Advertisement
ಇಲ್ಲೋಂದು ಸ್ವಲ್ಪ ವಿಭಿನ್ನವಾದ ಬಾಬಾ ಇದ್ದಾನೆ. ಆ ಬಾಬಾ “ಬುಲೆಟ್ ಬಾಬಾ”. ಬುಲೆಟ್ ಗಾಡಿಗೂ ಬಾಬಾ ಇದ್ದಾರೆಯೇ ಎಂದು ಆಶ್ಚರ್ಯಗೊಳ್ಳಬೇಡಿ. ಬುಲೆಟ್ ಗಾಡಿಯೇ ಬಾಬಾ. ಸಾಮಾನ್ಯವಾಗಿ ಈಗಿನ ಯುವಕರಿಗೆ ಬುಲೆಟ್ ಬೈಕ್ ಎಂದರೆ ಪಂಚ ಪ್ರಾಣ. ಎದೆ ನಡುಗಿಸುವಂತೆ ಡ್ರೈವಿಂಗ್ ಮಾಡಬೇಕು ಹೆಣ್ಣು ಮಕ್ಕಳ ಗಮನವನ್ನು ಸೆಳೆಯಬೇಕು ಎಂದು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಬುಲೆಟ್ ಬೈಕ್ ಮೇಲೆ ಆಸೆ ಇರುವವರು ಅಷ್ಟೇ ಏಕೆ ಬೈಕ್ ಗಳ ಬಗ್ಗೆ ಕ್ರೇಜ್ ಹಾಗೂ ಲಾಂಗ್ ಡ್ರೈವ್ ಮಾಡೋ ಹವ್ಯಾಸಿಗರು ಖಂಡಿತವಾಗಿಯೂ ಈ ಲೇಖನವನ್ನು ಓದಲೇಬೇಕು.
Advertisement
ಬುಲೆಟ್ ಬಾಬಾ ಟೆಂಪಲ್ ಹಿನ್ನೆಲೆ ರೋಚಕ ಹಾಗೂ ಕುತೂಹಲಕಾರಿಯಾಗಿದೆ. ಚೋಟಿಲಾ ಗ್ರಾಮದಲ್ಲಿರುವ ಈ ಬೈಕಿಗೆ ಚರಿತ್ರೆ ಇದೆ. ಈ ಬೈಕ್ ಚೆನ್ನಾಗಿ ಬಾಳಿದ ಕುಟುಂಬದ ಓಂ ಸಿಂಗ್ ರಾಥೋರ್ ಗೆ ಸೇರಿದ್ದು. 1988ರಲ್ಲಿ ನಡೆದ ಒಂದು ದುರಂತ ಅಪಘಾತದಲ್ಲಿ ಓಂ ಸಿಂಗ್ ರಾಥೋರ್ ಈ ಬೈಕಿನಿಂದ ಮರಕ್ಕೆ ಡಿಕ್ಕಿ ಹೊಡೆದನು. ನಂತರ ರಾಥೋರ್ ಅಲ್ಲಿಯೇ ಸಾವನ್ನಪ್ಪಿದ್ದರು.
ಅಪಘಾತಕ್ಕೀಡಾಗಿದ್ದ ಈ ಬೈಕ್ ಸ್ಥಳೀಯ ಪೊಲೀಸರು ಅದನ್ನು ಸ್ಟೇಷನ್ನಿಗೆ ತೆಗೆದುಕೊಂಡು ಬಂದರು. ಆಗಲೇ ರಹಸ್ಯ ಒಂದೊಂದೆ ಪ್ರಾರಂಭವಾಗುತ್ತದೆ. ಅದೇ ದಿನ ರಾತ್ರಿ ಸ್ಟೆಷನ್ ನಲ್ಲಿದ್ದ ಬೈಕ್ ಇದ್ದಕ್ಕಿದ್ದಂತೆ ಮಾಯವಾಗುತ್ತೆ. ತೀವ್ರ ಶೋಧ ನಡೆಸಿದಾಗ ಅಪಘಾತ ನಡೆದ ಸ್ಥಳದಲ್ಲಿ ಅದು ಪತ್ತೆಯಾಗುತ್ತೆ. ಪುನಃ ಅದನ್ನು ಸ್ಟೆಷನ್ ಗೆ ತರಲಾಗುತ್ತದೆ. ಆ ರಾತ್ರಿ ಕೂಡ ಬೈಕ್ ಮಾಯವಾಗಿ ಅಪಘಾತ ನಡೆದ ಸ್ಥಳದಲ್ಲಿ ಪ್ರತ್ಯಕ್ಷವಾಗುತ್ತದೆ. ಇದು ಯಾರದೋ ಕಿಡಿಗೇಡಿಗಳ ಕೃತ್ಯ ಎಂದು ಸುಮ್ಮನಾದ ಪೊಲೀಸರಿಗೆ ಪದೇ ಪದೆ ಘಟನೆ ಮರುಕಳಿಸಿದಾಗ ತಲೆ ನೋವಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಮುಂದಾದ ಪೊಲೀಸರು ಬೈಕ್ ನಲ್ಲಿದ್ದ ಪೆಟ್ರೋಲ್ ಖಾಲಿ ಮಾಡಿ ದಪ್ಪ ಕಬ್ಬಿಣದ ಚೈನುಗಳಿಂದ ಅದನ್ನು ಲಾಕ್ ಮಾಡುತ್ತಾರೆ. ಆ ದಿನ ರಾತ್ರಿಯೂ ಕೂಡ ಬೈಕ್ ಮತ್ತೆ ಮಾಯವಾಗುತ್ತದೆ. ಕೊನೆಗೆ ಇದನ್ನು ಒಂದು ನಿಗೂಢವಾಗಿ ಭಾವಿಸಿದ ಪೊಲೀಸರು ಈ ಬೈಕ್ ಅನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಿದರು. ಆದರೆ ಆ ಕುಟುಂಬದವರು ಗುಜರಾತ್‍ನಲ್ಲಿನ ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದರು. ಬೈಕ್ ಮಾರಿದ್ದರೂ ಕೂಡ ಅದು ಮತ್ತೇ ಅಪಘಾತವಾದ ಸ್ಥಳಕ್ಕೆ ತಲುಪುತ್ತಿತ್ತಂತೆ.
ಈ ವಿಚಿತ್ರ ವಿದ್ಯಮಾನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತಿಳಿದಿದ್ದೆ ತಡ ಅವರಲ್ಲಿ ಕುತೂಹಲದ ಜೊತೆ ಭಯ-ಭಕ್ತಿಯೂ ಹುಟ್ಟಿಕೊಂಡಿತು. ಇದು ದೇವಾಲಯದ ರೂಪ ಪಡೆದು ಭಕ್ತಿಯ ಕೇಂದ್ರವಾಗಿ ಪರಿಣಮಿಸಿತು. ಅಂದಿನಿಂದ ಇಂದಿನವರೆಗೆ ನಿತ್ಯ ಇಲ್ಲಿ ಪೂಜೆ ಸಲ್ಲುತ್ತದೆ. ದೇಶದ ವಿವಿಧ ಪ್ರದೇಶಗಳಿಂದ ಸಾವಿರಾರು ಜನರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನ ನಿರ್ಮಾಣವಾದ ನಂತರ ಈ ಪ್ರದೇಶದಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎನ್ನುವ ಮಾತು ಗ್ರಾಮಸ್ಥರಿಂದ ಕೇಳಿ ಬರುತ್ತದೆ. ಇದು ಮೂಢ ನಂಬಿಕೆ ಎಂದು ಕೊಂಡು ಈ ಬಾಬಾ ದೇವಾಲಯದ ಮುಂದೆ ಹಾದು ಹೋದವರಿಗೆ ಹಾಗೂ ಪೂಜೆ ಮಾಡದಯೇ ಹಾದು ಹೋದವರಿಗೆ ಹಲವಾರು ಅಪಘಾತಗಳಾಗಿರುವ ನಿರ್ದಶನ ಕೂಡ ಇದೆಯಂತೆ.
*ಗಣೇಶ್ ಹಿರೇಮಠ್