Advertisement

ಹಿರೇಕಾಸನಕಂಡಿಗೆ ನಾಡಗೌಡ ಭೇಟಿ

02:44 PM Aug 27, 2017 | Team Udayavani |

ಗೊರೇಬಾಳ: ಮಾಜಿ ಶಾಸಕ ವೆಂಕಟ್‌ ರಾವ್‌ ನಾಡಗೌಡ ಶನಿವಾರ ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿ ಗ್ರಾಮದ
ಬಳಿ ತುಂಗಭದ್ರ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ನಂತರ ಮಾತನಾಡಿದ ಅವರು, ಈಗಾಗಲೇ ತುಂಗಭದ್ರ ನದಿಯಲ್ಲಿ 60 ಟಿಎಂಸಿ ಅಡಿ ನೀರು ಸಂಗ್ರಹವಿದ್ದು, 1300 ಕ್ಯೂಸೆಕ್‌ ಒಳಹರಿವು ಇದೆ. ಆ.29ರಂದು ನಡೆಯುವ ಐಸಿಸಿ ಸಭೆಯಲ್ಲಿ ಕಾಲುವೆಗಳಿಗೆ ನೀರು ಹರಿಸಬೇಕು. ತುಂಗಭದ್ರಾ ನದಿ ದಂಡೆಯ ಹಿನ್ನೀರು ಪ್ರದೇಶದ ರೈತರನ್ನು ವಿಚಾರಿಸಿದಾಗ ಕಳೆದ ವರ್ಷಕ್ಕಿಂತ ಈ ವರ್ಷ ನೀರು ಹೆಚ್ಚಿದೆ. ಪ್ರತಿದಿನ ಒಳ ಹರಿವು ಹೆಚ್ಚಾಗುತ್ತಿದೆ. ತುಂಗಭದ್ರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಒಂದು ಬೆಳೆಗೆ ಸಂಪೂರ್ಣ ನೀರು ಒದಗಿಸಬಹುದು ಎಂದು ಹೇಳುತ್ತಿದ್ದಾರೆ. ಆದರೆ ಸರಕಾರ ರೈತರ ಬೆಳೆಗೆ ನೀರು ಬಿಡಲು ಮೀನಾ ಮೇಷ ಮಾಡುತ್ತಿದೆ. ಶಾಸಕ ಹಂಪನಗೌಡ ಬಾದರ್ಲಿ ಆ.29ರಂದು ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಾಲುವೆಗಳಿಗೆ ಎಷ್ಟು ನೀರು ಬಿಡುತ್ತಿರಿ? ಯಾವಾಗ ಬಿಡುತ್ತಿರಿ? ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಬಳ್ಳಾರಿ ಜಿಲ್ಲೆಗೆ ಕುಡಿಯುವ ನೀರಿನ ನೆಪದಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ. ಜಿಲ್ಲಾಧಿಕಾರಿಗಳು ಕುಡಿಯಲಿಕ್ಕೆ ನೀರು ಬೇಕು ಎಂದು ಪತ್ರವನ್ನು ಬರೆದಿದ್ದಾರೆ. ಆದ್ದರಿಂದ ಕಾಲುವೆಗೆ 150 ಕ್ಯೂಸೆಕ್‌ ನೀರು ಹರಿಯಬಿಡಲಾಗಿದೆ ಎಂದು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಕಾಲುವೆಯಲ್ಲಿ 1500 ಕ್ಯೂಸೆಕ್‌ ನೀರು ಹರಿಯುತ್ತಿರುವುದು ಕಂಡುಬಂದಿದೆ. ಒಟ್ಟಿನಲ್ಲಿ ತುಂಗಭದ್ರಾ ಆಡಳಿತ ಮಂಡಳಿ ಅಧಿಕಾರಿಗಳು ತಪ್ಪು ಲೆಕ್ಕ ಹೇಳಿ ರೈತರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ಮುಖಂಡ ಯಂಕೋಬಣ್ಣ ಕಲ್ಲೂರ, ಅಶೋಕ ಗದ್ರಟಗಿ, ಧರ್ಮನಗೌಡ ಮಲ್ಕಾಪುರ, ಎನ್‌. ಸಣ್ಣ ಶಿವನಗೌಡ ಗೊರೇಬಾಳ, ಪಿ. ವೆಂಕಟೇಶ ,ಇ.ಗೋಪಿ, ಎಂ.ಲಕ್ಷ್ಮಣರಾವ್‌, ವೆಂಕೋಬ, ಎಂ. ರಾಮಾರಾವ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next