Advertisement

Suriname ;ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಬಳಿಕ ಸುದ್ದಿ: ಯಾವುದೀ ದೇಶ ಸುರಿನಾಮ್‌?

05:51 PM Jun 09, 2023 | Team Udayavani |

ಇತ್ತೀಚೆಗೆ ದಕ್ಷಿಣ ಅಮೆರಿಕ ಖಂಡದ ದೇಶ ಸುರಿನಾಮ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಜನರಾಗಿದ್ದು ಭಾರೀ ಸುದ್ದಿಯಾಗಿತ್ತು. ಭಾರತ ಮತ್ತು ಸುರಿನಾಮ್‌ ದೇಶಗಳ ನಡುವೆ ಆಳವಾಗಿ ಬೇರೂರಿರುವ ದ್ವಿಪಕ್ಷೀಯ ಸಂಬಂಧದ ದ್ಯೋತಕವಾಗಿ ದ್ರೌಪದಿ ಮುರ್ಮು ಅವರಿಗೆ ಸುರಿನಾಮ್‌ ರಾಷ್ಟ್ರಪತಿ ಚಂದ್ರಿಕಾ ಪ್ರಸಾದ್‌ ಸಂತೋಖೀ “ಗ್ರ್ಯಾಂಡ್‌ ಆರ್ಡರ್‌ ಆಫ್ ದಿ ಚೈನ್‌ ಆಫ್ ದಿ ಎಲ್ಲೊ ಸ್ಟಾರ್‌” ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ರಾಷ್ಟ್ರಪತಿ ಹುದ್ದೆ ಆಲಂಕರಿಸಿದ ಅನಂತರ ಮುರ್ಮು ಅವರ ಮೊದಲ ವಿದೇಶ ಪ್ರವಾಸದ ಭಾಗವಾಗಿ ಅವರು ಸುರಿನಾಮ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದರು.

Advertisement

ವಿಶೇಷವೇನೆಂದರೆ ಸುರಿನಾಮ್‌ ಭಾರತದ ಅತ್ಯಂತ ಹತ್ತಿರದ ಸಂಬಂಧಿ ಎಂಬ ವಿಚಾರ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಹಾಗಾದರೆ ವಿಶ್ವದ ಪುಟ್ಟ, ಸುಂದರ ದೇಶಗಳಲ್ಲಿ ಒಂದಾಗಿರುವ ಸುರಿನಾಮ್‌ನ ಬಗೆಗಿನ ಕುತೂಹಲಕರ ಮಾಹಿತಿಗಳು ಇಲ್ಲಿವೆ.

ಸುರಿನಾಮ್

ಸುರಿನಾಮ್, ದಕ್ಷಿಣ ಅಮೆರಿಕ ಖಂಡದ ಉತ್ತರ ಭಾಗದಲ್ಲಿನ ಒಂದು ಪುಟ್ಟ ದೇಶ. ಮೊದಲು ಈ ಸುರಿನಾಮ್‌ ದೇಶವನ್ನು ಡಚ್‌ ಗಯಾನ ಎಂದು ಕರೆಯಲ್ಪಡುತ್ತಿತ್ತು. ಈ ದೇಶ ಅಟ್ಲಾಂಟಿಕ್‌ ಸಾಗರ, ಬ್ರೆಝಿಲ್‌ ಮಾತ್ರವಲ್ಲದೇ ಪೂರ್ವಕ್ಕೆ ಫ್ರೆಂಚ್‌ ಗಯಾನಾ ಮತ್ತು ಪಶ್ಚಿಮಕ್ಕೆ  ಗಯಾನಾ ದೇಶಗಳಿಂದ ಸುತ್ತುವರೆಯಲ್ಪಟ್ಟಿದೆ.

Advertisement

ವಿಸ್ತಾರ ಮತ್ತು ಜನಸಂಖ್ಯೆಯ ಲೆಕ್ಕದಲ್ಲಿ ಇದು ದಕ್ಷಿಣ ಅಮೆರಿಕದ ಅತೀ ಚಿಕ್ಕ ದೇಶ. ಸುರಿನಾಮ್ ನ ವಿಸ್ತೀರ್ಣ1,63,820 ಚ.ಕಿ.ಮೀ. ಜನಸಂಖ್ಯೆ ಸುಮಾರು 5 ಲಕ್ಷ. ಸುರಿನಾಮ್‌  ರಾಷ್ಟ್ರದ ರಾಜಧಾನಿ ಪರಮಾರಿಬೋ ನಗರ. ವಿಶೇಷವೇನೆಂದರೆ ಸುರಿನಾಮ್ ದಕ್ಷಿಣ ಅಮೆರಿಕದ ದೇಶವಾಗಿದ್ದರೂ ಇಲ್ಲಿನ ಅಧಿಕೃತ ಭಾಷೆ ʻಡಚ್ʼ. ಯೂರೋಪ್‌ ಹೊರತುಪಡಿಸಿ ಡಚ್‌ನ್ನು ತನ್ನ ಅಧಿಕೃತ ಭಾಷೆಯಾಗಿ ಹೊಂದಿರುವ ರಾಷ್ಟ್ರ ಸುರಿನಾಮ್‌.

ಸುರಿನಾಮ್‌ ಇತಿಹಾಸ

ಕ್ರಿ.ಶ. 15ನೆಯ ಶತಮಾನದ ನಂತರ ಸುರಿನಾಮ್ ಪ್ರದೇಶದ ಮೇಲೆ ಸ್ಪೇಯ್ನ್ , ಇಂಗ್ಲೆಂಡ್ ಹಾಗೂ ನೆದರ್ಲ್ಯಾಂಡ್ ದೇಶಗಳು ಹಕ್ಕು ಸಾಧಿಸಲು ಪ್ರಯತ್ನ ಪಟ್ಟಿದ್ದವು. ಕೊನೆಗೆ ಸುರಿನಾಮ್ ಡಚ್ಚರ ಕೈ ವಶವಾಯಿತು. ಡಚ್ಚರು ಗುಲಾಮಗಿರಿ ಆರಾಧಕರು. ಮಾಮೂಲಿನಂತೆ ಡಚ್ಚರು ಈ ಪುಟ್ಟ ರಾಷ್ಟ್ರದಲ್ಲೂ  ಗುಲಾಮಗಿರಿ ವ್ಯವಸ್ಥೆಯನ್ನು  ಜಾರಿಯಲ್ಲಿಟ್ಟರು. ಈ ಗುಲಾಮರ ಪೈಕಿ ಅನೇಕರು ಆಫ್ರಿಕಾ ಮೂಲದವರಾಗಿದ್ದರು.

1863 ರಲ್ಲಿ ಗುಲಾಮಗಿರಿ ವ್ಯವಸ್ಥೆ ರದ್ದಾಯಿತು. ಆ ಬಳಿಕ ಡಚ್ಚರು ಸುರಿನಾಮ್‌ನ ಗದ್ದೆ-ತೋಟಗಳಲ್ಲಿ ದುಡಿಯಲು ಇಂಡೋನೇಷ್ಯಾ, ಭಾರತದಿಂದ ಕೆಲಸದಾಳುಗಳನ್ನು ಸಾಗಿಸಿದರು. 1953ರಲ್ಲಿ ಸುರಿನಾಮ್ ಜನತೆ ಸ್ವಲ್ಪಮಟ್ಟಿನ ಸ್ವತಂತ್ರ್ಯ ಆಡಳಿತದ ಅಧಿಕಾರವನ್ನು ಪಡೆದುಕೊಂಡರು. ನವೆಂಬರ್ 25, 1975 ರಂದು ಸುರಿನಾಮ್ ಪೂರ್ಣವಾಗಿ ಸ್ವತಂತ್ರವಾಯಿತು.

ಸುರಿನಾಮ್‌ ಜನಸಂಖ್ಯೆ ಮತ್ತು ಭಾಷೆ

ಭಾರತೀಯ ಮೂಲದ ಜನರು ದೇಶದ ಒಟ್ಟು ಜನಸಂಖ್ಯೆಯ 37% ನಷ್ಟಿದ್ದಾರೆ. ಇವರಲ್ಲದೆ ಸುರಿನಾಮ್‌ನಲ್ಲಿ ʻಕ್ರಿಯೋಲ್ʼ ಎಂದು ಕರೆಯಲ್ಪಡುವ ಮಿಶ್ರಜನಾಂಗೀಯ ಜನರು 31% ನಷ್ಟಿದ್ದಾರೆ. ಸುಮಾರು 15% ದಷ್ಟು ಜಾವಾ ಮೂಲದ ಜನ ಹಾಗೂ ಕೊಂಚ ಅಮೆರಿಂಡಿಯನ್ನರು (ಅಮೇರಿಕನ್‌-ಇಂಡಿಯನ್ಸ್‌) ಮತ್ತು ಡಚ್ ಮೂಲದವರು ಸಹ ಇಲ್ಲಿ ನೆಲೆಸಿದ್ದಾರೆ.

ಇದಲ್ಲದೆ ಸ್ರನಮ್ ಟೋಂಗೋ ಎಂಬ ಮಿಶ್ರಭಾಷೆಯು ಸಹ ಇಲ್ಲಿ ಚಾಲ್ತಿಯಲ್ಲಿದೆ. ಹಿಂದುಸ್ತಾನಿ ಎನ್ನಲ್ಪಡುವ ಹಿಂದಿ ಭಾಷೆಯ ಉಪಭಾಷೆಯೂ ಹೆಚ್ಚಾಗಿ ಇಲ್ಲಿ ಬಳಕೆಯಲ್ಲಿದೆ.

ಸುರಿನಾಮ್‌ ದೇಶ 52% ಕ್ರಿಶ್ಚಿಯನ್‌,19% ಹಿಂದೂ , 14% ಮುಸ್ಲಿಂ ಜನಸಂಖ್ಯೆ ಹೊಂದಿದೆ. ಭಾರತೀಯ ಹಬ್ಬಗಳಾದ ಹೋಳಿ, ದೀಪಾವಳಿಯನ್ನು ಈ ದೇಶದಲ್ಲಿ ವಿಜೃಂಬಣೆಯಿಂದ ಆಚರಿಸಲಾಗುತ್ತದೆ.

ಭೌಗೋಳಿಕ ಪ್ರದೇಶ

ಭೂಮಧ್ಯ ರೇಖೆಗೆ ಸಮೀಪದಲ್ಲೇ ಇರುವ ಸುರಿನಾಮ್‌ ದೇಶದ 80% ಭಾಗವು ಉಷ್ಣ ವಲಯದ ಮಳೆಕಾಡು ಹಾಗೂ ಸವಾನ್ನಾ ಹುಲ್ಲುಗಾವಲುಗಳಿಂದ ಕೂಡಿದೆ. ದೇಶದ 95% ರಷ್ಟು ಪ್ರದೇಶ ಅರಣ್ಯ ಪ್ರದೇಶದಿಂದಲೇ ಕೂಡಿದೆ. ಉತ್ತರದ ಅಟ್ಲಾಂಟಿಕ್ ಸಾಗರತೀರದ ಪ್ರದೇಶವು ಬಹುಪಾಲು ಕೃಷಿಭೂಮಿಯಾಗಿದ್ದು ಅನೇಕ ಜನರು ಇಲ್ಲಿಯೇ ನೆಲೆಸಿದ್ದಾರೆ. ಸುರಿನಾಮ್ ಒಂದು ಹಿಂದುಳಿದ ದೇಶವಾಗಿದ್ದರೂ ಬಾಕ್ಸೈಟ್‌ ಉದ್ಯಮ ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಿನಂತಿದೆ. ದೇಶದಲ್ಲಿ ಆಹಾರ ಬೇಳೆಯಾಗಿ ಭತ್ತ ಮತ್ತು ಬಾಳೆಯನ್ನು ಬೆಳೆಯಲಾಗುತ್ತದೆ.ಇದು ವಿಶ್ವದ ಕಾರ್ಬನ್‌ ನೆಗೆಟಿವ್‌ ದೇಶವೆಂದೂ ಪ್ರಖ್ಯಾತಿ ಪಡೆದಿದೆ.

ಸುರಿನಾಮ್‌ ರಾಜಕೀಯ

ಸುರಿನಾಮ್‌ ಸಾಂವಿಧಾನಿಕ ಪ್ರಜಾಪ್ರಭುತ್ವ ಗಣತಂತ್ರ ವ್ಯವಸ್ಥೆಯ ಸರಕಾರವನ್ನು ಹೊಂದಿದೆ. ಇಲ್ಲಿನ ಸಂವಿಧಾನ 1987ರಲ್ಲಿ ರಚಿಸಲ್ಪಟ್ಟಿದೆ. ಇಲ್ಲಿನ ಅಸೆಂಬ್ಲಿ 51 ಮಂದಿ ಚುನಾಯಿತ ಸದಸ್ಯರನ್ನು ಹೊಂದಿದ್ದು ಐದು ವರ್ಷಗಳ ಆಡಳಿತ ಅವಧಿಯನ್ನು ಹೊಂದಿರುತ್ತಾರೆ.

ಸುರಿನಾಮ್‌ನ ರಾಷ್ಟ್ರಪತಿಯನ್ನುಚುನಾಯಿತ ಸದಸ್ಯರು ಮೂರನೇ ಎರಡರಷ್ಟು ಬಹುಮತದಿಂದ ಆಯ್ಕೆ ಮಾಡಬೇಕಾಗುತ್ತದೆ.

ರಾಷ್ಟ್ರಪತಿ ದೇಶದ ಮುಖ್ಯಸ್ಥರಾಗಿ 16 ಮಂದಿಯ ಕ್ಯಾಬಿನೆಟ್‌ನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಇಡೀ ಸುರಿನಾಮ್‌ ದೇಶವನ್ನು 10 ಆಡಳಿತಾತ್ಮಕ ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದ್ದು, ಇಲ್ಲಿಗೆ ರಾಷ್ಟ್ರಪತಿಯಿಂದ ಆಯ್ಕೆಯಾದ ಜಿಲ್ಲಾ ಕಮಿಷನರ್‌ ಅವರೇ ಮುಖ್ಯಸ್ಥರಾಗಿರುತ್ತಾರೆ. ಸದ್ಯ ಭಾರತೀಯ ಮೂಲದ ಚಂದ್ರಿಕಾ ಪ್ರಸಾದ್‌ ಸಂತೋಖೀ ಸುರಿನಾಮ್‌ ರಾಷ್ಟ್ರಪತಿಯಾಗಿದ್ದಾರೆ.

ಈ ದೇಶ ಆಯತಾಕಾರದ ಬಾವುಟವನ್ನು ಹೊಂದಿದ್ದು ಬಿಳಿ, ಕೆಂಪು, ಹಸಿರು ಬಣ್ಣಗಳಿಂದ ಕೂಡಿದೆ.  ಮಧ್ಯದಲ್ಲಿ ಹಳದಿ ಬಣ್ಣದ ನಕ್ಷತ್ರವನ್ನೂ ಹೊಂದಿದೆ.

ಇತ್ತೀಚೆಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸುರಿನಾಮ್‌ಗೆ ಭೇಟಿ ನೀಡಿದ್ದ ವೇಳೆ ʻಮೂಲಸೌಕರ್ಯ, ಹೊಸ ತಂತ್ರಜ್ಞಾನ, ಡಿಜಿಟಲ್‌ ಸೇವೆ, ಫಿನ್‌ಟೆಕ್‌ ಸೇರಿದಂತ ಹಲವು ಕ್ಷೇತ್ರಗಳ ಬಗೆಗಿನ ಅನುಭವವನ್ನು ಭಾರತ ಸುರಿನಾಮ್‌ ಜತೆಗೆ ಹಂಚಿಕೊಳ್ಳುವ ಆ ಮೂಲಕ ದೇಶದ ಪ್ರಗತಿಗೆ ನೆರವಾಗಲು ಸಿದ್ಧವಿದೆ. ಸುರಿನಾಮ್‌ನ ಜನತೆಗೆ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನವಿದೆʼ ಎಂದು ಹೇಳಿಕೆ ನೀಡಿದ್ದರು.

~ ಪ್ರಣವ್‌ ಶಂಕರ್‌

Advertisement

Udayavani is now on Telegram. Click here to join our channel and stay updated with the latest news.

Next