Advertisement

ಲಕ್ಷದ್ವೀಪಕ್ಕೆ ರಾಜ್ಯಸರಕಾರದ ನಿಯೋಗ ಭೇಟಿ

12:53 PM Nov 01, 2017 | Team Udayavani |

ಮಹಾನಗರ: ಶಾಸಕ ಜೆ.ಆರ್‌. ಲೋಬೋ ನೇತೃತ್ವದ ನಿಯೋಗವು ಸಮಗ್ರ ಮಾಹಿತಿ ಮತ್ತು ಒಡಂಬಡಿಕೆ
ಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಲಕ್ಷದ್ವೀಪ ಆಡಳಿತ ಮಂಡಳಿಯು ಮಂಗಳೂರು ಹಳೆ ಬಂದರಿನ ಮೂಲಕ ವಾಣಿಜ್ಯ ವ್ಯವಹಾರ ಮುನ್ನಡೆಸಲು ಒಪ್ಪಿಗೆ ನೀಡಿದೆ.

Advertisement

ಶಾಸಕ ಜೆ.ಆರ್‌.ಲೋಬೋ ನೇತೃತ್ವದಲ್ಲಿ ರಾಜ್ಯ ಸರಕಾರದ ಅಧಿಕಾರಿಗಳ ನಿಯೋಗವು ಲಕ್ಷದ್ವೀಪಕ್ಕೆ ತೆರಳಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರಗಳು 100 ಕೋ.ರೂ.ಮೊತ್ತದ ಯೋಜನೆ ಮಂಜೂರು ಮಾಡಿದೆ. 70 ಕೋ.ರೂ.ವೆಚ್ಚದಲ್ಲಿ ಲಕ್ಷದ್ವೀಪ ವಾಣಿಜ್ಯ ಮತ್ತು ಪ್ಯಾಸೆಂಜರ್‌ ನೌಕೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು 9 ಒಡಂಬಡಿಕೆಯನ್ನು 3 ವರ್ಷಗಳ ಹಿಂದೆ ಮಾಡಿಕೊಂಡಿದ್ದು, ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಲೋಬೋ ನೇತೃತ್ವದ ನಿಯೋಗವನ್ನು ಲಕ್ಷದ್ವೀಪಕ್ಕೆ ಕಳುಹಿಸಲು ರಾಜ್ಯ ಸರಕಾರ ತೀರ್ಮಾನಿಸಿತ್ತು.

ಲಕ್ಷದ್ವೀಪದ ಅಧಿಕಾರಿಗಳ ಮನಪರಿವರ್ತನೆ ಮಾಡುವಲ್ಲಿ ನಿಯೋಗ ಯಶಸ್ವಿಯಾಗಿದ್ದು, ಮುಂದೆ ಲಕ್ಷದ್ವೀಪದ ಅಧಿಕಾರಿಗಳ ನಿಯೋಗ ಕೂಡ ಶೀಘ್ರ ಮಂಗಳೂರಿಗೆ ಭೇಟಿ ನೀಡಲಿದೆ. ಲಕ್ಷದ್ವೀಪ ಆಡಳಿತ ಅಧಿಕಾರಿ ಫಾರೂಕ್‌ ಖಾನ್‌, ಬಂದರು ಹಾಗೂ ನಾಗರಿಕ ವಿಮಾನ ಇಲಾಖೆಯ ನಿರ್ದೇಶಕ ಅಂಕೂರ್‌ ಮಿಶ್ರ, ಜಿಲ್ಲಾಧಿಕಾರಿಗಳು ಹಾಗೂ ಬಂದರು ಇಲಾಖೆಯ ಕಾರ್ಯದರ್ಶಿ ಪಾರೀಕ್‌ ಥೋಮಸ್‌ ಅವರು ನಿಯೋಗದ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.

ಹೊಸ ಮೂಲ ಸೌಕರ್ಯಗಳನ್ನು ಲಕ್ಷದ್ವೀಪದ ಹಣಕಾಸು ಇಲಾಖೆ ನೆರವಿನಿಂದ ಸೂಕ್ತ ಒಪ್ಪಂದಗಳು ಇದ್ದಲ್ಲಿ ಮಾತ್ರ ಮುಂದುವರಿಸಲಾಗುವುದು. ಇಲ್ಲದಿದ್ದಲ್ಲಿ ಮುಂದೆ ಹೋಗಲು ಇಚ್ಛಿಸುವುದಿಲ್ಲವೆಂದು ಲಕ್ಷದ್ವೀಪದ ಆಡಳಿತ ಮಂಡಳಿ ಮಾತುಕತೆ ವೇಳೆ ಸ್ಪಷ್ಟವಾಗಿ ತಿಳಿಸಿದೆ.

ರಾಜ್ಯದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಅನುಷ್ಠಾನಕ್ಕೆ ತರದಿರುವುದು ಮತ್ತು ಮಂಗಳೂರು ಬಂದರಿನ
ಅನುಕೂಲತೆಗಳನ್ನು ತಾನು ವಿವರವಾಗಿ ತಿಳಿಸಿದ ಬಳಿಕ ಲಕ್ಷದ್ವೀಪದ ಅಧಿಕಾರಿಗಳು ತಮ್ಮ ನಿಲುವನ್ನು ಬದಲಿಸಿದರು
ಎಂದು ಲೋಬೋ ತಿಳಿಸಿದ್ದಾರೆ.

Advertisement

ಮಂಗಳೂರು ಹಳೆ ಬಂದರಿನಲ್ಲಿ ಲಕ್ಷದ್ವೀಪಕ್ಕೆ ಬೇಕಾಗಿರುವ ಸಾಮಗ್ರಿಗಳು ಕಡಿಮೆ ದರದಲ್ಲಿ ದೊರಕುವುದು, ಸರಕುಗಳನ್ನು ಹಡಗಿಗೆ ತುಂಬಿಸಲು ತಗಲುವ ವೆಚ್ಚ ಹಾಗೂ ಸಮಯ ಕಡಿಮೆ ಆಗಿರುವುದು, ಕೆಲವು ದ್ವೀಪಗಳು ಮಂಗಳೂರು ಬಂದರಿಗೆ ಹತ್ತಿರವಾಗಿರುವುದರಿಂದ ಮಂಗಳೂರು ಬಂದರಿನ ವಾಣಿಜ್ಯ ಸಂಪರ್ಕ ಲಕ್ಷದ್ವೀಪಕ್ಕೆ
ಅನುಕೂಲಕರವಾಗಿರುವುದಾಗಿ ಮನವರಿಕೆ ಮಾಡಲಾಯಿತು.

ದೊಡ್ಡ ನೌಕೆಗಳು ಬಂದರಿನ ಒಳಗೆ ಬರಲು ಆವಶ್ಯಕವಾಗುವ ಸುಮಾರು 6ರಿಂದ 7 ಮೀ.ಆಳದ ಕಾಲುವೆಯ ಮಾರ್ಗದ ಆವಶ್ಯಕತೆ ಇದೆ. ಪ್ರಸ್ತುತ ಕೇವಲ 2ರಿಂದ 3 ಮೀ.ಮಾತ್ರ ಆಳ ಇರುವುದರಿಂದ ಇದನ್ನು ಅಭಿವೃದ್ಧಿಪಡಿಸಬೇಕಿದೆ. ಪ್ರವಾಸೋದ್ಯಮದ ಅಭಿವೃದ್ಧಿ, ಯುವಕರಿಗೆ ವಿದ್ಯಾಭ್ಯಾಸ, ಆರೋಗ್ಯ ಸೇವೆ, ಪೆಟ್ರೋಲಿಯಂ ಉತ್ಪನ್ನಗಳು ಸುಲಭದಲ್ಲಿ ಲಭ್ಯವಾಗಲಿದೆ  ಎಂದು ವಿವರಿಸಲಾಯಿತು.

ಮಂಗಳೂರು ಬಂದರಿನಲ್ಲಿ ಸರಕು ಹಾಗೂ ಪ್ರಯಾಣಿಕರ ಸೌಕರ್ಯಕ್ಕೆ ಜೆಟ್ಟಿ ನಿರ್ಮಾಣಕ್ಕೆ ಮತ್ತು ಇದರ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಅಗತ್ಯವೆಂದು ತಿಳಿಪಡಿಸಲಾಗಿದೆ ಎಂದು ಶಾಸಕರು ವಿವರಿಸಿದ್ದಾರೆ.

ರಾಜ್ಯ ನಿಯೋಗದಲ್ಲಿ ಬಂದರು ಮತ್ತು ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಮೇಶ್‌ ಎನ್‌.ಎಸ್‌, ಬಂದರು ಇಲಾಖೆಯ ನಿರ್ದೇಶಕ ಕ್ಯಾ| ಸಿ.ಸ್ವಾಮಿ, ಬಂದರು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಆರ್‌. ದಯಾನಂದ್‌, ಪ್ರಮುಖರಾದ ಡೆನಿಸ್‌ ಡಿ’ಸಿಲ್ವಾ ಹಾಗೂ ನೆಲ್ಸನ್‌ ಮೋಂತೆರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next