ಕುಂದಾಪುರ: ಶಂಕರನಾರಾಯಣದ ಸೌಡ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಡಾ| ಬಿ.ಆರ್. ಅಂಬೇಡ್ಕರ್ ಮಾದರಿ ವಸತಿ ಶಾಲೆ ಕಟ್ಟಡಗಳ ಸಮೀಪ ಗುಡ್ಡ ಜರಿತವಾಗುತ್ತಿರುವ ಬಗ್ಗೆ ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು.
ಇದರ ಬಳಿಕ ವಂಡ್ಸೆ ಬ್ಲಾಕ್ ಕಾಂಗ್ರೆಸ್ ನಿಯೋಗ ಹಾಗೂ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರ ತಂಡ ಶಾಲಾ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿತ್ತು. ಅಪಾಯಕಾರಿ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಶಾಲೆಯ ಸ್ಥಳಕ್ಕೆ ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್, ಕಚೇರಿ ಅಧೀಕ್ಷಕ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕಾಮಗಾರಿ ನಿರ್ವಹಿಸುತ್ತಿರುವ ಕ್ರೈಸ್ ಸಂಸ್ಥೆಯ ಎಂಜಿನಿಯರ್ ಅಕ್ಷಯ್, ಸೈಟ್ ಎಂಜಿನಿಯರ್ ಉಪಸ್ಥಿತರಿದ್ದರು.
ವರದಿ ನೀಡಲಾಗುವುದು
ರಾಘವೇಂದ್ರ ವರ್ಣೇಕರ್ ಮಾತನಾಡಿ, ಕಳೆದ ತಿಂಗಳು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಅವರೊಂದಿಗೆ ವಸತಿ ಶಾಲೆ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿದ್ದು ಆಗಲೇ ಇಲ್ಲಿನ ವಿಚಾರದ ಬಗ್ಗೆ ಕಾಮಗಾರಿ ನಿರ್ವಹಿಸುತ್ತಿರುವ ಕ್ರೈಸ್ ಸಂಸ್ಥೆಯವರಲ್ಲಿ ತಾಂತ್ರಿಕ ಗುಣಮಟ್ಟ ಹಾಗೂ ತಡೆಗೋಡೆ ನಿರ್ಮಾಣ ವಿಚಾರದ ಬಗ್ಗೆ ಪತ್ರ ಬರೆಯಲಾಗಿತ್ತು. ಈಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಇನ್ನೊಂದು ವರದಿಯನ್ನು ಮೇಲಧಿಕಾರಿಗಳು ಮತ್ತು ಸಂಬಂಧಪಟ್ಟವರಿಗೆ ನೀಡುತ್ತೇವೆ. ಅಲ್ಲದೆ ಸೋಮವಾರ ಕ್ರೈಸ್ ಸಂಸ್ಥೆ ಮುಖ್ಯ ಎಂಜಿನಿಯರ್, ತಾಂತ್ರಿಕ ವಿಭಾಗದವರು ಭೇಟಿ ನೀಡಲಿದ್ದಾರೆ ಎಂದರು.