Advertisement

ಚಲನಚಿತ್ರ ಮಂಡಳಿಯಿಂದ ಪೊಲೀಸ್‌ ಆಯುಕ್ತರ ಭೇಟಿ

11:28 AM Jan 03, 2017 | Team Udayavani |

ಬೆಂಗಳೂರು: ನಗರದ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ನಿರ್ಮಾಪಕರಿಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ನೂತನ ಪೊಲೀಸ್‌ ಆಯುಕ್ತ ಪ್ರವೀಣ್‌ಸೂದ್‌ ಅವರಲ್ಲಿ  ಮನವಿ ಮಾಡಿದ್ದಾರೆ.

Advertisement

ನೂತನ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪ್ರವೀಣ್‌ಸೂದ್‌ ಅವರನ್ನು ಸೋಮವಾರ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ತಮ್ಮ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ, ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರ ನಿರ್ಮಾಪಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ.

ಈ ಕುರಿತು, “ಉದಯವಾಣಿ’ ಜತೆ ಮಾತನಾಡಿದ ಸಾ.ರಾ.ಗೋವಿಂದು, ನೂತನ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಪ್ರವೀಣ್‌ಸೂದ್‌ ಅವರನ್ನು ಭೇಟಿ ಮಾಡಿ, ಕನ್ನಡ ಚಿತ್ರ ನಿರ್ಮಾಪಕರಿಗೆ ಆಗುತ್ತಿರುವ ಕೆಲ ಸಮಸ್ಯೆಗಳನ್ನು ಚರ್ಚೆ ಮಾಡಲಾಗಿದೆ. ಮುಖ್ಯವಾಗಿ ಬೆಂಗಳೂರು ನಗರದ ಕೆಲ ಪ್ರದೇಶಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಸಿಗುತ್ತಿಲ್ಲ.

ಹಾಗಾಗಿ, ನಿರ್ಮಾಪಕರು ಕೇಳಿದ ನಗರ ಪ್ರದೇಶಗಳಲ್ಲಿ ಇಲಾಖೆ ಅನುಮತಿ ನೀಡುವ ಮೂಲಕ ಸಮಸ್ಯೆ ಬಗೆಹರಿಸಬೇಕು. ಕಥೆಗೆ ಪೂರಕವಾಗಿ ಅಂತಹ ಸ್ಥಳಗಳು ಅಗತ್ಯವಿರುವುದರಿಂದ ಅಂತಹ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಕೊಡಬೇಕು ಮತ್ತು ಪೈರಸಿ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇನೆ’ ಎಂದರು.

ನಮ್ಮ ಮನವಿಗೆ ಸ್ಪಂದಿಸಿರುವ ಪ್ರವೀಣ್‌ಸೂದ್‌ ಅವರು, ಈ ಕುರಿತಂತೆ ನಿಮ್ಮ ಚಲನಚಿತ್ರ ಮಂಡಳಿಯಲ್ಲೇ ಒಂದು ಜಂಟಿ ಸಭೆಯನ್ನು ಕರೆದು, ಅಲ್ಲಿ ನಿರ್ಮಾಪಕರಿಗೆ ಇರುವ ಸಮಸ್ಯೆಗಳನ್ನು ಆಲಿಸಿ, ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಕಥೆಗೆ ಬೇಕಾದ ಜಾಗ ಅಗತ್ಯವಿದ್ದಲ್ಲಿ, ಅದಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿ ಚಿತ್ರೀಕರಣಕ್ಕೆ ಅನುಮತಿ ನೀಡುವುದಾಗಿಯೂ ಹೇಳಿದ್ದಾರೆ.

Advertisement

20 ದಿನಗಳ ಕಾಲ ಸಮಯ ಕೊಡಿ. ಆ ಬಳಿಕ ಒಂದು ಸಭೆ ನಡೆಸಿ, ಅಲ್ಲಿ ನಿರ್ಮಾಪಕರಿಗೆ ಆಗಬೇಕಿರುವ ವ್ಯವಸ್ಥೆ ಬಗ್ಗೆ ಚರ್ಚಿಸುವುದಾಗಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎಂ.ಜಿ. ರಾಮಮೂರ್ತಿ, ಎನ್‌.ಎಂ. ಸುರೇಶ್‌, ಕೆ.ಎಂ. ವೀರೇಶ್‌ ಸೇರಿದಂತೆ ಇತರೆ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next