತ್ತಿದೆ ಎಂದರು.
ಪಟ್ಟಣದ ರುದ್ರಭೂಮಿಯ ಸನಾದಿ ಅಪ್ಪಣ ಸಮಾಧಿ ಅಭಿವೃದ್ಧಿ ಮತ್ತು ಸ್ಮಾರಕ ಭವನ ನಿರ್ಮಾಣ ಮಾಡುವ ಯೋಜನೆ ರೂಪಿಸುವಂತೆ ಸಚಿವರು ತಿಳಿಸಿದ್ದಾರೆ. ಅದರಂತೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಸದ್ಯ ಈ ಸ್ಥಳ ಅಭಿವೃದ್ಧಿಗೆ ಬೇಕಿರುವ ಕ್ರಿಯಾ ಯೋಜನೆ ರೂಪಿಸಲಾಗುವುದು. ಸ್ಮಾರಕ ಭವನ ಇತರೆ ಅಭಿವೃದ್ಧಿ ಕೆಲಸಗಳ ಕುರಿತಾಗಿ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಚರ್ಚಿಸಿ ಬರುವ ದಿನಗಳಲ್ಲಿ ಭವನ ನಿರ್ಮಾಣ ಮಾಡುವ ಕ್ರಿಯಾ ಯೋಜನೆ ಮಾಡುತ್ತೇವೆ ಎಂದು ಹೇಳಿದರು.
ಅಲ್ಲದೇ ಕದಂಗಲ್ ಹಣಮಂತರಾಯ ರಂಗಮಂದಿರ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದ್ದು ಅನುದಾನ ಕೊರತೆಯಿಂದ ನಿರ್ಮಿತಿ ಕೇಂದ್ರದಿಂದ ನಿರ್ಮಾಣ ಕಾರ್ಯವಾಗಿಲ್ಲ ಎಂಬ ಮಾಹಿತಿ ಬಂದಿದ್ದು ಕೂಡಲೇ ನಿರ್ಮಾಣ ಕಾರ್ಯಕ್ಕೆ ಬೇಕಿರುವ ಎಲ್ಲ ಮಾಹಿತಿ ಕಲೆ ಹಾಕಿ ಮತ್ತೆ ಕಾಮಗಾರಿ ಆರಂಭಿಸಲಾಗುವುದು. ಸದ್ಯ ರಂಗಮಂದಿರ ಕಾಮಗಾರಿ ಸ್ಥಳ ಸ್ವತ್ಛತೆ ಮಾಡಲು ತಿಳಿಸಲಾಗಿದೆ. ಇಂದಿನಿಂದ ಕೆಲಸ ಆರಂಭವಾಗಿ ಅಲ್ಲಿನ ಪರಿಸರ ಶುದ್ಧವಾಗಿಡುತ್ತೇವೆ ಎಂದು ತಿಳಿಸಿದರು.
ಇಲಾಖೆ ಅಧಿಕಾರಿಗಳಾದ ರಾಜೇಶ ಸರೂರ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಮಹಾಂತೇಶ ಕಪಲಿ, ನಾಗರಾಜ ತಿಪ್ಪನ್ನವರ, ಚವ್ಹಾಣ, ಸಮಾಜದ ಮುಖಂಡ ಬಸವರಾಜ ಭಜಂತ್ರಿ, ಪುಟ್ಟರಾಜ್ ಭಜಂತ್ರಿ, ಈರಪ್ಪ ಮಂಟೂರ, ಶಂಕರೆಪ್ಪ ತಂಬಾಕದ ಮುಂತಾದವರು ಉಪಸ್ಥಿತರಿದ್ದರು.