Advertisement

ನೀರು ರೇಷನಿಂಗ್‌; ಎರಡು ದಿನಗಳೊಳಗೆ ಅಂತಿಮ ತೀರ್ಮಾನ: ಸಚಿವ ಖಾದರ್‌

11:15 AM Apr 29, 2019 | Team Udayavani |

ಮಹಾನಗರ: ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ ಮುಂದಿನ ಎರಡು ದಿನಗಳ ತುಂಬೆಯ ಒಳಹರಿವು ಗಮನಿಸಿಕೊಂಡು, ಮಳೆಯ ಸಾಧ್ಯತೆಯನ್ನು ಪರಾಮರ್ಶಿಸಿ ರೇಷನಿಂಗ್‌ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ನಗರಕ್ಕೆ ಕುಡಿಯುವ ನೀರು ಪೂರೈಕೆ ಯಲ್ಲಿ ಎದುರಾಗಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ, ರವಿವಾರ ತುಂಬೆ ವೆಂಟೆಡ್‌ ಡ್ಯಾಂಗೆ ಭೇಟಿ ನೀಡಿ ಅಧಿಕಾರಿಗಳ ಜತೆಗೆ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಜಿಲ್ಲಾಡಳಿತ, ಮನಪಾದ ಸದ್ಯದ ನಿಯಮ ಪ್ರಕಾರ ಪಾಲಿಕೆ ರೇಷನಿಂಗ್‌ ಮೇ 1ರಿಂದ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಇಬ್ಬರು ಶಾಸಕರ ಅಭಿಪ್ರಾಯ ಪಡೆದುಕೊಂಡು, ಮಾಜಿ ಶಾಸಕರು ಸಹಿತ ಜನಪ್ರತಿನಿಧಿಗಳಿಂದ ಮಾಹಿತಿ ಪಡೆದು, ಅಧಿಕಾರಿಗಳ ವಿವರಗಳೊಂದಿಗೆ ಜಿಲ್ಲಾಡಳಿತದ ಜತೆಗೆ ಚರ್ಚಿಸಿ ಮುಂದಿನ ಎರಡು ದಿನದೊಳಗೆ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಬಾವಿಗಳ ಸ್ವಚ್ಛತೆಗೆ ಕ್ರಮ
ಮುಂಜಾಗೃತ ಕ್ರಮವಾಗಿ ಮನಪಾ ವ್ಯಾಪ್ತಿಯ 48 ಸರಕಾರಿ ಬಾವಿ, ಸಾರ್ವ ಜನಿಕ ಬಾವಿಗಳನ್ನು ಸ್ವಚ್ಛಗೊಳಿಸಿ ಬಳಕೆಗೆ ಕ್ರಮ ವಹಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಎತ್ತರ ಪ್ರದೇಶಗಳಿಗೆ ನೀರಿನ ಪೂರೈಕೆಗೆ ಅಡಚಣೆಯಾದಲ್ಲಿ ಕುಡಿಯುವ ನೀರು ಒದಗಿಸಲು ಒಟ್ಟು 8 ಟ್ಯಾಂಕರ್‌ಗಳನ್ನು ಖಾಸಗಿಯವರಿಂದ ಬಾಡಿಗೆ ಆಧಾರದಲ್ಲಿ ಪಡೆಯಲು ಕ್ರಮ ವಹಿಸಲಾಗಿದೆ.

ಜತೆಗೆ ಕೊಳವೆಬಾವಿಗಳನ್ನು ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದ್ದು, ಪ್ಲಷಿಂಗ್‌ ಮಾಡಲು ಕ್ರಮ ವಹಿಸಲಾಗಿದೆ ಎಂದರು.

Advertisement

ಮನಪಾದಿಂದ ಉಳ್ಳಾಲ ಪುರಸಭೆಗೆ 3 ಎಂಎಲ್ಡಿ, ಮೂಲ್ಕಿ ಪುರಸಭೆಗೆ 2 ಎಂಎಲ್ಡಿ ನೀರನ್ನು ಪೂರೈಕೆ ಮಾಡುವ ಬಗ್ಗೆ ಎಂಓಯು ಮಾಡಲಾಗಿದ್ದು, ನೀರಿನ ಲಭ್ಯತೆಯನ್ನು ಅನುಸರಿಸಿ ಪ್ರಸ್ತುತ ಉಳ್ಳಾಲ ಪುರಸಭೆಗೆ 1.6 ಎಂಎಲ್ಡಿ ಹಾಗೂ ಮೂಲ್ಕಿ ಪುರಸಭೆಗೆ 1 ಎಂಎಲ್ಡಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು.

ಮಂಗಳೂರು ತಾಲೂಕು ಬರಪೀಡಿತ ಎಂದು ಘೋಷಣೆಯಾಗಿದ್ದರೂ ನಗರವ್ಯಾಪ್ತಿಯಲ್ಲಿ 5 ವರ್ಷಗಳಲ್ಲಿ ನೀರಿನ ಯಾವುದೇ ಸಮಸ್ಯೆ ಇಲ್ಲದೆ ಸರಾಗವಾಗಿ ನೀರು ನೀಡಿರುವ ಪಾಲಿಕೆಯ ಆಡಳಿತ ಅವಧಿ ಯಶಸ್ವಿ ಕಾರ್ಯನಿರ್ವಹಿಸಿದೆ ಎಂದರು.

7 ಮೀ.ನೀರು ಸಂಗ್ರಹದ ಗುರಿ
ಸದ್ಯ ತುಂಬೆ ವೆಂಟೆಡ್‌ ಡ್ಯಾಂನಲ್ಲಿ 6 ಮೀಟರ್‌ ನೀರು ನಿಲುಗಡೆಗೆ ಮಾತ್ರ ಅವಕಾಶವಿದೆ. ಆದರೆ 7 ಮೀಟರ್‌ ನೀರು ನಿಲ್ಲಿಸಲು ಸಾಧ್ಯತೆಗಳಿವೆ. ಹೀಗಾಗಿ ಸಮೀಪದಲ್ಲಿ ಕೆಲವು ಕಡೆಗಳಲ್ಲಿ ಭೂಮಿ ಮುಳುಗಡೆಯಾಗುವ ಬಗ್ಗೆ ಮಾಹಿತಿಯಿದೆ. ಇದಕ್ಕಾಗಿ ಸಂಬಂಧಪಟ್ಟ ರೈತರ ಜತೆಗೆ ಮಾತುಕತೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಈ ಹಿಂದೆಯೇ ತಿಳಿಸಲಾಗಿತ್ತು. ಯಾರಿಗೂ ತೊಂದರೆಯಾಗದಂತೆ ಅತ್ಯಂತ ಎಚ್ಚರಿಕೆಯಿಂದ ಈ ಕಾರ್ಯ ನಡೆಯಲಿದೆ ಎಂದು ಸಚಿವ ಖಾದರ್‌ ಹೇಳಿದರು.

ವಿ.ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್‌.ಲೋಬೋ, ಮನಪಾ ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ, ಭಾಸ್ಕರ್‌ ಕೆ, ಮಾಜಿ ಸದಸ್ಯರಾದ ನವೀನ್‌ ಡಿ’ಸೋಜಾ, ಅಬ್ದುಲ್ ರವೂಫ್‌, ದೀಪಕ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ನೀರು ಮುಂದಿನ 28 ದಿನಕ್ಕೆ ಮಾತ್ರ!
ತುಂಬೆ ವೆಂಟೆಡ್‌ ಡ್ಯಾಂನಲ್ಲಿ 4.90 ಮೀ. (7.30 ಎಂ.ಸಿ.ಎಂ)ನಷ್ಟು ನೀರು ಸಂಗ್ರಹವಾಗಿದ್ದು ,ನಿರಂತರ ನೀರು ಪೂರೈಕೆ ಮಾಡಿದರೆ ಮುಂದಿನ 28 ದಿನಗಳಿಗೆ ಸಾಕಾಗುತ್ತದೆ. ಒಂದು ವೇಳೆ ಆ ವೇಳೆಗಾಗುವಾಗ ಮಳೆ ಬಾರದಿದ್ದರೆ ಸಮಸ್ಯೆ ಆಗಬಹುದು ಎಂಬ ಕಾರಣಕ್ಕಾಗಿ ರೇಷನಿಂಗ್‌ ಮಾಡಿ ನೀರು ಸಂಗ್ರಹಕ್ಕೆ ಉದ್ದೇಶಿಸಲಾಗಿದೆ. ಹೀಗಾಗಿ, ಒಂದು ವೇಳೆ ರೇಷನಿಂಗ್‌ ರೀತಿಯಲ್ಲಿ (4 ದಿನ ನೀರು-2 ದಿನ ಸ್ಥಗಿತ) ಇದೇ ನೀರನ್ನು ನೀಡುವುದಾದರೆ ಜೂನ್‌ 15ರ ವರೆಗೆ ಸುಧಾರಿಸಬಹುದು. ಸದ್ಯ ಎಎಂಆರ್‌ ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆ ಇದ್ದು ಬಳಕೆಗೆ ಲಭ್ಯವಿಲ್ಲ ಎಂದು ಮನಪಾ ಅಧಿಕಾರಿಗಳು ತಿಳಿಸಿದರು.

ಪರ್ಯಾಯ ನೀರಿಗಾಗಿ ಹರೇಕಳ-ಅಡ್ಯಾರ್‌ ಡ್ಯಾಂ
ಉಳ್ಳಾಲ ಸಹಿತ ವಿವಿಧ ಭಾಗಗಳಿಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಹರೇಕಳ-ಅಡ್ಯಾರ್‌ ಕಿಂಡಿ ಅಣೆಕಟ್ಟು ಕಾಮಗಾರಿಗೆ ಈಗಾಗಲೇ ಒಪ್ಪಿಗೆ ದೊರೆತು ಟೆಂಡರ್‌ ಹಂತದಲ್ಲಿದೆ. ತುಂಬೆ ಡ್ಯಾಂನಿಂದ ಈ ಡ್ಯಾಂಗೆ ಸುಮಾರು 3 ಕಿ.ಮೀ. ಅಂತರವಿರಲಿದೆ. 4 ಮೀಟರ್‌ ಎತ್ತರದಲ್ಲಿ ನಿರ್ಮಿಸುವ ಹೊಸ ಡ್ಯಾಂನಲ್ಲಿ 3 ಮೀಟರ್‌ ನೀರು ನಿಲುಗಡೆಗೆ ಉದ್ದೇಶಿಸಲಾಗಿದೆ. ಜತೆಗೆ 8 ಮೀ. ವಿಸ್ತೀರ್ಣದ ರಸ್ತೆ ನಿರ್ಮಾಣಕ್ಕೂ ಇಲ್ಲಿ ಉದ್ದೇಶಿಸಲಾಗಿದ್ದು, ಇದರಲ್ಲಿ 1 ಮೀ. ಪಾದಚಾರಿಗಳಿಗೆ ಮೀಸಲಾಗಿರುತ್ತದೆ. ಇದು ಕೈಗೂಡಿದರೆ ಸಿಹಿನೀರಿನ ಇನ್ನೊಂದು ಡ್ಯಾಂ ನಗರ ವ್ಯಾಪ್ತಿಯ ಹತ್ತಿರದಲ್ಲಿ ಮತ್ತೂಂದು ನಿರ್ಮಾಣ ವಾದಂತಾಗುತ್ತದೆ ಎಂದು ಸಚಿವ ಖಾದರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next