Advertisement

ಕಾಳನೂರು ಅಂಗನವಾಡಿಗೆ ಜಿಪಂ ಸದಸ್ಯ ಭೇಟಿ

11:26 AM Aug 31, 2017 | |

ಕಲಬುರಗಿ: ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅರವಿಂದ ಚವ್ಹಾಣ ಬುಧವಾರ
ತಾಲೂಕಿನ ಕಾಳನೂರಿನ ಮೂರು ಅಂಗನವಾಡಿ ಕೇಂದ್ರಗಳಿಗೆ ಹಠಾತ್‌ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು
ಆಕ್ರೋಶ ವ್ಯಕ್ತಪಡಿಸಿದರು.

Advertisement

ಗ್ರಾಮದಲ್ಲಿನ ಒಂದು ಅಂಗನವಾಡಿ ಕೇಂದ್ರಕ್ಕೆ ಕೀಲಿ ಜಡಿಯಲಾಗಿತ್ತು. ಇನ್ನೊಂದು ಅಂಗನವಾಡಿ ಕೇಂದ್ರಕ್ಕೆ
ಫಲಕವೇ ಇರಲಿಲ್ಲ. ಮತ್ತೂಂದು ಅಂಗನವಾಡಿ ಕೇಂದ್ರಕ್ಕೂ ನಾಮಫಲಕವೇ ಕಾಣಲಿಲ್ಲ. ಆದಾಗ್ಯೂ, ಎರಡೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ನೋಡಿ ದಂಗಾದರು.

ಅಂಗನವಾಡಿ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಊಟ ಮಾಡುತ್ತಿದ್ದ. ಆ ಊಟವನ್ನು ಚವ್ಹಾಣ ಅವರು ನೋಡಿದಾಗ ಅದರಲ್ಲಿ ಉಪ್ಪು, ಖಾರಾ ಇರಲಿಲ್ಲ. ಏನಾದರೂ ಕೊರತೆ ಇದೆಯೇ ಎಂದು ಪ್ರಶ್ನಿಸಿದಾಗ, ಕೊರತೆ ಕಾಣಲಿಲ್ಲ. ಬದಲಾಗಿ
ಅಂಗನವಾಡಿ ಕೇಂದ್ರದಲ್ಲಿ ಮುಂದಿನ ಎರಡು ತಿಂಗಳಿಗಾಗುವಷ್ಟು ಆಹಾರ ಧಾನ್ಯ ಇದ್ದದ್ದು ಗಮನಕ್ಕೆ ಬಂದು, ಇಷ್ಟೆಲ್ಲ ಇದ್ದರೂ ಕಳಪೆ ಊಟವನ್ನೇಕೆ ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿದರು. 

ಅಂಗನವಾಡಿ ಶಿಕ್ಷಕಿ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಸಾಕಷ್ಟು ಆಹಾರ ಧಾನ್ಯಗಳ ದಾಸ್ತಾನು ಇದೆ ಎಂದರೂ ಅದನ್ನು
ಮರಳಿ ಒಯ್ಯಲು ಆಗುವುದಿಲ್ಲ ಎಂದು ಇಲ್ಲಿಯೇ ಇಟ್ಟು ಹೋಗಿದ್ದಾರೆ. ಯಾವಾಗಲೂ ಹೀಗೆಯೇ ಮಾಡಲಾಗುತ್ತಿದೆ. ಹಲವಾರು ಬಾರಿ ಧವಸ, ಧಾನ್ಯ, ಬೆಲ್ಲ, ಹಾಲಿನ ಪ್ಯಾಕೆಟ್‌ ಗಳು ಹಾಳಾಗುತ್ತಿದ್ದು, ಅವುಗಳೆಲ್ಲ ತಿಪ್ಪೆಯ ಪಾಲಾಗುತ್ತಿವೆ ಎಂದು ಹೇಳಿದಳು. ಅಲ್ಲಿದ್ದ ಕೆಲ ಸ್ಥಳೀಯರು ಅಂಗನವಾಡಿ ಕೇಂದ್ರಗಳಿಗೆ ನಾಮಫಲಕ ಹಾಕದೇ ಮನೆಗಳಲ್ಲಿಯೇ
ನಡೆಸುತ್ತಾರೆ. ವಿದ್ಯಾರ್ಥಿಗಳಿಗಿಂತ ತಮ್ಮ ಸ್ವಂತ ಉಪಯೋಗಕ್ಕೆ ಮಾತ್ರ ಆಹಾರ ಧಾನ್ಯಗಳನ್ನು ಉಪಯೋಗಿಸುತ್ತಾರೆ ಎಂದು ದೂರಿದರು. ಇದರಿಂದ ಕೆರಳಿದ ಅರವಿಂದ ಚವ್ಹಾಣ ಅವರು, ಸಂಬಂಧಿಸಿದ ಅಧಿಕಾರಿಗಳನ್ನು ಮೊಬೈಲ್‌ ಮೂಲಕ ಸಂಪರ್ಕಿಸಲು ಯತ್ನಿಸಿದರು. ಆದಾಗ್ಯೂ, ಅಧಿಕಾರಿಗಳ ಸಂಪರ್ಕ ಸಿಗಲಿಲ್ಲ. ಈ ಕುರಿತು ತನಿಖೆಗೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ಜನಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಎಂ.ಎಸ್‌. ಪಾಟೀಲ ನರಿಬೋಳ, ಜಗದೀಶ ಅವರಾದಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next