Advertisement

ಐತಿಹಾಸಿಕ ಜಮಾಅತ್‌ ಮಸೀದಿಗೆ ಉದ್ಯಾವರ ದೈವಗಳ ಭೇಟಿ

07:50 PM Apr 20, 2019 | sudhir |

ಮಂಜೇಶ್ವರ: ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಮಾಡ ದೈವ ಕ್ಷೇತ್ರದ ಜಾತ್ರೆಯ ಪೂರ್ವಭಾವಿಯಾಗಿ ಉದ್ಯಾವರ ಸಾವಿರ ಜಮಾಅತ್‌ ಮಸೀದಿಗೆ ದೈವಗಳ ಭೇಟಿ ಕಾರ್ಯಕ್ರಮ ಶುಕ್ರವಾರ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿತು.

Advertisement

ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳು ವರ್ಷಂಪ್ರತಿಯ ಪದ್ಧªತಿಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಹಿಂದೂ ಬಾಂಧವರು ಜೊತೆಯಾಗಿ ಉದ್ಯಾವರ ಸಾವಿರ ಜಮಾಅತ್‌ಗೆ ಭೇಟಿ ನೀಡಿದರು.

ಉದ್ಯಾವರ ಅರಸು ಮಂಜಿಷ್ಣಾರ್‌ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಅರಸು ದೈವಗಳ ಜಮಾಅತ್‌ ಭೇಟಿಯು ಇಂದಿಗೂ ಹಿಂದೂ, ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ.

ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಸಾಂಪ್ರದಾಯಿಕ ಭೇಟಿ ನಡೆದು ಬರುತ್ತಿದೆ. ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು 1.30ರ ಹೊತ್ತಿಗೆ ಜಮಾಅತ್‌ಗೆ ತಲುಪಿದವು. ಈ ವೇಳೆ ಜುಮಾ ನಮಾಜ್‌ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಹಾಗೂ ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿ ಸ್ವಾಗತ ನೀಡಿದರು.

ದೈವ ಪಾತ್ರಿಗಳು ಜಮಾಅತ್‌ನೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾಅತ್‌ನ ಸರ್ವ ಮುಸ್ಲಿಂ ಬಾಂಧವರನ್ನು ಮಾಡ ಅರಸು ದೈವಗಳ ಜಾತ್ರೋತ್ಸವಕ್ಕೆ ಆಹ್ವಾನವಿತ್ತರು. ಮೇ 9ರಿಂದ 15ರ ತನಕ ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾಅತ್‌ ವ್ಯಾಪ್ತಿಯಲ್ಲಿರುವ ಎಲ್ಲ ಮುಸ್ಲಿಂ ಬಾಂಧವರು ಕೂಡ ಪಾಲ್ಗೊಳ್ಳುವ ಮೂಲಕ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಕೊಂಡಿಯಾಗಿ ಮುಂದುವರಿದಿದೆ.

Advertisement

ಜಮಾಅತ್‌ ಭೇಟಿಗೆ ಉದ್ಯಾವರ ಸಾವಿರ ಜಮಾಅತ್‌ ವತಿಯಿಂದ ಸೂಫಿ ಹಾಜಿ, ಮೊಯಿದೀನ್‌ ಕುಂಞಿ ಹಾಜಿ, ಖಾದರ್‌ ಫಾರೂಕ್‌, ಆಹ್ಮದ್‌ ಬಾವ ಹಾಜಿ, ಅಬೂಬಕ್ಕರ್‌ ಮಾಹಿನ್‌ ಹಾಜಿ, ಹನೀಫ್‌ ಪಿ.ಎ. ಮೊದಲಾದವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಉದ್ಯಾವರ ಅರಸು ದೈವಗಳ ಮುಖ್ಯಸ್ಥರಾದ ಡಾ.ಜಯಪಾಲ ಶೆಟ್ಟಿ, ಮಂಜು ಭಂಡಾರಿ, ದುಗ್ಗ ಭಂಡಾರಿ, ತಿಮ್ಮ ಭಂಡಾರಿ ಮುಂಡ ಶೆಟ್ಟಿ, ಹಾಗೂ ಎರಡು ವರ್ಣ ಹಾಗೂ ನಾಲ್ಕು ಗ್ರಾಮದವರು ಸೇರಿದಂತೆ ಹಲವರು ಜಮಾಅತ್‌ ಭೇಟಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next