Advertisement

ಹನುಮಗಿರಿಗೆ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀ ಭೇಟಿ

04:25 PM Dec 24, 2017 | Team Udayavani |

ಈಶ್ವರಮಂಗಲ: ಹನುಮಗಿರಿಯಲ್ಲಿ ರಾಮ ಮತ್ತು ಹನುಮ ದೇವರು ಇಬ್ಬರೂ ಇರುವುದರಿಂದ ನೂರಾರು ಭಕ್ತರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಕ್ಷೇತ್ರವು ರಾಜಕೀಯ ಕ್ಷೇತ್ರವಾಗದೇ ಧಾರ್ಮಿಕ ಕ್ಷೇತ್ರವಾಗಿ ಬೆಳೆದಿದೆ ಎಂದು ಉಡುಪಿ ಕೃಷ್ಣ ಮಠದ ಮುಂದಿನ ಪರ್ಯಾಯ ಪೀಠಾಧಿಪತಿಗಳಾದ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು. ಶುಕ್ರವಾರ ಸಂಜೆ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿ ಅವರು ಆಶೀವರ್ಚನ ನೀಡಿದರು.

Advertisement

ತಿರುಮಲದಲ್ಲಿರುವ ತಿಮ್ಮಪ್ಪ ಕ್ಷೇತ್ರಕ್ಕೆ ದೇಶವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸಿ ದರುಶನ ಪಡೆದು ಪುನೀತರಾಗುತ್ತಾರೆ. ಹನುಮಗಿರಿಯಲ್ಲಿರುವ ಆಂಜನೇಯ ಮತ್ತು ಕೋದಂಡ ರಾಮ ದೇವರ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರ ರಾಗುತ್ತಿರುವುದು ಹಿಂದೂ ಸಮಾಜದ ಹೆಮ್ಮೆಯ ಸಂಗತಿಯಾಗಿದೆ. ಪರ್ಯಾಯ ಪೀಠಾರೋಹಣ ಮಾಡುವ ಮೊದಲು ಸ್ವಾಮೀಜಿ ಅವರು ಆಂಜನೇಯ ಹಾಗೂ ಕೋದಂಡರಾಮ ಕ್ಷೇತ್ರಕ್ಕೆ ಭೇಟಿ ನೀಡಿ ಪೀಠಾರೋಹಣ ಮಾಡುವುದು ವಿಶೇಷವಾಗಿದೆ ಎಂದು ಹೇಳಿದರು.

ಕ್ಷೇತ್ರ ಪಾವನ
ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಸ್ವಾಗತಿಸಿ, ಪ್ರಸ್ತಾವನೆಗೈದು ಪರ್ಯಾಯ ಪೀಠಾರೋಹಣ ಮಾಡುವ ಮೊದಲು ಅಷ್ಟಮಠದ ಕಾಣಿಯೂರು ಶ್ರೀ, ಪೇಜಾವರ ಶ್ರೀ ಬಂದಿದ್ದರು. ಇಂದು ಪಲಿಮಾರು ಶ್ರೀಗಳ ಭೇಟಿಯಿಂದ ಕ್ಷೇತ್ರ ಪಾವನವಾಗಿದೆ ಎಂದರು.

ಪಲಿಮಾರು ಶ್ರೀ ಮೆಚ್ಚುಗೆ
ಪಲಿಮಾರು ಶ್ರೀಗಳು ರಾಮಾಯಣ ಮನಸೋದ್ಯಾನ, ಹನುಮಾನೋದ್ಯಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೋದಂಡರಾಮ ಕ್ಷೇತ್ರದಲ್ಲಿ ಪುಷ್ಪಾರ್ಚನೆ ನಡೆಸಿದರು. ಅನಂತರ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಪೂಜೆ ನೆರವೇರಿಸಿದರು. ಧರ್ಮಶ್ರೀ ಪ್ರತಿಷ್ಠಾನದ ವತಿಯಿಂದ ಪಂಚವಸ್ತುಗಳ ತುಲಾಭಾರ ಸೇವೆ ನಡೆಯಿತು. ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿ, ಬೆಂಗಳೂರು ವಕೀಲ ರಾಜಶೇಖರ್‌ ಡಿ. ಉಪಸ್ಥಿತರಿದ್ದರು. ಅರ್ಚಕರು ಪ್ರಾರ್ಥಿಸಿದರು. ಧರ್ಮದರ್ಶಿ ಶಿವರಾಮ ಪಿ. ವಂದಿಸಿದರು. ಶಿವರಾಮ ಶರ್ಮ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next