ಸಸಿಹಿತ್ಲು : ಇಲ್ಲಿ ಪ್ರಾಕೃತಿಕ ವಿಕೋಪದಿಂದ ಬೀಚ್ ಪ್ರದೇಶದ ಅಳಿವೆಯಲ್ಲಿನ ನದಿ ಕೊರೆತಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಂಬಂಧಿತ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ತುರ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಸಸಿಹಿತ್ಲು ಬೀಚ್ ಪ್ರದೇಶಕ್ಕೆ ಅವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಜು. 15ರಂದು ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲು ಅಳವೆಯನ್ನು ಉಳಿಸಲು ಸ್ಥಳೀಯ ಅನುಭವಿ ಮೀನುಗಾರರನ್ನು, ಗ್ರಾಮಸ್ಥರ ಸಮ್ಮುಖದಲ್ಲಿಯೇ ಅಧಿಕಾರಿಗಳ ಸಭೆಯನ್ನು ನಡೆಸುವ ಚಿಂತನೆ ಇದೆ. ಸಸಿಹಿತ್ಲು ಪ್ರದೇಶ ಪ್ರವಾಸೋದ್ಯಮಕ್ಕೆ ಬೇಕಾದ ಆವಶ್ಯಕತೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರು ಸ್ಥಳೀಯ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು, ಸಸಿಹಿತ್ಲು ಪ್ರದೇಶದಲ್ಲಿ ಮುಖ್ಯವಾಗಿ ಸರ್ಫಿಂಗ್ ನಡೆಸುವ ಬದಲು ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಗಲಿ. ಸ್ಥಳೀಯರೇ ರಚಿಸಿರುವ ಬೀಚ್ ಅಭಿವೃದ್ಧಿ ಸಮಿತಿಯನ್ನು ಅಧಿಕೃತಗೊಳಿಸಬೇಕು. ಸಸಿಹಿತ್ಲಿನಲ್ಲಿ ಮುಖ್ಯವಾಗಿ ಮೀನುಗಾರಿಕಾ ವೃತ್ತಿಗೆ ಸಂಬಂಧಿತ ಯೋಜನೆ ರೂಪಿಸಲಿ. ಮೀನುಗಾರಿಕಾ ಜೆಟ್ಟಿಯಂತಹ ವಲಯವನ್ನು ನಿರ್ಮಿಸಲು ಪ್ರಯತ್ನ ನಡೆಸಬೇಕು ಎಂದು ಹೇಳಿಕೊಂಡರು.
ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್ ಕಾಮೆರೊಟ್ಟು, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸದಸ್ಯರಾದ ವಿನೋದ್ ಕುಮಾರ್ ಕೊಳುವೈಲು, ಚಿತ್ರಾ ಸುಕೇಶ್, ಅಶೋಕ್ ಬಂಗೇರ, ಸ್ಥಳೀಯರಾದ ಕದಿಕೆ ಮೊಗವೀರ ಸಭಾದ ಅಧ್ಯಕ್ಷ ವಾಸು ಸಿ. ಸಾಲ್ಯಾನ್, ಆಂಜನೇಯ ವ್ಯಾಯಾಮ ಶಾಲಾ ಅಧ್ಯಕ್ಷ ವಿನೋದ್ ಸಾಲ್ಯಾನ್, ಉದಯ ಬಿ. ಸುವರ್ಣ, ಶೋಭೇಂದ್ರ ಸಸಿಹಿತ್ಲು, ಸೂರ್ಯ ಕಾಂಚನ್, ಅನಿಲ್ ಕುಂದರ್, ಯುವಕ ಮಂಡಲದ ಅಧ್ಯಕ್ಷ ಪ್ರವೀಣ್ ಕರ್ಕೇರ, ನಾರಾಯಣ ಕರ್ಕೇರ, ಮನೋಜ್ ಕುಮಾರ್ ಹಳೆಯಂಗಡಿ, ಹಿಮಕರ್ ಕದಿಕೆ, ಆನಂದ ಸುವರ್ಣ, ಪ್ರವೀಣ್ ತಿಂಗಳಾಯ, ಹರೀಶ್ ಅಗ್ಗಿದಕಳಿಯ, ಜೀವರಕ್ಷಕ ದಳದ ಅನಿಲ್ ಸಾಲ್ಯಾನ್, ಮೂಲ್ಕಿಯ ವಿಶೇಷ ತಹಶೀಲ್ದಾರ್ ಮಾಣಿಕ್ಯ, ಕಂದಾಯ ನಿರೀಕ್ಷಕ ದಿಲೀಪ್ ರೋಡ್ಕಕರ್, ಗ್ರಾಮ ಕರಣಿಕ ಮೋಹನ್, ಸಹಾಯಕ ನವೀನ್ ಮೊದಲಾದವರು ಉಪಸ್ಥಿತರಿದ್ದರು.
ಹಕ್ಕುಪತ್ರಗಳ ವಿತರಣೆಗೆ ಪ್ರಯತ್ನ
ಸಸಿಹಿತ್ಲಿನ ಪ್ರದೇಶದಲ್ಲಿನ ಕೆಲವು ನಿವಾಸಿಗಳು ಹಕ್ಕು ಪತ್ರದ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸರಕಾರದ ನಿಯಮಾನುಸಾರವಾಗಿ ಹಕ್ಕುಪತ್ರಗಳ ವಿತರಣೆಗೆ ಪ್ರಯತ್ನ ನಡೆಸಲಾಗುವುದು. ಸಮುದ್ರ ತೀರದ ಅಗತ್ಯತೆಗಳನ್ನು ಸಹ ಮುಂದಿನ ದಿನದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಭರವಸೆಯನ್ನು ಶಾಸಕರು ನೀಡಿದರು.