ದಾವಣಗೆರೆ: ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಕಳೆದ 6ರಂದು ನಡೆದ ರಾಜ್ಯ ಮಟ್ಟದ ಶ್ವಾನ ಪ್ರದರ್ಶನದಲ್ಲಿ ಪ್ರಥಮ ಸ್ಥಾನಗಳಿಸಿದ ಶ್ವಾನಗಳ ಮಾಲೀಕರಿಗೆ ನಗದು ಬಹುಮಾನ ನೀಡಲು ಅಧಿಕಾರಿಗಳು, ಸಂಘಟಕರು ಚೌಕಾಸಿ…ಗೆ ಇಳಿದಿದ್ದಾರೆ!.
ರಾಜ್ಯ ಮಟ್ಟದ ಪಶು ಮೇಳ-2019ರ ಅಂಗವಾಗಿ ಸಿಂಧನೂರಿನ ತಾಲೂಕು ಕ್ರೀಡಾಂಗಣದಲ್ಲಿ ಜಾತಿ, ತಳಿವಾರು ಶ್ವಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರೇ ಚಾಲನೆ ನೀಡಿದ್ದರು. ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿ, ವಿಜೇತರಾದ ದಾವಣಗೆರೆಯ ಶ್ವಾನಗಳ ಮಾಲೀಕರಿಗೆ ಬಹುಮಾನದ ಮೊತ್ತ ನೀಡಲು ಅಧಿಕಾರಿಗಳು ಹೊಸ ರಾಗ ತೆಗೆದಿದ್ದಾರೆ.
ಶ್ವಾನ ಪ್ರದರ್ಶನದಲ್ಲಿ ವಿಜೇತರಿಗೆ ಪಶುಸಂಗೋಪನಾ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಪ್ರಮಾಣ ಪತ್ರ ವಿತರಿಸಿದ್ದರು. ನಗದು ಬಹುಮಾನವನ್ನ ನಂತರ ನೀಡುವುದಾಗಿ ಅಧಿಕಾರಿಗಳು, ಸಂಘಟಕರು ಹೇಳಿದ್ದರಿಂದ ಶ್ವಾನದ ಮಾಲೀಕರು ಒಲ್ಲದ ಮನಸ್ಸಿನಿಂದಲೇ ಬರೀ ಪ್ರಮಾಣ ಪತ್ರ ಪಡೆದಿದ್ದರು. ಘೋಷಣೆ ಮಾಡಿರುವಂತೆ ಅಧಿಕಾರಿಗಳು ಹಾಗೂ ಸಂಘಟಕರನ್ನು ನಗದು ಬಹುಮಾನ ಬಗ್ಗೆ ಕೇಳಿದರೆ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಂದ ಅನುಮತಿ ದೊರೆತಿಲ್ಲ. ಬೇಕಾದರೆ 1 ಸಾವಿರ ರೂ. ಕೊಡುತ್ತೇವೆ ಎಂಬುದಾಗಿ ಚೌಕಾಸಿಗೆ ಇಳಿದಿದ್ದಾರೆ!.
ಪ್ರತಿ ತಳಿವಾರು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದ ಶ್ವಾನಕ್ಕೆ 5 ಸಾವಿರ ನಗದು ಘೋಷಿಸಲಾಗಿತ್ತು. ಫೋನ್ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಕೋರಲಾಗಿತ್ತು. ಮೊಬೈಲ್‌ನಲ್ಲೂ ಶ್ವಾನಗಳ ಮಾಲೀಕರೊಂದಿಗೆ ನಗದು ಬಹುಮಾನ ಇತ್ಯಾದಿ ವಿಚಾರಗಳ ಚಾಟ್ ಮಾಡಲಾಗಿತ್ತು. ಈಗ ಅದೇ ಅಧಿಕಾರಿಗಳು, ಸಂಘಟಕರು ತಮಗೂ ಹಾಗೂ ನಗದು ಬಹುಮಾನಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ. ಏನೋ ಒಂದು ಸಾವಿರ ಕೊಡುತ್ತೇವೆ ಎಂಬುದಾಗಿ ಹೇಳುತ್ತಿದ್ದಾರೆ ಎಂದು ಎಂದು ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಸಚಿನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯ ಮಟ್ಟದ ಪಶು ಮೇಳದಲ್ಲಿನ ಶ್ವಾನ ಪ್ರದರ್ಶನಕ್ಕಾಗಿಯೇ 12 ಲಕ್ಷ ಮೀಸಲಿಡಲಾಗಿದೆ. ಪ್ರದರ್ಶನದಲ್ಲಿ ಗೆದ್ದ ಮೇಲೆ ಅಧಿಕಾರಿಗಳಿಗೆ ನಗದು ಬಹುಮಾನ ಕೇಳಿದರೆ ಇಲ್ಲದ್ದನ್ನೆಲ್ಲಾ ಹೇಳುತ್ತಾರೆ. ಬೇಕಾದರೆ 1 ಸಾವಿರ ರೂ. ಕೊಡುತ್ತೇವೆ. ಕೆಲವಕ್ಕೆ ಬಹುಮಾನ ಘೋಷಿಸಿಯೇ ಇರಲಿಲ್ಲ ಎನ್ನುತ್ತಾರೆ ಎಂದು ತಿಳಿಸಿದರು.
ಮನುಷ್ಯರಿಗೆ ಮೋಸ ಮಾಡುತ್ತಿದ್ದ, ಸುಳ್ಳು ಹೇಳುತ್ತಿದ್ದ ಘಟನೆಗಳೀಗ ಮೂಕ ಪ್ರಾಣಿಗಳ ವಿಚಾರದಲ್ಲೂ ನಡೆಯುತ್ತಿದೆ. ಕ್ಯಾಷ್ ನಾಳೆ ಕೊಡುತ್ತೇವೆ ಎಂದಾಗಲೇ ಅನುಮಾನ ಇತ್ತು. ಸರ್ಕಾರವೇ ಶ್ವಾನ ಪ್ರದರ್ಶನ ಆಯೋಜಿಸಿರುವಾಗ ಮೋಸ ಆಗುವುದಿಲ್ಲ. ಹೇಳಿದಂತೆ ಅಧಿಕಾರಿಗಳು ಹಣ ಕೊಡುತ್ತಾರೆ ಅಂದುಕೊಂಡಿದ್ದೆವು. ಈಗ ಹಣ ಕೇಳಿದರೆ ಏನೇನೋ ಹೇಳುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಚಿನ್ ಅವರ ಫ್ರೆಂಚ್ ಬುಲ್ ಡಾಗ್, ಆನೆ ಸಿದ್ದು ಅವರ ಡಾಬರ್‌ಮನ್ ಎರಡೂ ಶ್ವಾನ ಪ್ರಥಮ ಸ್ಥಾನ ಪಡೆದಿವೆ. ಇನ್ನು ಚಾಂಪಿಯನ್ ಲೈನ್ ಆಫ್‌ನಲ್ಲಿ ಆನೆ ಸಿದ್ದು ಅವರ ಶ್ವಾನ 5 ಸಾವಿರ ರೂಪಾಯಿ ಗೆದ್ದಿದೆ. ಆದರೆ, ಕೈಗೆ ಒಂದು ಪೈಸೆಯೂ ಬಂದಿಲ್ಲ. ಹಣ ಕೊಡುವುದಕ್ಕಿಂತಲೂ ಮೂಕ ಪ್ರಾಣಿಗಳ ವಿಚಾರದಲ್ಲಿ ಸುಳ್ಳು ಹೇಳುವ ಅಧಿಕಾರಿಗಳು ಮತ್ತು ಸಂಘಟಕರ ಬಗ್ಗೆ ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.